IND vs ENG: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ 10 ಬ್ಯಾಟರ್​ಗಳು..!

India vs England Test: ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯದಲ್ಲಿ 336 ರನ್​ಗಳಿಂದ ಟೀಮ್ ಇಂಡಿಯಾ ಗೆಲುವು ದಾಖಲಿಸಿತ್ತು. ಮೂರನೇ ಮ್ಯಾಚ್​ನಲ್ಲಿ 22 ರನ್​ಗಳ ಜಯ ಸಾಧಿಸುವಲ್ಲಿ ಇಂಗ್ಲೆಂಡ್ ಯಶಸ್ವಿಯಾಗಿತ್ತು. ಹಾಗೆಯೇ ನಾಲ್ಕನೇ ಪಂದ್ಯವನ್ನು ಟೀಮ್ ಇಂಡಿಯಾ ಡ್ರಾನಲ್ಲಿ ಕೊನೆಗೊಳಿಸಿದೆ. ಇದೀಗ ಐದನೇ ಪಂದ್ಯಕ್ಕಾಗಿ ಉಭಯ ತಂಡಗಳು ಸಜ್ಜಾಗಿದೆ.

IND vs ENG: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್​ನಲ್ಲಿ 10 ಬ್ಯಾಟರ್​ಗಳು..!
England

Updated on: Jul 31, 2025 | 10:14 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯವು ಇಂದಿನಿಂದ (ಜುಲೈ 31) ಶುರುವಾಗಲಿದೆ. ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ ಅನ್ನು ಪ್ರಕಟಿಸಿದೆ. ವಿಶೇಷ ಎಂದರೆ  ಈ ಆಡುವ ಬಳಗದಲ್ಲಿ 10 ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ. ಅಂದರೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರು ಪರಿಪೂರ್ಣ ಬ್ಯಾಟರ್​ಗಳಿದ್ದರೆ, ನಾಲ್ವರು ಆಲ್​ರೌಂಡರ್​ಗಳು ಸ್ಥಾನ ಪಡೆದಿದ್ದಾರೆ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಬಲಿಷ್ಠ ಪಡೆಯನ್ನೇ ರೂಪಿಸಿದೆ.

ಇಂಗ್ಲೆಂಡ್ ತಂಡದಲ್ಲಿರುವ ಪರಿಪೂರ್ಣ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡುವುದಾದರೆ… ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್.

ಇನ್ನು ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವವರು ಯಾರೆಂದರೆ… ಜೇಕಬ್ ಬೆಥೆಲ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್. ಹಾಗೆಯೇ ಬೌಲರ್ ಆಗಿ ಸ್ಥಾನ ಪಡೆದಿರುವುದು ಜೋಶ್ ಟಂಗ್.

4+1 ಸೂತ್ರ:

ಭಾರತದ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವು ನಾಲ್ವರು ಆಲ್​ರೌಂಡರ್​ಗಳನ್ನು ಕಣಕ್ಕಿಳಿಸಿದ್ದಾರೆ. ಇಲ್ಲಿ ವೇಗದ ಬೌಲಿಂಗ್ ಆಲ್​ರೌಂಡರ್​​ಗಳಾಗಿ ಗಸ್ ಅಟ್ಕಿನ್ಸನ್, ಕ್ರಿಸ್ ವೋಕ್ಸ್ ಹಾಗೂ ಜೇಮಿ ಓವರ್ಟನ್ ಇದ್ದರೆ, ಸ್ಪಿನ್ ಆಲ್​ರೌಂಡರ್ ಆಗಿ ಜೇಕಬ್ ಬೆಥೆಲ್ ಸ್ಥಾನ ಪಡೆದಿದ್ದಾರೆ. ಅತ್ತ ಜೋಶ್ ಟಂಗ್ ವೇಗಿಯಾಗಿರುವ ಕಾರಣ ಇಂಗ್ಲೆಂಡ್ ನಾಲ್ವರು ವೇಗದ ಬೌಲರ್​ ಹಾಗೂ ಓರ್ವ ಸ್ಪಿನ್ನರ್​ನೊಂದಿಗೆ ಟೀಮ್ ಇಂಡಿಯಾವನ್ನು ಎದುರಿಸಲಿದೆ.

ಆಲ್​ರೌಂಡರ್​ಗಳ ಬ್ಯಾಟಿಂಗ್ ಪ್ರದರ್ಶನ:

  • ಗಸ್ ಅಟ್ಕಿನ್ಸನ್: ಇಂಗ್ಲೆಂಡ್ ತಂಡದ ವೇಗದ ಬೌಲಿಂಗ್ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿರುವ ಗಸ್ ಅಟ್ಕಿನ್ಸನ್ ಈಗಾಗಲೇ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದು ಶತಕ ಸಿಡಿಸಿದ್ದಾರೆ. ಅಷ್ಟೇ ಅಲ್ಲದೆ 12 ಟೆಸ್ಟ್ ಪಂದ್ಯಗಳಲ್ಲಿ 79ರ ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 352 ರನ್ ಕಲೆಹಾಕಿದ್ದಾರೆ.
  • ಜೇಮಿ ಓವರ್ಟನ್: ಇಂಗ್ಲೆಂಡ್ ಪರ ಜೇಮಿ ಓರ್ವಟನ್ ಈವರೆಗೆ ಆಡಿರುವುದು ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ. ಆದರೆ ಅತ್ತ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಓವರ್ಟನ್ 1 ಶತಕ ಹಾಗೂ 13 ಅರ್ಧಶತಕಗಳೊಂದಿಗೆ ಒಟ್ಟು 2401 ರನ್ ಕಲೆಹಾಕಿದ್ದಾರೆ.
  • ಕ್ರಿಸ್ ವೋಕ್ಸ್: ಇಂಗ್ಲೆಂಡ್ ತಂಡದ ಅನುಭವಿ ಆಲ್​ರೌಂಡರ್ ಆಗಿರುವ ಕ್ರಿಸ್ ವೋಕ್ಸ್ 98 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 13 ಅರ್ಧಶತಕಗಳೊಂದಿಗೆ ಒಟ್ಟು 2034 ರನ್ ಕಲೆಹಾಕಿದ್ದಾರೆ.
  • ಜೇಕಬ್ ಬೆಥೆಲ್: ಇಂಗ್ಲೆಂಡ್ ತಂಡದ ಯುವ ಆಲ್​ರೌಂಡರ್ ಜೇಕಬ್ ಬೆಥೆಲ್ ಈವರೆಗೆ ಆಡಿರುವುದು ಕೇವಲ 3 ಟೆಸ್ಟ್ ಪಂದ್ಯ ಮಾತ್ರ. ಬ್ಯಾಟಿಂಗ್ ಆಲ್​ರೌಂಡರ್ ಆಗಿರುವ ಬೆಥೆಲ್ 6 ಇನಿಂಗ್ಸ್​ಗಳಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಒಟ್ಟು 260 ರನ್ ಕಲೆಹಾಕಿದ್ದಾರೆ.

ಯಾರು ಔಟ್ ಯಾರು ಇನ್:

  • ಭುಜದ ನೋವಿನ ಕಾರಣ 5ನೇ ಟೆಸ್ಟ್​ ಪಂದ್ಯದಿಂದ ನಾಯಕ ಬೆನ್ ಸ್ಟೋಕ್ಸ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಸ್ಥಾನ ಪಡೆದಿರುವುದು ಯುವ ಆಲ್​ರೌಂಡರ್ ಜೇಕಬ್ ಬೆಥೆಲ್.
  • ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಐದನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಜೋಶ್ ಟಂಗ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡಿದ್ದಾರೆ.
  • ಕಳೆದ ನಾಲ್ಕು ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದ ಬ್ರೈಡನ್ ಕಾರ್ಸ್ ಅಂತಿಮ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಸ್ಥಾನದಲ್ಲಿ ಜೇಮಿ ಓವರ್ಟನ್ ಸ್ಥಾನ ಆಡುವ ಬಳಗದಲ್ಲಿದ್ದಾರೆ.

ಇದನ್ನೂ ಓದಿ: ಹಿಸ್ಟರಿ… ಹಿಸ್ಟರಿ… ಹಿಸ್ಟರಿ… ಹೊಸ ಇತಿಹಾಸ ನಿರ್ಮಿಸಿದ ಪಾಕಿಸ್ತಾನ್ ಚಾಂಪಿಯನ್ಸ್

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್ (ನಾಯಕ), ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್.

 

Published On - 10:11 am, Thu, 31 July 25