ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್ಸಿಬಿ ಹಾಗೂ ಯುಪಿ ವಾರಿಯರ್ಸ್ ನಡುವಿನ ಮಹಿಳಾ ಪ್ರಿಮೀಯರ್ ಲೀಗ್ನಲ್ಲಿ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಬೃಹತ್ ಮೊತ್ತದ ಮುನ್ನಡೆಸಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕಿ ಸ್ಮೃತಿ ಹಾಗೂ ಮೇಘನಾ ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟ ಹಂಚಿಕೊಂಡರು. ಈ ವೇಳೆ ಮೇಘನಾ 21 ಎಸೆತಗಳಲ್ಲಿ 28 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.
ಆ ಬಳಿಕ ನಾಯಕಿ ಸ್ಮೃತಿಗೆ ಸಾಥ್ ನೀಡಿದ ಎಲ್ಲಿಸ್ ಪೆರ್ರಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ಇಬ್ಬರು 95 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ನಾಯಕಿ ಸ್ಮೃತಿ ಮಂಧಾನ ಕೇವಲ 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬಳಿಕ ಮತ್ತಷ್ಟು ರೌದ್ರಾವತಾರ ತಾಳಿದ ಸ್ಮೃತಿ ಮೈದಾನದಲ್ಲಿ ಬೌಂಡರಿಗಳ ಮಳೆಗರೆದು. ಅಂತಿಮವಾಗಿ ಸ್ಮೃತಿ ಮತ್ತೊಂದು ಶತಕ ವಂಚಿತರಾಗಿ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 80 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಆರೆಂಜ್ ಕ್ಯಾಪ್ ಕೂಡ ತನ್ನದಾಗಿಸಿಕೊಂಡರು
ಈ ಪಂದ್ಯದಲ್ಲಿ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೂ ಸ್ಮೃತಿ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 74 ರನ್ ಸಿಡಿಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ಸ್ಮೃತಿ ಮಂಧಾನ ಅಲ್ಲದೆ ಎಲ್ಲಿಸ್ ಪೆರ್ರಿ ಪೆರ್ರಿ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 37 ಎಸೆತಗಳನ್ನು ಎದುರಿಸಿದ ಪೆರ್ರಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 58 ರನ್ ಕಲೆಹಾಕಿ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ ಈ ಪಂದ್ಯದಲ್ಲಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 198 ರನ್ ಕಲೆಹಾಕಿದೆ. ಈ ಮೂಲಕ ಯುಪಿ ವಾರಿಯರ್ಸ್ ತಂಡಕ್ಕೆ 199 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
Published On - 9:08 pm, Mon, 4 March 24