ಭಾರತ ಮತ್ತು ಬಾಂಗ್ಲಾದೇಶ ನಡುವೆ ಪ್ರಸ್ತುತ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಆ ಬಳಿಕ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಅಕ್ಟೋಬರ್ 6 ರಿಂದ ಆರಂಭವಾಗಲಿದೆ. ಈ ಸರಣಿಗೆ ಶನಿವಾರದಂದು 15 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿತ್ತು. ಇದೀಗ ಒಂದು ದಿನದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ತಂಡವನ್ನು ಸಹ ಪ್ರಕಟಿಸಿದೆ. ಅದರಂತೆ ಬಾಂಗ್ಲಾದೇಶ ತಂಡದ ನಾಯಕತ್ವವನ್ನು ನಜ್ಮುಲ್ ಹೊಸೈನ್ ಶಾಂಟೊ ಅವರು ನಿರ್ವಹಿಸಲಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಿಂದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ನಿವೃತ್ತಿಯಾದ ಕಾರಣ ಅವರ ಸ್ಥಾನವನ್ನು ತುಂಬಲು ಸ್ಪಿನ್ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಮೇಲೆ ಹೇಳಿದಂತೆ ಬಾಂಗ್ಲಾದೇಶ ಹಾಗೂ ಟೀಂ ಇಂಡಿಯಾ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಎರಡನೇ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದ್ದು, ಮಳೆಯಿಂದಾಗಿ ಪಂದ್ಯದ ಎರಡನೇ ಮತ್ತು ಮೂರನೇ ದಿನದ ಆಟವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಎರಡನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳಿವೆ. ಆ ಬಳಿಕ ಉಭಯ ತಂಡಗಳ ನಡುವೆ ಅಕ್ಟೋಬರ್ 6 ರಿಂದ 12ರವರೆಗೆ ಮೂರು ಪಂದ್ಯಗಳ ಟಿ20 ಸರಣಿಯ ನಡೆಯಲ್ಲಿದೆ.
2022ರ ಡಿಸೆಂಬರ್‌ನಲ್ಲಿ ಭಾರತ ವಿರುದ್ಧದ ಏಕದಿನ ಸರಣಿ ಮತ್ತು ಕೆಲವು ವಾರಗಳ ಹಿಂದೆ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ಗೆಲುವಿನ ಹೀರೋ ಆಗಿದ್ದ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್, ಕಳೆದ ಒಂದು ವರ್ಷದಿಂದ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ಟಿ20 ವಿಶ್ವಕಪ್‌ಗೂ ಅವರು ಆಯ್ಕೆಯಾಗಿರಲಿಲ್ಲ. ಆದರೆ ಈಗ ಮಂಡಳಿಯು ಅವರಿಗೆ ಮತ್ತೆ ಅವಕಾಶ ನೀಡಿದ್ದು, ಜುಲೈ 2023 ರ ನಂತರ ಮೆಹದಿ ಹಸನ್ ಚುಟುಕು ಮಾದರಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ವಾಸ್ತವವಾಗಿ ಮೀರಜ್ ವಾಪಸಾತಿಗೆ ಕಾರಣ ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ 4 ದಿನಗಳ ಹಿಂದೆಯಷ್ಟೇ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಭಾರತ ವಿರುದ್ಧದ ಕಾನ್ಪುರ ಟೆಸ್ಟ್‌ಗೆ ಮುನ್ನ, ಶಕೀಬ್ ಅವರು ಇನ್ನು ಮುಂದೆ ಚುಟುಕು ಮಾದರಿಯಲ್ಲಿ ಆಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡಕ್ಕೆ ಶಕೀಬ್ ಸ್ಥಾನ ತುಂಬಲು ಅನುಭವಿ ಆಲ್ ರೌಂಡರ್ ಅಗತ್ಯವಿದ್ದು, ಮೀರಜ್ ಮೇಲೆ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ, ಅಗ್ರ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಮಿರಾಜ್ರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಟಿ20 ವಿಶ್ವಕಪ್‌ನ ಭಾಗವಾಗಿದ್ದ ಬ್ಯಾಟ್ಸ್‌ಮನ್ ಸೌಮ್ಯ ಸರ್ಕಾರ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಮತ್ತೊಂದೆಡೆ, ಪರ್ವೇಜ್ ಹೊಸೈನ್ ಎಮಾನ್ ಮತ್ತು ರಕಿಬುಲ್ ಹಸನ್ ಕೂಡ ತಂಡಕ್ಕೆ ಮರಳಿದ್ದಾರೆ.
ಬಾಂಗ್ಲಾದೇಶ ಟಿ20 ತಂಡ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಂಜಿದ್ ಹಸನ್ ತಮೀಮ್, ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯ್, ಮಹ್ಮದ್ ಉಲ್ಲಾ, ಲಿಟ್ಟನ್ ಕುಮರ್ ದಾಸ್, ಜೇಕರ್ ಅಲಿ ಅನಿಕ್, ಮೆಹಿದಿ ಹಸನ್ ಮಿರಾಜ್, ಶಾಕ್ ಮಹೇದಿ ಹಸನ್, ರಿಶಾದ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್, ರಕಿಬುಲ್ ಹಸನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Sun, 29 September 24