ಟಿ20 ವಿಶ್ವಕಪ್ನಿಂದ (T20 World Cup) ಬರಿಗೈಯಲ್ಲಿ ವಾಪಸ್ಸಾಗಿದ್ದ ಟೀಂ ಇಂಡಿಯಾದ (Team India) ಮುಂದೆ ಮುಂದಿನ ವರ್ಷದ ಏಕದಿನ ವಿಶ್ವಕಪ್ ಹೊಸ ಸವಾಲಾಗಿ ನಿಂತಿದೆ. 2023 ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಆತಿಥ್ಯವನ್ನು ಭಾರತವೇ ವಹಿಸಿಕೊಂಡಿರುವುದರಿಂದ ಪ್ರಶಸ್ತಿಯ ಬರವನ್ನು ತಾಯ್ನಾಡಿನಲ್ಲಿ ಕೊನೆಗೊಳಿಸುವ ಉತ್ಸಾಹದಲ್ಲಿ ಟೀಂ ಇಂಡಿಯಾ ಇದೆ. ವಿಶ್ವಕಪ್‌ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯವಿದ್ದು, ಟೀಂ ಇಂಡಿಯಾ ಪಾಳಾಯದಲ್ಲಿ ಈ ಟೂರ್ನಿಗೆ ತಯಾರಿ ಶುರುವಾಗಿದೆ. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಅದರ ಆರಂಭವೆಂದು ಪರಿಗಣಿಸಲಾಗುತ್ತಿದೆ. ಆದರೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ತಲೆಯಲ್ಲಿ ಬೇರೆಯದ್ದೆ ಕಥೆ ಓಡುತ್ತಿದ್ದು, ಸದ್ಯ ನಾನು ಅಷ್ಟು ದೂರ ಯೋಚಿಸುತ್ತಿಲ್ಲ ಎಂದಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಡಿಸೆಂಬರ್ 4 ಭಾನುವಾರದಿಂದ ಆರಂಭವಾಗಲಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ವಿರಾಮ ಪಡೆದಿದ್ದ ರೋಹಿತ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಪ್ರಮುಖ ಹೆಸರುಗಳು ಈ ಸರಣಿಯಿಂದ ಮರಳುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈಗ ಭಾರತ ತಂಡವು ತನ್ನ ಪ್ರಮುಖ ಆಟಗಾರರೊಂದಿಗೆ ಪ್ರತಿ ಸರಣಿಯನ್ನು ಆಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರಿಂದ ವಿಶ್ವಕಪ್‌ಗೆ ಸಿದ್ಧತೆಯನ್ನು ಉತ್ತಮವಾಗಿ ಮಾಡಬಹುದಾಗಿದೆ.
ಇದನ್ನೂ ಓದಿ: IND vs BAN: ಮೊದಲ ಏಕದಿನ: ವಿರಾಟ್ ಕೊಹ್ಲಿ ಜೊತೆ ರಜತ್ ಪಟಿದಾರ್ ಭರ್ಜರಿ ಅಭ್ಯಾಸ: ಫೋಟೋ ನೋಡಿ
ವಿಶ್ವಕಪ್ ತುಂಬಾ ದೂರ ಇದೆ
ಡಿಸೆಂಬರ್ 3 ರ ಶನಿವಾರದಂದು ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್, ಏಕದಿನ ವಿಶ್ವಕಪ್ ಬಗ್ಗೆ ಯೋಚಿಸಲು ಇನ್ನು ಸಾಕಷ್ಟು ಸಮಯವಿದೆ. ವಿಶ್ವಕಪ್‌ಗೆ ಇನ್ನೂ ಎಂಟು-ಒಂಬತ್ತು ತಿಂಗಳುಗಳಿವೆ. ಹೀಗಾಗಿ ಅದಕ್ಕೆ ನಾವು ಇಷ್ಟು ಬೇಗ ಯೋಚಿಸಲು ಸಾಧ್ಯವಿಲ್ಲ. ನಾವು ತಂಡವಾಗಿ ಏನು ಮಾಡಬೇಕು ಎಂಬುದರ ಮೇಲೆ ಗಮನ ಹರಿಸಿದ್ದೇವೆ.
ಯಾರಿಗೆ ಅವಕಾಶ ನೀಡಬೇಕು ಎಂಬುದು ನನಗೆ ಮತ್ತು ಕೋಚ್‌ಗೆ ತಿಳಿದಿದೆ
ಅಲ್ಲದೆ ವಿಶ್ವಕಪ್ ಬಗ್ಗೆ ಈಗಾಗಲೇ ಯೋಚಿಸುವಂತಹ ಆತುರದಿಂದ ಯಾವುದೇ ಪ್ರಯೋಜನವಿಲ್ಲ. ಆದರೆ ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂಬುದು ತಂಡದ ಚಿಂತಕರ ಚಾವಡಿಗೆ ತಿಳಿದಿದೆ ಎಂದು ಅವರು ಸ್ಪಷ್ಟಪಡಿಸಿದರು. ರೋಹಿತ್ ಶರ್ಮಾ ಪ್ರಕಾರ, ನಾವು ಅನೇಕ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸದಿರುವುದು ಮುಖ್ಯವಾಗಿದೆ. ಅಲ್ಲದೆ ಯಾವ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಬೇಕು ಎಂಬುದು ನನಗೆ ಮತ್ತು ಕೋಚ್‌ಗೆ ತಿಳಿದಿದೆ. ವಿಶ್ವಕಪ್ ಹತ್ತಿರ ಬಂದಾಗ ಅದರಲ್ಲಿ ವೇಗ ತೋರಿಸುತ್ತೇವೆ ಎಂದು ರೋಹಿತ್ ಹೇಳಿದ್ದಾರೆ.
ಮೂರು ಪಂದ್ಯಗಳ ಸರಣಿಯ ಎಲ್ಲಾ ಪಂದ್ಯಗಳು ಮೀರ್‌ಪುರದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಪಂದ್ಯ ಡಿಸೆಂಬರ್ 4 ರಂದು, ಮುಂದಿನ ಎರಡು ಪಂದ್ಯಗಳು ಡಿಸೆಂಬರ್ 7 ಮತ್ತು ಡಿಸೆಂಬರ್ 10 ರಂದು ನಡೆಯಲಿದೆ. ಇದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯೂ ನಡೆಯಲಿದ್ದು, ಡಿಸೆಂಬರ್ 14ರಿಂದ ಆರಂಭವಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ