IND vs BAN: ರೋಹಿತ್ ಎಡವಟ್ಟು; ಭಾರತದ ಸೋಲಿಗೆ ಕಾರಣವಾಯ್ತು ಅದೊಂದು ಓವರ್..!

| Updated By: ಪೃಥ್ವಿಶಂಕರ

Updated on: Dec 08, 2022 | 11:47 AM

IND vs BAN: ಒಂದೇ ವೇಳೆ 47ನೇ ಓವರ್​ನಲ್ಲಿ ರೋಹಿತ್ ಸಿಂಗಲ್ ಕದ್ದು, 48 ನೇ ಓವರ್​ನಲ್ಲಿ ಸ್ಟ್ರೈಕ್ ತೆಗೆದುಕೊಂಡಿದ್ದರೆ ಈ ಓವರ್‌ನಲ್ಲಿ ಅವರು ಒಂದಷ್ಟು ಬೌಂಡರಿ ಬಾರಿಸಬಹುದಿತ್ತು.

IND vs BAN: ರೋಹಿತ್ ಎಡವಟ್ಟು; ಭಾರತದ ಸೋಲಿಗೆ ಕಾರಣವಾಯ್ತು ಅದೊಂದು ಓವರ್..!
ರೋಹಿತ್ ಶರ್ಮಾ
Follow us on

ಬಾಂಗ್ಲಾ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ. ಈ ಕಡೆ ಅತಿಥೇಯರು ಬಲಿಷ್ಠ ತಂಡವನ್ನು ಮಣಿಸಿದ ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಪಂದ್ಯದಲ್ಲೂ ಮೊದಲ ಪಂದ್ಯದಂತೆ ಭಾರತ ತಂಡದ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿತು. ಇದರ ಫಲವಾಗಿ ಸ್ವತಃ ತನ್ನ ಕೈಯಿಂದಲೇ ಟೀಂ ಇಂಡಿಯಾ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಎದುರಿಸಬೇಕಾಯಿತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದ ನಾಯಕ ರೋಹಿತ್ (Rohit Sharma ) ತಾನು ಮಾಡಿದ ತಪ್ಪಿನಿಂದಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ವಾಸ್ತವವಾಗಿ ಟೀಂ ಇಂಡಿಯಾ ಇನ್ನಿಂಗ್ಸ್​ನ 48ನೇ ಓವರ್ ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿತು. ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಮಾಡಿದ ಮ್ಯಾಜಿಕ್ ಕೊನೆಯ ಹಂತದಲ್ಲಿ ತಂಡಕ್ಕೆ ಗೆಲುವಿನ ಕಾಣಿಕೆ ತಂದುಕೊಟ್ಟರು.

ಅಂತಿಮ ಹಂತದಲ್ಲಿ ಭಾರತದ ಗೆಲುವಿಗೆ 18 ಎಸೆತಗಳಲ್ಲಿ 40 ರನ್‌ಗಳ ಅಗತ್ಯವಿತ್ತು. ಈ ವೇಳೆ ಇಂಜುರಿ ನಡುವೆಯೂ ಬ್ಯಾಟಿಂಗ್​ಗೆ ಇಳಿದಿದ್ದ ರೋಹಿತ್, ಬಾಂಗ್ಲಾ ಬೌಲರ್​ಗಳನ್ನು ಸರಿಯಾಗಿಯೇ ಬೆಂಡೆತ್ತಲು ಆರಂಭಿಸಿದ್ದರು. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಭಾರತಕ್ಕೆ ಗೆಲುವು ಪಕ್ಕಾ ಅಂತಲೇ ಅಂದುಕೊಂಡಿದ್ದರು. ಆದರೆ ರೆಹಮಾನ್ ಬೌಲ್ ಮಾಡಿದ ಆ ಒಂದು ಓವರ್ ಬಾಂಗ್ಲಾದೇಶದ ಮುಖದಲ್ಲಿ ನಗು ತರಿಸಿತು. ಈ ಕಡೆ ನಾಯಕ ರೋಹಿತ್ ಮಾಡಿದ ಎಡವಟ್ಟು ಕೂಡ ತಂಡದ ಸೋಲಿಗೆ ಕಾರಣವಾಯಿತು.

ರೋಹಿತ್ ಮಾಡಿದ ತಪ್ಪಿಗೆ ಸೋಲಿನ ಬೆಲೆ ತೆತ್ತ ಭಾರತ

ವಾಸ್ತವವಾಗಿ, ಭಾರತದ ಇನ್ನಿಂಗ್ಸ್​ನ 47ನೇ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ರನ್ ತೆಗೆದುಕೊಳ್ಳಲಿಲ್ಲ. ಹೀಗಾಗಿ ಮುಂದಿನ ಓವರ್‌ನಲ್ಲಿ ಅಂದರೆ 48 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್‌ಗೆ ಸ್ಟ್ರೈಕ್​ಗೆ ಬರಬೇಕಾಯಿತು. ಇದನ್ನೇ ಲಾಭ ಮಾಡಿಕೊಂಡ ಬಾಂಗ್ಲಾ ತಂಡ ರೆಹಮಾನ್​ರನ್ನು ಬಾಲಿಂಗ್​ಗೆ ಇಳಿಸಿತು. ಈ ಎಡಗೈ ಬೌಲರ್ ರೆಹಮಾನ್, ಸಿರಾಜ್​ಗೆ ಚಳ್ಳೆ ಹಣ್ಣು ತಿನ್ನಿಸಿ ಪೂರ ಓವರ್​ನಲ್ಲಿ ಒಂದೇ ಒಂದು ರನ್ ಬಿಟ್ಟುಕೊಡಲಿಲ್ಲ. ಈ ಓವರ್ ಮೇಡನ್ ಆದ್ದರಿಂದ ನಾಯಕ ರೋಹಿತ್​ ಮೇಲೆ ಒತ್ತಡ ಮತ್ತಷ್ಟು ಹೆಚ್ಚಿತು.

ಇದನ್ನೂ ಓದಿ: IND vs BAN: ಟೆಸ್ಟ್ ಸರಣಿಗೂ ರೋಹಿತ್ ಅನುಮಾನ..? ಕನ್ನಡಿಗ ರಾಹುಲ್​ಗೆ ಟೆಸ್ಟ್ ನಾಯಕತ್ವ

ಒಂದೇ ವೇಳೆ 47ನೇ ಓವರ್​ನಲ್ಲಿ ರೋಹಿತ್ ಸಿಂಗಲ್ ಕದ್ದು, 48 ನೇ ಓವರ್​ನಲ್ಲಿ ಸ್ಟ್ರೈಕ್ ತೆಗೆದುಕೊಂಡಿದ್ದರೆ ಈ ಓವರ್‌ನಲ್ಲಿ ಅವರು ಒಂದಷ್ಟು ಬೌಂಡರಿ ಬಾರಿಸಬಹುದಿತ್ತು. ಆದರೆ 48ನೇ ಓವರ್​ನಲ್ಲಿ ರನ್​ಗಳ ಕೊರತೆಯಿಂದಾಗಿ ರೋಹಿತ್ ಮೇಲಿನ ಒತ್ತಡವೂ ಹೆಚ್ಚಾಯಿತು. ಭಾರತ ತಂಡದ ನಾಯಕ ತಮ್ಮ ತಂಡವನ್ನು ಗೆಲ್ಲಿಸಲು ಕೊನೆಯವರೆಗೂ ಹೋರಾಡಿದರಾದರೂ ಯಶಸ್ವಿಯಾಗಲಿಲ್ಲ.

ತವರಿನಲ್ಲಿ ಎರಡನೇ ಬಾರಿಗೆ ಸರಣಿ ಗೆದ್ದ ಬಾಂಗ್ಲಾ

ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಬಾಂಗ್ಲಾದೇಶ ತಂಡ ತವರಿನಲ್ಲಿ ಭಾರತದ ವಿರುದ್ಧ ಸತತ ಎರಡನೇ ಸರಣಿಯನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ ಭಾರತ ತಂಡ 2015ರಲ್ಲಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದ ಸೋಲನುಭವಿಸಬೇಕಾಯಿತು. ಪ್ರಸಕ್ತ ಸರಣಿಯ ಮೂರನೇ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ತನ್ನ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.

ಬಾಂಗ್ಲಾದೇಶ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತಕ್ಕಿಂತ ದುರ್ಬಲ ತಂಡವೆಂದು ಪರಿಗಣಿಸಲಾಗಿದೆ, ಆದರೆ ಈ ತಂಡವು ತವರಿನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದೆ. ಬಾಂಗ್ಲಾದೇಶ ತಂಡ ತವರಿನಲ್ಲಿ ಸತತವಾಗಿ ಸರಣಿ ಗೆಲ್ಲುತ್ತಲೇ ಬಂದಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:46 am, Thu, 8 December 22