ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೇಲೆ ಮಳೆಯ ಕರಿ ಛಾಯೆ ಆವರಿಸಿದೆ. ಮಳೆಯಿಂದಾಗಿ ಎರಡನೇ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತು. ಇದೀಗ ಮೂರನೇ ದಿನದಾಟವೂ ಕೂಡ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಪಂದ್ಯ ಡ್ರಾ ಆಗುವ ಭೀತಿ ಎದುರಾಗಿದೆ. ಪಂದ್ಯದ ಮೂರನೇ ದಿನವಾದು ಇಂದು ಮಳೆ ಸುರಿಯದಿದ್ದರೂ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಮೈದಾನದಲ್ಲಿ ನೀರು ನಿಂತಿತ್ತು. ಹೀಗಾಗಿ ಮೈದಾನದ ಸಿಬ್ಬಂದಿಗಳು ಮೈದಾನವನ್ನು ಒಣಗಿಸಲು ಶತಪ್ರಯತ್ನ ನಡೆಸಿದರು. ಆದಾಗ್ಯೂ ಪಂದ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ 10 ಗಂಟೆಗೆ ಮೊದಲ ತಪಾಸಣೆ ನಡೆಸಲಾಯಿತು. ಆಗಲೂ ಅಂಪೈರ್‌ಗಳು ಪಂದ್ಯ ಆರಂಭಿಸಲು ಮೈದಾನ ಸಿದ್ದವಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಆ ಬಳಿಕ ಮಧ್ಯಾಹ್ನ 12 ಗಂಟೆಗೆ ಎರಡನೇ ತಪಾಸಣೆ ನಡೆಯಿತು. ಮೂರನೇ ಮತ್ತು ಕೊನೆಯ ತಪಾಸಣೆ ಮಧ್ಯಾಹ್ನ 2 ಗಂಟೆಗೆ ನಡೆಯಿತು. ನಂತರ ಅಂಪೈರ್‌ಗಳು ಮೂರನೇ ದಿನದ ಆಟವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಮೊದಲ ದಿನವೂ ಮಳೆಯಿಂದಾಗಿ ಪಂದ್ಯ ಬೇಗನೇ ಮುಕ್ತಾಯಗೊಂಡಿತ್ತು. ಮೊದಲ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿದೆ. ಭಾರತದ ಪರ ಆಕಾಶದೀಪ್ 2 ಹಾಗೂ ಆರ್ ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ. ಪಂದ್ಯದ ಮೊದಲ ದಿನದಾಟದ ಮೊದಲ ಸೆಷನ್ವರೆಗೂ ವರುಣ ರಾಯ ಪಂದ್ಯಕ್ಕೆ ಯಾವುದೇ ಅಡ್ಡಿಪಡಿಸಲಿಲ್ಲ. ಆದರೆ ಎರಡನೇ ಸೆಷನ್ ಆರಂಭವಾದಂತೆ ಮಳೆ ಕೂಡ ಬೀಳಲಾರಂಭಿಸಿತು. ಅಲ್ಲದೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಅವಧಿಗೂ ಮುನ್ನವೇ ನಿಲ್ಲಿಸಲು ತೀರ್ಮಾನಿಸಲಾಯಿತು. ದಿನದಾಟ ಅಂತ್ಯದ ವೇಳೆಗೆ ಇಡೀ ದಿನ ಕೇವಲ 35 ಓವರ್ಗಳನ್ನು ಮಾತ್ರ ಆಡಲು ಸಾಧ್ಯವಾಯಿತು.
ಆದರೆ ಎರಡನೇ ದಿನ ವರುಣ ರಾಯ ಇದಕ್ಕೂ ಅವಕಾಶ ನೀಡಲಿಲ್ಲ. ಇಡೀ ದಿನ ಒಂದೇ ಒಂದು ಎಸೆತವನ್ನು ಎಸೆಯಲು ಸಾಧ್ಯವಾಗಲಿಲ್ಲ. ಇಡೀ ದಿನ ಸುರಿದ ಧಾರಕಾರ ಮಳೆಯಿಂದಾಗಿ ಟೀಂ ಇಂಡಿಯಾ ಆಟಗಾರರು ಊಟದ ವಿರಾಮದ ವೇಳೆಗೆ ಹೋಟೆಲ್ ರೂಮ್ಗೆ ವಾಪಸ್ಸಾಗಿದ್ದರು. ಆ ಬಳಿಕವೂ ಮಳೆ ನಿಂತಿರಲಿಲ್ಲ. ಆದರೆ ಇಂದು ಅಂದರೆ ಮೂರನೇ ದಿನದಂದು ಮಳೆ ಕೊಂಚ ಬ್ರೇಕ್ ಪಡೆದಿತ್ತು. ಹೀಗಾಗಿ ಮೈದಾನವನ್ನು ಒಣಗಿಸುವ ಕೆಲಸದಲ್ಲಿ ಸಿಬ್ಬಂದಿಗಳು ನಿರತರಾಗಿದ್ದರು. ಆದಾಗ್ಯೂ ಪಂದ್ಯ ಆರಂಭಿಸಲು ಮೈದಾನ ಸಿದ್ದವಿಲ್ಲ ಎಂಬ ತೀರ್ಮಾನಕ್ಕೆ ಅಂಪೈರ್‌ಗಳು ಬಂದ ಕಾರಣದಿಂದಾಗಿ ಮೂರನೇ ದಿನದಾಟವನ್ನು ರದ್ದುಗೊಳಿಸಲಾಗಿದೆ.
ಇದೀಗ ಪಂದ್ಯದಲ್ಲಿ ಇನ್ನು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿವೆ. ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿಲ್ಲ. ಹೀಗಾಗಿ ಉಳಿದಿರುವ ಎರಡು ದಿನ ಆಟ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಒಂದು ವೇಳೆ ಆಟ ನಡೆದರೂ ಈ ಪಂದ್ಯದಲ್ಲಿ ನಿರ್ದೀಷ್ಟ ಫಲಿತಾಂಶವನ್ನು ನಿರೀಕ್ಷಿಸಲಾಗದು. ಏಕೆಂದರೆ ಉಭಯ ತಂಡಗಳ ನಡುವೆ ಇದುವರೆಗೆ ಕೇವಲ 1 ಇನ್ನಿಂಗ್ಸ್ ಮಾತ್ರ ಮುಗಿದಿದೆ. ಇನ್ನು ಮೂರು ಇನ್ನಿಂಗ್ಸ್ಗಳು ಇನ್ನ ಉಳಿದಿರುವ 2 ದಿನಗಳಲ್ಲಿ ಪೂರ್ಣಗೊಳ್ಳುವುದು ಅಸಾಧ್ಯದ ಮಾತು. ಹೀಗಾಗಿ ಈ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಕಾನ್ಪುರ ಟೆಸ್ಟ್ ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳ ನಡುವೆ ತಲಾ 4 ಅಂಕಗಳು ಹಂಚಿಕೆಯಾಗಲಿವೆ. ಇದರಿಂದಾಗಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಾಯಿಂಟ್ ಪಟ್ಟಿಯಲ್ಲಿ ಕೊಂಚ ಹಿನ್ನಡೆ ಅನುಭವಿಸಲಿದೆ. ಬಾಂಗ್ಲಾದೇಶ ತಂಡ ಫೈನಲ್ ರೇಸ್ನಿಂದ ಹೊರಬಿದ್ದಿರುವುದರಿಂದ ಅದಕ್ಕೆ ಯಾವುದೇ ನಷ್ಟು ಉಂಟಾಗುವುದಿಲ್ಲ. ಆದರೆ ಟೀಂ ಇಂಡಿಯಾ ಉಳಿದಿರುವ ಇನ್ನ 8 ಪಂದ್ಯಗಳಲ್ಲಿ ಕನಿಷ್ಟ 5 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Sun, 29 September 24