IND vs ENG: ಧರ್ಮಶಾಲಾ ಪಿಚ್ ನೋಡಿ ಹರ್ಷ ವ್ಯಕ್ತಪಡಿಸಿದ ಆಂಗ್ಲ ಆಟಗಾರರು

|

Updated on: Mar 06, 2024 | 3:25 PM

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ಪರವಾಗಿ ಮಾತನಾಡಿದ ಜಾನಿ ಬೈರ್‌ಸ್ಟೋ, ಧರ್ಮಶಾಲಾ ಪಿಚ್ ಅನ್ನು ಕೊಂಡಾಡಿದ್ದಾರೆ.

IND vs ENG: ಧರ್ಮಶಾಲಾ ಪಿಚ್ ನೋಡಿ ಹರ್ಷ ವ್ಯಕ್ತಪಡಿಸಿದ ಆಂಗ್ಲ ಆಟಗಾರರು
ಧರ್ಮಶಾಲಾ ಕ್ರಿಕೆಟ್ ಮೈದಾನ
Follow us on

ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಸರಣಿಯ ಕೊನೆಯ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಇಂಗ್ಲೆಂಡ್ ತಂಡದ ಆಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಈ ಸರಣಿಯಲ್ಲಿ ನಡೆದ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳ ಪಿಚ್‌ ಬಗ್ಗೆ ಆಂಗ್ಲ ಆಟಗಾರರು ಪ್ರಶ್ನೆಗಳು ಎತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಆಂಗ್ಲರ ಬಾಯಿಯಿಂದ ಭಾರತದ ಪಿಚ್​ ಬಗ್ಗೆ ಸಕಾರಾತ್ಮಕ ಹೇಳಿಕೆ ಹೊರಬಿದ್ದಿದೆ. ಧರ್ಮಶಾಲಾ ಪಿಚ್ (Dharamsala Pitch) ನೋಡಿದ ಆಂಗ್ಲರು ಈ ಪಿಚ್ ಉತ್ತಮವಾಗಿದೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಈ ಪಿಚ್‌ ಸಿದ್ಧಪಡಿಸಿದ ಮೈದಾನದ ಸಿಬ್ಬಂದಿಯನ್ನೂ ಸಹ ಹೊಗಳಿದ್ದಾರೆ.

ಮೈದಾನದ ಸಿಬ್ಬಂದಿಯನ್ನು ಶ್ಲಾಘಿಸಿದ ಬೈರ್‌ಸ್ಟೋ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಈ ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್ ಪರವಾಗಿ ಮಾತನಾಡಿದ ಜಾನಿ ಬೈರ್‌ಸ್ಟೋ, ಧರ್ಮಶಾಲಾ ಪಿಚ್ ತುಂಬಾ ಚೆನ್ನಾಗಿ ಕಾಣುತ್ತಿದೆ. ಇತ್ತೀಚೆಗಷ್ಟೇ ರಣಜಿ ಟ್ರೋಫಿ ಪಂದ್ಯ ಕೂಡ ಈ ಪಿಚ್‌ನಲ್ಲಿ ನಡೆದಿತ್ತು. ಇದರ ಹೊರತಾಗಿ, ಔಟ್‌ಫೀಲ್ಡ್ ಕೂಡ ಸಾಕಷ್ಟು ಅದ್ಭುತವಾಗಿ ಕಾಣುತ್ತಿದೆ. ಇಲ್ಲಿಯ ಹವಾಮಾನವನ್ನು ಪರಿಗಣಿಸಿ ಮೈದಾನದ ಸಿಬ್ಬಂದಿ ಪಿಚ್‌ ಅನ್ನು ಅದ್ಭುತವಾಗಿ ರೆಡಿ ಮಾಡಿದ್ದಾರೆ ಅದಕ್ಕಾಗಿ ಅವರೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

IND vs ENG: ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್

ಜಾನಿ ಬೈರ್‌ಸ್ಟೋಗೆ 100ನೇ ಟೆಸ್ಟ್

ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಧರ್ಮಶಾಲಾದಲ್ಲಿ ತಮ್ಮ 100ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ 100ನೇ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡಿದ 17ನೇ ಇಂಗ್ಲಿಷ್ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಈ ಸರಣಿಯು ಜಾನಿ ಬೈರ್‌ಸ್ಟೋವ್‌ಗೆ ವಿಶೇಷವಾಗಿಲ್ಲ. ಇಡೀ ಸರಣಿಯಲ್ಲಿ ಬೈರ್‌ಸ್ಟೋ ಬ್ಯಾಟ್​ನಿಂದ ಒಂದೇ ಒಂದು ಶತಕದ ಇನ್ನಿಂಗ್ಸ್ ಹೊರಬರಲಿಲ್ಲ. ಈ ಸರಣಿಯಲ್ಲಿ ಇದುವರೆಗೆ ಅವರ ಬ್ಯಾಟ್‌ನಿಂದ ಕೇವಲ 170 ರನ್ ಮಾತ್ರ ಕಲೆಹಾಕಲಾಗಿದೆ. ಇನ್ನು ತಮ್ಮ 100ನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ ಜಾನಿ ಬೈರ್‌ಸ್ಟೋವ್, ಇದು ನನಗೆ ತುಂಬಾ ಭಾವನಾತ್ಮಕವಾಗಿರುತ್ತದೆ. 100 ಟೆಸ್ಟ್ ಪಂದ್ಯಗಳನ್ನು ಆಡುವುದು ಸ್ಮರಣೀಯವಾಗಿದೆ ಎಂದಿದ್ದಾರೆ.

ಇನ್ನು ಸರಣಿಯ ಬಗ್ಗೆ ಹೇಳುವುದಾದರೆ.. ಟೀಂ ಇಂಡಿಯಾ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡ ಧರ್ಮಶಾಲಾ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು 4-1 ರಿಂದ ವಶಪಡಿಸಿಕೊಳ್ಳಲು ಬಯಸಿದೆ. ಇತ್ತ ಇಂಗ್ಲೆಂಡ್ ಕೊನೆಯ ಪಂದ್ಯ ಗೆದ್ದು ಭಾರತಕ್ಕೆ ವಿದಾಯ ಹೇಳಲು ಬಯಸುತ್ತಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್​ಗೆ ಆ ನಂತರ ಗೆಲುವು ಎಂಬುದು ಗಗನ ಕುಸುಮವಾಗಿ ಮಾರ್ಪಟ್ಟಿದೆ.

ಕೊನೆಯ ಟೆಸ್ಟ್​ಗೆ ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್, ಮಾರ್ಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ