IND vs ENG: ಅಂತಿಮ ಟೆಸ್ಟ್​ಗೆ ಭಾರತ ತಂಡದಲ್ಲಿ 1 ಬದಲಾವಣೆ; ಕನ್ನಡಿಗನಿಗೆ ಸ್ಥಾನ ಅನುಮಾನ?

|

Updated on: Mar 06, 2024 | 10:22 PM

IND vs ENG: ಈ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3-1 ಅಂತರದ ಮುನ್ನಡೆ ಸಾಧಿಸಿರುವುದಲ್ಲದೆ ಸರಣಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದೀಗ ಧರ್ಮಶಾಲಾದಲ್ಲಿ ಜಯ ಸಾಧಿಸುವ ಮೂಲಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿದೆ.

IND vs ENG: ಅಂತಿಮ ಟೆಸ್ಟ್​ಗೆ ಭಾರತ ತಂಡದಲ್ಲಿ 1 ಬದಲಾವಣೆ; ಕನ್ನಡಿಗನಿಗೆ ಸ್ಥಾನ ಅನುಮಾನ?
ಟೀಂ ಇಂಡಿಯಾ
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಟೆಸ್ಟ್ ಸರಣಿಯ ಐದನೇ ಪಂದ್ಯ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ (Team India) ಈಗಾಗಲೇ 3-1 ಅಂತರದ ಮುನ್ನಡೆ ಸಾಧಿಸಿರುವುದಲ್ಲದೆ ಸರಣಿಯನ್ನೂ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದೀಗ ಧರ್ಮಶಾಲಾದಲ್ಲಿ ಜಯ ಸಾಧಿಸುವ ಮೂಲಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC Point Table) ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಪ್ರಯತ್ನಿಸಲಿದೆ. ಇತ್ತ ಕೊನೆಯ ಪಂದ್ಯ ಗೆದ್ದು ಸರಣಿಯನ್ನು 3-2 ರಿಂದ ಕೊನೆಗೊಳಿಸಲು ನೋಡುತ್ತಿರುವ ಇಂಗ್ಲೆಂಡ್ ಎಂದಿನಂತೆ ಪಂದ್ಯ ಆರಂಭಕ್ಕೆ ಒಂದು ದಿನದ ಹಿಂದೆ ತನ್ನ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ಈಗ ಭಾರತ ತಂಡದ ಆಡುವ ಹನ್ನೊಂದರಲ್ಲಿ ಯಾರಿಗೆ ಸ್ಥಾನ ಸಿಗಲಿದೆ. ಯಾರಿಗೆ ಕೋಕ್ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ.

ರೋಹಿತ್ ಶರ್ಮಾ ಹೇಳಿದ್ದೇನು?

ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ರಜತ್ ಪಾಟಿದಾರ್ ಅವರಿಗೆ ಇನ್ನೂ ಒಂದು ಅವಕಾಶ ನೀಡುವ ಸುಳಿವು ನೀಡಿದ್ದಾರೆ. ಹಾಗೆಯೇ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಆಡುವುದು ಖಚಿತ ಎಂದು ಪರಿಗಣಿಸಲಾಗಿದೆ. ಆದರೆ ಧರ್ಮಶಾಲಾ ಪಿಚ್ ವೇಗದ ಬೌಲರ್​ಗಳಿಗೆ ಹೆಚ್ಚು ನೆರವಾಗುವುದರಿಂದ ಟೀಂ ಇಂಡಿಯಾ ಒಂದೇ ಒಂದು ಬದಲಾವಣೆಯಾಗುವುದು ಖಚಿತವಾಗಿದ್ದು, ತಂಡದಲ್ಲಿ ಮೂವರು ವೇಗಿಗಳು ಆಡುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಇದು ಸಾಧ್ಯವಾದರೆ ಕುಲ್ದೀಪ್ ಬೆಂಚ್ ಕಾಯಬೇಕಾಗಬಹುದು. ಅವರ ಬದಲಿಗೆ ಬುಮ್ರಾ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯಬಹುದು.

IND vs ENG: ಧರ್ಮಶಾಲಾ ಪಿಚ್ ಯಾರಿಗೆ ಸಹಕಾರಿ? ಪಂದ್ಯಕ್ಕೆ ಮಳೆಯ ಆತಂಕ..!

ದೇವದತ್ ಪಡಿಕ್ಕಲ್​ಗೆ ಡೌಟ್

ಕನ್ನಡಿಗ ಕೆಎಲ್ ರಾಹುಲ್ ತಂಡದಿಂದ ಹೊರಬಿದ್ದ ಬಳಿಕ ಮತ್ತೊಬ್ಬ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ರೋಹಿತ್ ಹೇಳಿಕೆ ನಿಜವಾದರೆ, ಪಡಿಕ್ಕಲ್​ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ಇನ್ನು ಸರ್ಫರಾಜ್ ಖಾನ್ ಚೊಚ್ಚಲ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರು ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತ. ಆದರೆ ರಜತ್ ಮಾತ್ರ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಅದಾಗ್ಯೂ ಪತ್ರಿಕಾಗೋಷ್ಠಿಯಲ್ಲಿ ರಜತ್ ಬಗ್ಗೆ ಮಾತನಾಡಿದ್ದ ರೋಹಿತ್, ‘ನಿಸ್ಸಂದೇಹವಾಗಿ ರಜತ್ ಪಾಟಿದಾರ್ ನಮ್ಮ ತಂಡದ ನಿರೀಕ್ಷೆಯಂತೆ ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಅವರಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಕೊರತೆಯಿಲ್ಲ. ಅವರು ಉತ್ತಮ ಕ್ರಿಕೆಟ್ ಆಡುವುದನ್ನು ನಾನು ನೋಡಿದ್ದೇನೆ. ಅವರೊಬ್ಬ ಉತ್ತಮ ಆಟಗಾರ.

ಯಾರಾದರೂ ಉತ್ತಮವಾಗಿ ಬ್ಯಾಟಿಂಗ್ ಮಾಡುವುದನ್ನು ನಾವು ನೋಡಿದರೆ, ನಾವು ಅವರನ್ನು ಪ್ರತಿಭಾವಂತ ಆಟಗಾರ ಎಂದು ಕರೆಯುತ್ತೇವೆ. ಅವರು ಇನ್ನೂ ಟೆಸ್ಟ್‌ಗೆ ಹೊಸಬರು ಆದ್ದರಿಂದ ನಾವು ಅವರಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ. ಅವರು ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ನಿಜ ಅವರು ಅನೇಕ ಅವಕಾಶಗಳನ್ನು ಕೈಚೆಲ್ಲಿದ್ದಾರೆ. ಆದರೆ ಇದು ಎಲ್ಲರ ವೃತ್ತಿಜೀವನದ ಆರಂಭದಲ್ಲಿ ಸಂಭವಿಸುತ್ತದೆ ಎಂದಿದ್ದಾರೆ. ಇದರರ್ಥ ರಜತ್ ಕೊನೆಯ ಟೆಸ್ಟ್​ನಲ್ಲಿ ಆಡುವುದು ಖಚಿತ ಎಂದೇ ಹೇಳಬಹುದು.

ಭಾರತದ ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಸರ್ಫರಾಜ್ ಖಾನ್, ರಜತ್ ಪಾಟಿದಾರ್ / ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ