WPL 2024: ಸ್ಮೃತಿ- ಪೆರ್ರಿ ಆಟಕ್ಕೆ ತಲೆಬಾಗಿದ ಯುಪಿ; ತವರಿನಲ್ಲಿ ಕೊನೆಯ ಪಂದ್ಯ ಗೆದ್ದ ಆರ್ಸಿಬಿ
WPL 2024: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 23 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೀಗ್ನಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್ (Women’s Premier League)ನ ಎರಡನೇ ಆವೃತ್ತಿಯ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು 23 ರನ್ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (UP Warriorz vs Royal Challengers Bangalore) ಲೀಗ್ನಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ವಾಸ್ತವವಾಗಿ ಲೀಗ್‌ನ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್ಸಿಬಿ, ಆ ನಂತರ ಸತತ ಎರಡು ಪಂದ್ಯಗಳನ್ನು ಸೋತು ಲಯ ಕಳೆದುಕೊಂಡಿತ್ತು. ಆದರೆ ತವರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ತಂಡದ ಬ್ಯಾಟರ್ಗಳಾದ ಸ್ಮೃತಿ ಮಂಧಾನ ಹಾಗೂ ಎಲ್ಲಿಸ್ ಪೆರ್ರಿ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಾಂಘಿಕ ದಾಳಿಯಿಂದ ತಂಡ ಕೊನೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಆರ್ಸಿಬಿಗೆ ಅದ್ಭುತ ಆರಂಭ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡಕ್ಕೆ ಈ ಬಾರಿ ಉತ್ತಮ ಆರಂಭ ಸಿಕ್ಕಿತು. ಇದಕ್ಕೆ ಆರಂಭಿಕರು ಬದಲಾದ ಕಾರಣವೂ ಒಂದಾಗಿತ್ತು. ಈ ಪಂದ್ಯದಲ್ಲಿ ಮೇಘನಾ ಹಾಗೂ ಸ್ಮೃತಿ ಮಂಧಾನ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಈ ಇಬ್ಬರು ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಮೇಘನಾ 21 ಎಸೆತಗಳಲ್ಲಿ 28 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.
80 ರನ್ ಸಿಡಿಸಿದ ಸ್ಮೃತಿ
ಆ ಬಳಿಕ ನಾಯಕಿ ಸ್ಮೃತಿಗೆ ಸಾಥ್ ನೀಡಿದ ಎಲ್ಲಿಸ್ ಪೆರ್ರಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು 95 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ನಾಯಕಿ ಸ್ಮೃತಿ ಮಂಧಾನ ಕೇವಲ 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಮತ್ತಷ್ಟು ರೌದ್ರಾವತಾರ ತಾಳಿದ ಸ್ಮೃತಿ ಮೈದಾನದಲ್ಲಿ ಬೌಂಡರಿಗಳ ಮಳೆಗರೆದು. ಅಂತಿಮವಾಗಿ ಸ್ಮೃತಿ ಮತ್ತೊಂದು ಶತಕ ವಂಚಿತರಾಗಿ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 80 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಆರೆಂಜ್ ಕ್ಯಾಪ್ ಕೂಡ ತನ್ನದಾಗಿಸಿಕೊಂಡರು.
The Royal Challengers Bangalore bounce back in style 😎#RCB clinch a crucial 23-run win in their final game at the Chinnaswamy 🏟️🥳
Live 💻📱https://t.co/iplAqFh4Yz#TATAWPL | #UPWvRCB | @RCBTweets pic.twitter.com/Eq4lk6kNkC
— Women's Premier League (WPL) (@wplt20) March 4, 2024
ಪೆರ್ರಿ ಅರ್ಧಶತಕ
ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಅಲ್ಲದೆ ಎಲ್ಲಿಸ್ ಪೆರ್ರಿ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 37 ಎಸೆತಗಳನ್ನು ಎದುರಿಸಿದ ಪೆರ್ರಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 58 ರನ್ ಕಲೆಹಾಕಿ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿತು.
The Royal Challengers Bangalore bounce back in style 😎#RCB clinch a crucial 23-run win in their final game at the Chinnaswamy 🏟️🥳
Live 💻📱https://t.co/iplAqFh4Yz#TATAWPL | #UPWvRCB | @RCBTweets pic.twitter.com/Eq4lk6kNkC
— Women’s Premier League (WPL) (@wplt20) March 4, 2024
ಹೋರಾಟ ನೀಡಿದ ಯುಪಿ
ಆರ್ಸಿಬಿ ನೀಡಿದ 199 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡ ಕೂಡ ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ನಾಯಕಿ ಅಲಿಸ್ಸಾ ಹೀಲಿ ಹಾಗೂ ಕಿರಣ್ ನವ್ಗಿರೆ ಮೊದಲ ವಿಕೆಟ್ಗೆ 47 ರನ್ಗಳ ಜೊತೆಯಾಟ ನೀಡಿದರು. ಆದರೆ 11 ಎಸೆತಗಳಲ್ಲಿ 18 ರನ್ ಕಲೆಹಾಕಿದ್ದ ಕಿರಣ್ ಸೋಫಿ ಡಿವೈನ್ಗೆ ಬಲಿಯಾದ ಬಳಿಕ ತಂಡದ ಇನ್ನಿಂಗ್ಸ್ ವೇಗ ಕಡಿಮೆಯಾಯಿತು. ಆದರೂ ಒಂದು ತುದಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕಿ ಹೀಲಿ 38 ಎಸೆತಗಳಲ್ಲಿ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇವರನ್ನು ಹೊರತುಪಡಿಸಿದರೆ, ದೀಪ್ತಿ ಶರ್ಮಾ ಮತ್ತು ಪೂನಂ ಖೇಮ್ನಾರ್ ಕ್ರಮವಾಗಿ 33 ಹಾಗೂ 31 ರನ್ ಸಿಡಿಸಿ ತಂಡದ ಗೆಲುವಿಗೆ ಹೋರಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಬೆಂಗಳೂರಿನಲ್ಲಿ ಕೊನೆಯ ಪಂದ್ಯ
ಇದು ಬೆಂಗಳೂರಿನಲ್ಲಿ ಕೊನೆಯ ಡಬ್ಲ್ಯುಪಿಎಲ್ ಪಂದ್ಯವಾಗಿದ್ದು, ಆವೃತ್ತಿಯ ಉಳಿದ ಪಂದ್ಯಗಳಿಗೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಕ್ರೀಡಾಂಗಣದ ಮೊದಲ ಪಂದ್ಯ ನಾಳೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 pm, Mon, 4 March 24