IND vs ENG: ಗೆದ್ದ ಬಳಿಕ ಗೌತಮ್ ಗಂಭೀರ್​ನ ಹೊಗಳಿದ ಸೂರ್ಯಕುಮಾರ್ ಯಾದವ್

|

Updated on: Jan 23, 2025 | 9:04 AM

IND vs ENG 1st T20: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿನ ಗೆಲುವಿನ ಶ್ರೇಯಸ್ಸನ್ನು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಅವರಿಗೆ ನೀಡಿದ್ದಾರೆ. ಗಂಭೀರ್ ಅವರು ನೀಡಿರುವ ಸ್ವಾತಂತ್ರ್ಯದಿಂದಾಗಿ ನಾವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

IND vs ENG: ಗೆದ್ದ ಬಳಿಕ ಗೌತಮ್ ಗಂಭೀರ್​ನ ಹೊಗಳಿದ ಸೂರ್ಯಕುಮಾರ್ ಯಾದವ್
Gautam Gambhir -Suryakumar Yadav
Follow us on

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಂಘಿಕ ಪ್ರದರ್ಶನ ನೀಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಟೀಮ್ ಇಂಡಿಯಾ ಬೌಲರ್​ಗಳ ಸಂಘಟಿತ ದಾಳಿ ಮುಂದೆ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ತಂಡವು ಕೇವಲ 83 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ ಜೋಸ್ ಬಟ್ಲರ್ (68) ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 132 ರನ್​ ಕಲೆಹಾಕಿತು.

133 ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 79 ರನ್ ಚಚ್ಚಿದರು. ಮತ್ತೊಂದೆಡೆ ಸಂಜು ಸ್ಯಾಮ್ಸನ್ 26 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ ಕೇವಲ 12.5 ಓವರ್​​ಗಳಲ್ಲಿ 133 ರನ್​ಗಳ ಗುರಿ ಬೆನ್ನತ್ತಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಂಡದ ಸಾಂಘಿಕ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆಟಗಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವ ಗೌತಮ್ ಗಂಭೀರ್ ಅವರ ನಡೆಯನ್ನು ಹಾಡಿ ಹೊಗಳಿದಿದ್ದಾರೆ.

ಟಾಸ್ ಗೆದ್ದಾಗಲೇ, ನಮ್ಮ ಆಟಗಾರರಲ್ಲಿ ಎನರ್ಜಿ ಕಾಣಿಸಿತು. ಏಕೆಂದರೆ ಸೆಕೆಂಡ್ ಇನಿಂಗ್ಸ್ ವೇಳೆ ಇಬ್ಬನಿ ಇರುವ ಸೂಚನೆಯಿದ್ದ ಕಾರಣ ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕವಾಗಿತ್ತು. ಟಾಸ್ ಗೆಲುವಿನ ಸಂಪೂರ್ಣ ಲಾಭ ಪಡೆದ ಟೀಮ್ ಇಂಡಿಯಾ ಬೌಲರ್​ಗಳು ಅತ್ಯುತ್ತಮ ದಾಳಿ ಸಂಘಟಿಸಿದರು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಹೊಸ ಬಾಲ್​ನಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಬೌಲಿಂಗ್ ಮಾಡಿದರು. ಇನ್ನು ಹರಿಹರೆಯದ ಅರ್ಷದೀಪ್ ಸಿಂಗ್ ಹೆಚ್ಚುವರಿ ಜವಾಬ್ದಾರಿಯೊಂದಿಗೆ ದಾಳಿ ಸಂಘಟಿಸುತ್ತಿರುವುದು ಖುಷಿಯ ವಿಚಾರ. ಹಾಗೆಯೇ ವರುಣ್ ಚಕ್ರವರ್ತಿಗೆ ತಾನೇನು ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಹೀಗಾಗಿ ನಾಯಕನಾಗಿ ನನ್ನ ಕಾರ್ಯವು ಸುಲಭ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಹೀಗಾಗಿ ನಮ್ಮ ಜವಾಬ್ದಾರಿಗೆ ತಕ್ಕಂತೆ ಆಡಲು ಸಾಧ್ಯವಾಗುತ್ತಿದೆ. ಅಲ್ಲದೆ ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನುಕೂಲವಾಗುತ್ತಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: ವೇಗ ಅತೀ ವೇಗ… ಭರ್ಜರಿ ದಾಖಲೆ ಬರೆದ ಭಾರತ ತಂಡ

ತಂಡದಲ್ಲಿರುವ ಆಟಗಾರಿರಗೆ ಗೌತಮ್ ಗಂಭೀರ್ ನೀಡಿರುವ ಸ್ವಾತಂತ್ರ್ಯವನ್ನು ಸೂರ್ಯಕುಮಾರ್ ಯಾದವ್ ಮುಕ್ತ ಕಂಠದಿಂದ ಹಾಡಿ ಹೊಗಳಿರುವ ಸೂರ್ಯ, ಪ್ರತಿಯೊಬ್ಬರಿಗೂ ಅವರಿಗೆ ಬೇಕಾದಂತೆ ಆಡಲು ಫ್ರೀಡಮ್ ಸಿಕ್ಕಿರುವ ಕಾರಣ ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ಇದೇ ಪ್ರದರ್ಶನ ಮುಂದಿನ ಪಂದ್ಯದಲ್ಲೂ ಮುಂದುವರೆಯುವ ನಿರೀಕ್ಷೆಯಿದೆ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

 

 

Published On - 9:03 am, Thu, 23 January 25