WPL 2024: ಮತ್ತೆ ಲಯ ತಪ್ಪಿದ ಆರ್​ಸಿಬಿ; ಗುಜರಾತ್​ಗೆ ಮೊದಲ ಜಯ

WPL 2024: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿ 179 ರನ್​ ಗಳಿಸಲಷ್ಟೇ ಶಕ್ತವಾಗಿ 19 ರನ್​ಗಳಿಂದ ಸೋಲೊಪ್ಪಿಕೊಂಡಿತು.

WPL 2024: ಮತ್ತೆ ಲಯ ತಪ್ಪಿದ ಆರ್​ಸಿಬಿ; ಗುಜರಾತ್​ಗೆ ಮೊದಲ ಜಯ
ಆರ್​ಸಿಬಿ- ಗುಜರಾತ್
Follow us
ಪೃಥ್ವಿಶಂಕರ
|

Updated on:Mar 06, 2024 | 10:49 PM

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (Arun Jaitley Stadium) ನಡೆದ ಆರ್​ಸಿಬಿ ಹಾಗೂ ಗುಜರಾತ್ ಜೈಂಟ್ಸ್ (Royal Challengers Bangalore vs Gujarat Giants) ನಡುವಿನ ಮಹಿಳಾ ಪ್ರೀಮಿಯರ್ ಲೀಗ್​ನ 12ನೇ ಪಂದ್ಯದಲ್ಲಿ ಸ್ಮೃತಿ ಮಂಧಾನ (Smriti Mandhana) ನೇತೃತ್ವದ ಆರ್​ಸಿಬಿ ತಂಡವನ್ನು 19 ರನ್​ಗಳಿಂದ ಮಣಿಸಿದ ಗುಜರಾತ್ ಜೈಂಟ್ಸ್ ತಂಡ ಈ ಸೀಸನ್​ನಲ್ಲಿ ಮೊದಲ ಗೆಲುವು ದಾಖಲಿಸಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿ ಐದು ಪಂದ್ಯಗಳನ್ನು ಆಡಿದ್ದ ಗುಜರಾತ್ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿರಲಿಲ್ಲ. ಆದರೀಗ ದೆಹಲಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಬೆತ್ ಮೂನಿ ಬಳಗ ಮೊದಲ ಗೆಲುವು ದಾಖಲಿಸಿದೆ. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿ 179 ರನ್​ ಗಳಿಸಲಷ್ಟೇ ಶಕ್ತವಾಗಿ 19 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಗುಜರಾತ್​ಗೆ ಸ್ಫೋಟಕ ಆರಂಭ

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡಕ್ಕೆ ಆರಂಭಿಕರಿಬ್ಬರು ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಲಾರಾ ವೊಲ್ವಾರ್ಡ್ಟ್ ಹಾಗೂ ನಾಯಕಿ ಬೆತ್ ಮೂನಿ ಮೊದಲ ವಿಕೆಟ್​​ಗೆ ದಾಖಲೆಯ 140 ರನ್​ಗಳ ಜೊತೆಯಾಟ ಹಂಚಿಕೊಂಡರು. ಈ ವೇಳೆ ಲಾರಾ 45 ಎಸೆತಗಳಲ್ಲಿ 13 ಬೌಂಡರಿ ಸಹಿತ 76 ರನ್ ಕಲೆಹಾಕಿ ರನೌಟ್​ಗೆ ಬಲಿಯಾದರು. ಆ ನಂತರ ಬಂದ ಫೋಬೆ ಲಿಚ್ಫೀಲ್ಡ್ ಕೂಡ 18 ರನ್​ಗಳ ಕಾಣಿಕೆ ನೀಡಿದರು.

ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ಆರ್​ಸಿಬಿ ವೇಗಿಗಳ ಬೆವರಿಳಿಸಿದ ಮೂನಿ ಕೊನೆಯವರೆಗೂ ಅಜೇಯರಾಗಿ ಉಳಿದು 51 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 85 ರನ್ ಕಲೆಹಾಕಿ ತಂಡವನ್ನು ಬೃಹತ್ ಸ್ಕೋರ್​ನತ್ತ ಕೊಂಡೊಯ್ದರು. ಈ ಇಬ್ಬರನ್ನು ಹೊರತುಪಡಿಸಿದರೆ ತಂಡದ ಮತ್ತ್ಯಾರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

WPL 2024: ಡೆಲ್ಲಿಯಲ್ಲಿ ಟಾಸ್ ಗೆದ್ದ ಗುಜರಾತ್; ಆರ್​ಸಿಬಿ ಮೊದಲು ಬೌಲಿಂಗ್

ಆರ್​ಸಿಬಿಗೆ ಆರಂಭದಲ್ಲೇ ಆಘಾತ

ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಈ ಬಾರಿ ಉತ್ತಮ ಆರಂಭ ಸಿಗಲಿಲ್ಲ. ಆರಂಭ ನಿದಾನಗತಿಯಿಂದ ಕೂಡಿದ್ದು ಒಂದು ಕಡೆಯಾಗಿದ್ದರೆ, ಇನ್ನೊಂದು ಕಡೆ ಸ್ಫೋಟಕ ಆಟಕ್ಕೆ ಮುಂದಾದ ನಾಯಕಿ ಮಂಧಾನ ಈ ಬಾರಿ ಕೇವಲ 24 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಮೇಘನಾರದ್ದು ಎಂದಿನಂತೆ ಆಮೆ ಗತಿಯ ಬ್ಯಾಟಿಂಗ್ 4 ರನ್​ಗಳಿಗೆ ಕೊನೆಯಾಯಿತು. ಆ ನಂತರ ಬಂದ ಎಲ್ಲಿಸ್ ಪೆರ್ರಿ ಹಾಗೂ ಸೋಫಿ ಡಿವೈನ್ ಕ್ರಮವಾಗಿ 24 ಹಾಗೂ 23 ರನ್ ಸೇರಿಸಿ ಪೆವಿಲಿಯನ್ ಸೇರಿಕೊಂಡರು.

ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 30 ರನ್ ಕಲೆಹಾಕಿ ಕೊಂಚ ಹೋರಾಟ ನೀಡಿದರಾದರೂ ಅವರ ಇನ್ನಿಂಗ್ಸ್​ ಅಲ್ಪಕ್ಕೆ ಅಂತ್ಯಗೊಂಡಿತು. ಕೊನೆಯಲ್ಲಿ ಏಕಾಂಗಿ ಹೋರಾಟ ನಡೆಸಿದ ಜಾರ್ಜಿಯಾ ವೇರ್ಹ್ಯಾಮ್ 22 ಎಸೆತಗಳಲ್ಲಿ 48 ರನ್ ಕಲೆಹಾಕಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಉಭಯ ತಂಡಗಳು

ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್, ಸಿಮ್ರಾನ್ ಬಹದ್ದೂರ್, ಆಶಾ ಶೋಬನಾ, ರೇಣುಕಾ ಸಿಂಗ್.

ಗುಜರಾತ್ ತಂಡ: ಬೆತ್ ಮೂನಿ (ನಾಯಕಿ), ಲಾರಾ ವೊಲ್ವಾರ್ಡ್ಟ್, ತನುಜಾ ಕನ್ವರ್, ಫೋಬೆ ಲಿಚ್‌ಫೀಲ್ಡ್, ಆಶ್ಲೀಗ್ ಗಾರ್ಡ್ನರ್, ಕ್ಯಾಥರಿನ್ ಬ್ರೈಸ್, ದಯಾಲನ್ ಹೇಮಲತಾ, ವೇದಾ ಕೃಷ್ಣಮೂರ್ತಿ, ಮೇಘನಾ ಸಿಂಗ್, ಮನ್ನತ್ ಕಶ್ಯಪ್, ಶಬ್ನಮ್ ಶಕೀಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Wed, 6 March 24