ENG vs AUS: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಬೀಗಿದ ಆಸ್ಟ್ರೇಲಿಯಾ
Australia vs England: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ಇದಾದ ಬಳಿಕ ಕಂಬ್ಯಾಕ್ ಮಾಡಿದ ಇಂಗ್ಲೆಂಡ್ ಬ್ಯಾಕ್ ಟು ಬ್ಯಾಕ್ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದರು. ಇನ್ನು ಅಂತಿಮ ಪಂದ್ಯದಲ್ಲಿ ವರುಣನ ಕೃಪೆಯಿಂದ ವಿಜಯಲಕ್ಷ್ಮಿ ಆಸೀಸ್ ಪಾಲಿಗೆ ಒಲಿದಿದೆ.
ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಡಿಎಲ್ಎಸ್ ನಿಯಮದಡಿಯಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-2 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ಬೆನ್ ಡಕೆಟ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್‌ಗೆ 58 ರನ್ ಪೇರಿಸಿದ ಬಳಿಕ ಫಿಲ್ ಸಾಲ್ಟ್ ಔಟಾದರು. ಇದರ ಬೆನ್ನಲ್ಲೇ ವಿಲ್ ಜಾಕ್ಸ್ (೦) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಬೆನ್ ಡಕೆಟ್ ಆಸೀಸ್ ಬೌಲರ್‌ಗಳ ಬೆಂಡೆತ್ತಿದ್ದರು.
ನಾಯಕ ಹ್ಯಾರಿ ಬ್ರೂಕ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಬೆನ್ ಡಕೆಟ್ 91 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಫೋರ್ ಗಳೊಂದಿಗೆ 107 ರನ್ ಚಚ್ಚಿದರು. ಇನ್ನು ಸ್ಪೋಟಕ ಇನಿಂಗ್ಸ್ ಆಡಿದ ಬ್ರೂಕ್ 7 ಸಿಕ್ಸ್ ಹಾಗೂ 3 ಫೋರ್ ಒಳಗೊಂಡಂತೆ ಕೇವಲ 52 ಎಸೆತಗಳಲ್ಲಿ 72 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು 49.2 ಓವರ್‌ಗಳಲ್ಲಿ 309 ರನ್ ಗಳಿಸಿ ಆಲೌಟ್ ಆಯಿತು.
ಆಸೀಸ್ ಪಾಲಿಗೆ ವರುಣನ ಕೃಪೆ:
310 ರನ್ ಗಳ ಕಠಿಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಮ್ಯಾಥ್ಯೂ ಶಾರ್ಟ್ ಹಾಗೂ ಟ್ರಾವಿಸ್ ಹೆಡ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿ ಕೇವಲ 7 ಓವರ್‌ಗಳಲ್ಲಿ 78 ರನ್ ಚಚ್ಚಿದ್ದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಹೆಡ್ (31) ಔಟಾದರು. ಇನ್ನು ಮ್ಯಾಥ್ಯೂ ಶಾರ್ಟ್ ಕೇವಲ 30 ಎಸೆತಗಳಲ್ಲಿ 4 ಸಿಕ್ಸ್ ಮತ್ತು 7 ಫೋರ್ ಗಳೊಂದಿ 58 ರನ್ ಸಿಡಿಸಿದರು.
ಆ ಬಳಿಕ ಬಂದ ಸ್ಟೀವ್ ಸ್ಮಿತ್ 36 ರನ್ ಬಾರಿಸಿದರೆ, ಜೋಶ್ ಇಂಗ್ಲಿಸ್ 28 ರನ್ ಕಲೆಹಾಕಿದರು. ಅಲ್ಲದೆ 20.4 ಓವರ್‌ಗಳಲ್ಲಿ ಆಸ್ಟ್ರೇಲಿಯಾ ತಂಡವು 2 ವಿಕೆಟ್‌ಗಳ ನಷ್ಟದೊಂದಿಗೆ 165 ರನ್ ಕಲೆಹಾಕಿತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಆ ಬಳಿಕ ಮಳೆ ನಿಲ್ಲದ ಕಾರಣ ಫಲಿತಾಂಶ ನಿರ್ಣಯಕ್ಕಾಗಿ ಡಕ್ ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಯಿತು. ಈ ವೇಳೆ ಇಂಗ್ಲೆಂಡ್ ತಂಡಕ್ಕಿಂತ 49 ರನ್ ಗಳ ಮುಂದಿದ್ದ ಆಸ್ಟ್ರೇಲಿಯಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-2 ಅಂತರದಿಂದ ಗೆದ್ದುಕೊಂಡಿದೆ.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ , ಬೆನ್ ಡಕೆಟ್ , ವಿಲ್ ಜ್ಯಾಕ್ಸ್ , ಹ್ಯಾರಿ ಬ್ರೂಕ್ (ನಾಯಕ) , ಜಾಮಿ ಸ್ಮಿತ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್ಸ್ಟೋನ್ , ಜಾಕೋಬ್ ಬೆಥೆಲ್ , ಬ್ರೈಡನ್ ಕಾರ್ಸೆ , ಮ್ಯಾಥ್ಯೂ ಪಾಟ್ಸ್ , ಓಲಿ ಸ್ಟೋನ್ , ಆದಿಲ್ ರಶೀದ್.
ಇದನ್ನೂ ಓದಿ: IPL 2025: ಏನಿದು RTM ಆಯ್ಕೆ: ಇದನ್ನು ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಥ್ಯೂ ಶಾರ್ಟ್ , ಸ್ಟೀವನ್ ಸ್ಮಿತ್ (ನಾಯಕ) , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್ , ಆರೋನ್ ಹಾರ್ಡಿ , ಕೂಪರ್ ಕೊನೊಲಿ , ಮಿಚೆಲ್ ಸ್ಟಾರ್ಕ್ , ಆ್ಯಡಂ ಝಂಪಾ , ಜೋಶ್ ಹ್ಯಾಝಲ್ವುಡ್.
Published On - 7:47 am, Mon, 30 September 24