IND vs BAN: ರೋಹಿತ್- ಹಾರ್ದಿಕ್ ಮಾಡಿದ ತಪ್ಪಿಗೆ 154 ರನ್ ದಂಡ ತೆತ್ತ ಟೀಂ ಇಂಡಿಯಾ

|

Updated on: Feb 20, 2025 | 8:53 PM

Champions Trophy 2025: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಕಳಪೆ ಫೀಲ್ಡಿಂಗ್‌ನಿಂದಾಗಿ ಭಾರತ ತಂಡ 154 ರನ್‌ಗಳ ಭಾರಿ ದಂಡ ಪಾವತಿಸಬೇಕಾಯಿತು. ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟ ಈ ಇಬ್ಬರು ಆಟಗಾರರ ತಪ್ಪಿನಿಂದಾಗಿ ಬಾಂಗ್ಲಾದೇಶ ತಂಡ ದೊಡ್ಡ ಮೊತ್ತ ಕಲೆಹಾಕಿತು.

IND vs BAN: ರೋಹಿತ್- ಹಾರ್ದಿಕ್ ಮಾಡಿದ ತಪ್ಪಿಗೆ 154 ರನ್ ದಂಡ ತೆತ್ತ ಟೀಂ ಇಂಡಿಯಾ
ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ
Follow us on

ಕ್ರಿಕೆಟ್​ನಲ್ಲಿ ತಪ್ಪು ಮಾಡುವ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಅಥವಾ ಎದುರಾಳಿ ತಂಡ ಎಷ್ಟೇ ದುರ್ಬಲವಾಗಿದ್ದರೂ, ಪ್ರತಿಯೊಂದು ತಪ್ಪೂ ದುಬಾರಿಯಾಗಿ ಪರಿಣಮಿಸಬಹುದು. ಇದಕ್ಕೆ ಉತ್ತಮ ನಿದರ್ಶನವೆಂದರೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಇಬ್ಬರು ಅನುಭವಿಗಳು ಮಾಡಿದ ತಪ್ಪಿಗೆ ಇಡೀ ತಂಡ ಭಾರಿ ದಂಡವನ್ನು ಪಾವತಿಸಬೇಕಾಯಿತು. ಈ ತಪ್ಪನ್ನು ಮಾಡಿದವರು ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಈ ಇಬ್ಬರು ಮಾಡಿದ ತಪ್ಪಿನಿಂದಾಗಿ ಟೀಂ ಇಂಡಿಯಾ 154 ರನ್‌ಗಳ ಭಾರಿ ದಂಡವನ್ನೇ ಕಟ್ಟಬೇಕಾಯಿತು.

ಫೆಬ್ರವರಿ 20, ಗುರುವಾರ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಕಳಪೆ ಫೀಲ್ಡಿಂಗ್​ನಿಂದ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಟೀಂ ಇಂಡಿಯಾ ಪರ ದಾಳಿ ಆರಂಭಿಸಿದ ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಮೊದಲ 8 ಓವರ್‌ಗಳಲ್ಲಿ 3 ವಿಕೆಟ್ ಪಡೆದರು. ನಂತರ 9ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬಂದು ಸತತ ಎರಡು ವಿಕೆಟ್‌ಗಳನ್ನು ಪಡೆದು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದರು. ಈ ಸಮಯದವರೆಗೆ, ಬಾಂಗ್ಲಾದೇಶ ಕೇವಲ 35 ರನ್‌ಗಳನ್ನು ಗಳಿಸಿದ್ದರೆ, ತಂಡದ ಅರ್ಧದಷ್ಟು ಜನರು ಪೆವಿಲಿಯನ್‌ ಸೇರಿಕೊಂಡಿದ್ದರು.

ಸುಲಭ ಕ್ಯಾಚ್ ಬಿಟ್ಟ ರೋಹಿತ್- ಹಾರ್ದಿಕ್

ಈ ಹಂತದಲ್ಲಿ ಭಾರತ ತಂಡಕ್ಕೆ ಬಾಂಗ್ಲಾದೇಶವನ್ನು ಅತ್ಯಲ್ಪ ಮೊತ್ತಕ್ಕೆ ಔಟ್ ಮಾಡುವ ಅವಕಾಶವಿತ್ತು. ಆದರೆ ನಾಯಕ ರೋಹಿತ್ ಮಾಡಿದ ತಪ್ಪಿನಿಂದಾಗಿ ತಂಡವು ಆ ಅವಕಾಶವನ್ನು ಕಳೆದುಕೊಂಡಿತು. ವಾಸ್ತವವಾಗಿ, ಸತತ 2 ವಿಕೆಟ್ ಉರುಳಿಸಿದ್ದ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಪೂರ್ಣಗೊಳಿಸುವ ಸಮೀಪದಲ್ಲಿದ್ದರು. ಇದಕ್ಕೆ ಪೂರಕವಾಗಿ ಜೇಕರ್ ಅಲಿ ಕೂಡ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾಗೆ ಸುಲಭವಾದ ಕ್ಯಾಚ್ ನೀಡಿದರು. ಆದರೆ ನಾಯಕ ರೋಹಿತ್ ಅದನ್ನು ಕೈಬಿಟ್ಟರು. ಅಕ್ಷರ್ ಪಟೇಲ್ ಹ್ಯಾಟ್ರಿಕ್ ತಪ್ಪಿಸಿಕೊಂಡಿದ್ದು ಮಾತ್ರವಲ್ಲದೆ, ಟೀಂ ಇಂಡಿಯಾ ತಮಗೆ ಬಂದ ಅವಕಾಶವನ್ನೂ ಕಳೆದುಕೊಂಡಿತು. ಇದಾದ ನಂತರ, ತೌಹೀದ್ ಹೃದಯೋಯ್ ಜೊತೆಗೂಡಿ ಜೇಕರ್ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿದರು.

ಆದರೆ ರೋಹಿತ್ ತಪ್ಪು ಮಾಡಿದ್ದಲ್ಲದೆ, ಹಾರ್ದಿಕ್ ಕೂಡ ತಂಡವನ್ನು ನಿರಾಶೆಗೊಳಿಸಿದರು. ಇನ್ನಿಂಗ್ಸ್‌ನ 20 ನೇ ಓವರ್‌ನಲ್ಲಿ, ಕುಲ್ದೀಪ್ ಯಾದವ್ ಅವರ ಐದನೇ ಎಸೆತದಲ್ಲಿ, ತೌಹೀದ್ ನೇರವಾಗಿ ಮಿಡ್-ಆಫ್ ಕಡೆಗೆ ಶಾಟ್ ಹೊಡೆದರು. ಆದರೆ ಅಲ್ಲೇ ಇದ್ದ ಹಾರ್ದಿಕ್ ಕೈಗೆ ಬಂದ ನೇರ ಕ್ಯಾಚ್ ಅನ್ನು ಕೈಬಿಟ್ಟರು. ಆ ಸಮಯದಲ್ಲಿ ತೌಹೀದ್ ಕೇವಲ 23 ರನ್ ಗಳಿಸಿದ್ದರೆ, ಬಾಂಗ್ಲಾದೇಶದ ಸ್ಕೋರ್ ಕೇವಲ 78 ರನ್ ಆಗಿತ್ತು.

ಟೀಂ ಇಂಡಿಯಾಗೆ ಶಿಕ್ಷೆ

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾ ನೀಡಿದ ಜೀವದಾನವನ್ನು ಸದುಪಯೋಗಪಡಿಸಿಕೊಂಡು 154 ರನ್‌ಗಳ ಅದ್ಭುತ ಜೊತೆಯಾಟ ನಡೆಸುವುದಲ್ಲದೆ ತಂಡವನ್ನು 228 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ರೋಹಿತ್ ಕ್ಯಾಚ್ ಕೈಬಿಟ್ಟ ಜಾಕಿರ್ ಅಲಿ 68 ರನ್ ಗಳಿಸಿದರೆ, ತೌಹೀದ್ 100 ರನ್ ಗಳಿಸಿ, ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕ ಬಾರಿಸಿದರು.

ಈ 154 ರನ್‌ಗಳೊಂದಿಗೆ, ಜೇಕರ್ ಅಲಿ ಮತ್ತು ತೌಹೀದ್ ಹೃದಯೋಯ್ ಚಾಂಪಿಯನ್ಸ್ ಟ್ರೋಫಿಯ 19 ವರ್ಷಗಳ ಹಳೆಯ ದಾಖಲೆಯನ್ನು ಸಹ ಮುರಿದರು. ಇದು ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಆರನೇ ಅಥವಾ ನಂತರದ ವಿಕೆಟ್‌ಗೆ ದಾಖಲಾದ ಅತ್ಯಧಿಕ ಪಾಲುದಾರಿಕೆಗೆ ಹೊಸ ದಾಖಲೆಯಾಗಿದೆ. ಈ ಇಬ್ಬರೂ ಆಟಗಾರರು 2006 ರಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ ಮತ್ತು ಜಸ್ಟಿನ್ ಕ್ಯಾಂಪ್ ಮಾಡಿದ 131 ರನ್‌ಗಳ ಜೊತೆಯಾಟದ ದಾಖಲೆಯನ್ನು ಮುರಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ