
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ನಿರೀಕ್ಷೆಗೂ ಮೀರಿದ ಆರಂಭ ಒದಗಿಸಿಕೊಟ್ಟಿದ್ದಾರೆ. ಸಂಜು ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಮೊದಲ ಎಸೆತದಿಂದಲೂ ಹೊಡಿಬಡಿ ಆಟ ಪ್ರದರ್ಶಿಸಿ ಕೇವಲ 37 ಎಸೆತಗಳಲ್ಲಿ ಅಂತರಾಷ್ಟ್ರೀಯ ಟಿ20 ವೃತ್ತಿಜೀವನದ ಎರಡನೇ ಶತಕವನ್ನು ಬಾರಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬ ಸಿಡಿಸಿದ ಎರಡನೇ ಅತಿ ವೇಗದ ಶತಕ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಸರಣಿಯ ಮೊದಲ 4 ಪಂದ್ಯಗಳಲ್ಲಿಯೂ ಇದೇ ರೀತಿಯ ಸ್ಫೋಟಕ ಆರಂಭ ಪಡೆದುಕೊಂಡಿದ್ದ ಅಭಿಗೆ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ. ಆದರೆ ಐದನೇ ಪಂದ್ಯದಲ್ಲಿ ಮೈದಾನದ ತುಂಬ ಬೌಂಡರಿಗಳ ಮಳೆಗರೆದ ಅಭಿ ಕೇವಲ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ಸಹಿತ ಶತಕ ಪೂರೈಸಿದರು. ಅಂದರೆ ಕೇವಲ 15 ಎಸೆತಗಳಲ್ಲೇ ಅಭಿ ಬೌಂಡರಿ ಹಾಗೂ ಸಿಕ್ಸರ್ಗಳ ಸಹಾಯದಿಂದ 80 ರನ್ ಕಲೆಹಾಕಿದರು.
ಜೋಫ್ರಾ ಆರ್ಚರ್ ಎಸೆದ ಮೂರನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್ ಬಾರಿಸುವ ಮೂಲಕ ಟೀಂ ಇಂಡಿಯಾಕ್ಕೆ ವೇಗದ ಆರಂಭ ನೀಡಿದ ಅಭಿ, ಇದಾದ ನಂತರ ಜೇಮೀ ಓವರ್ಟನ್ ಅವರ ಓವರ್‌ನಲ್ಲಿಯೂ ಸತತ ಎರಡು ಸಿಕ್ಸರ್‌ಗಳನ್ನು ಹೊಡೆದರು. ಇದರ ಆಧಾರದ ಮೇಲೆ ಭಾರತ ಕೇವಲ 4 ಓವರ್‌ಗಳಲ್ಲಿ 50 ರನ್ ಪೂರೈಸಿತು. ಅಭಿಷೇಕ್ ಆರ್ಭಟದಿಂದಾಗಿ ಭಾರತ ಮೊದಲ 6 ಓವರ್‌ಗಳಲ್ಲಿ ಅಂದರೆ ಪವರ್ ಪ್ಲೇ ಅಂತ್ಯಕ್ಕೆ ಬರೋಬ್ಬರಿ 95 ರನ್ ಗಳಿಸಿತು. ಇದೇ ವೇಳೆ ಅಭಿಷೇಕ್ ತಮ್ಮ ಅರ್ಧಶತಕವನ್ನು ಕೇವಲ 17 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಈ ಮೂಲಕ ಭಾರತದ ಪರ ವೇಗದ ಅರ್ಧಶತಕ ಸಿಡಿಸಿದ ಎರಡನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಸೃಷ್ಟಿಸಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಭಿಷೇಕ್ ಅವರ ಗುರು ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಪೂರೈಸಿದ್ದರು.
ಇಲ್ಲಿಗೇ ನಿಲ್ಲದ ಅಭಿಷೇಕ್, ಅರ್ಧಶತಕ ಪೂರೈಸಿದ ನಂತರ ಇನ್ನಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿ 11ನೇ ಓವರ್‌ನಲ್ಲಿ ಕೇವಲ 37 ಎಸೆತಗಳಲ್ಲಿ ತಮ್ಮ ಟಿ20 ವೃತ್ತಿಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಇದು ಮಾತ್ರವಲ್ಲದೆ ಅಭಿಷೇಕ್ ಎರಡನೇ ವಿಕೆಟ್ಗೆ ತಿಲಕ್ ವರ್ಮಾ ಅವರೊಂದಿಗೆ ಶತಕದ ಜೊತೆಯಾಟವನ್ನು ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 pm, Sun, 2 February 25