‘ಬದಲಾವಣೆ ಅಗತ್ಯ’; ಭಾಝ್ ಬಾಲ್ ಕ್ರಿಕೆಟ್ ಹರಿಕಾರನಿಗೆ ಬುದ್ಧಿ ಕಲಿಸಿದ ಟೀಂ ಇಂಡಿಯಾ

|

Updated on: Mar 11, 2024 | 10:12 PM

IND vs ENG: ತನ್ನ ಆಕ್ರಮಣಕಾರಿ ಮತ್ತು ನಿರ್ಭೀತ ಕ್ರಿಕೆಟ್ ಶೈಲಿಯಿಂದಾಗಿ, ಇಂಗ್ಲೆಂಡ್ ತಂಡವು ಈ ಬಾರಿಯ ಭಾರತ ಪ್ರವಾಸದಲ್ಲಿ ಯಶಸ್ಸಿನ ನಿರೀಕ್ಷೆಯನ್ನು ಹೊಂದಿತ್ತು. ಸರಣಿ ಆರಂಭವಾದ ರೀತಿಯೂ ಉದ್ದೇಶಗಳಿಗೆ ಬಲ ನೀಡಿತು. ಆದರೆ ಉಳಿದ ನಾಲ್ಕು ಪಂದ್ಯಗಳಲ್ಲಿ ನಡೆದ ಕಥೆಯೇ ಬೇರೆಯದ್ದಾಗಿತ್ತು.

‘ಬದಲಾವಣೆ ಅಗತ್ಯ; ಭಾಝ್ ಬಾಲ್ ಕ್ರಿಕೆಟ್ ಹರಿಕಾರನಿಗೆ ಬುದ್ಧಿ ಕಲಿಸಿದ ಟೀಂ ಇಂಡಿಯಾ
ಬ್ರೆಂಡನ್ ಮೆಕಲಮ್
Follow us on

ಆಕ್ರಮಣಕಾರಿ ಆಟದಿಂದಲೇ ಹಲವು ಬಲಿಷ್ಠ ತಂಡಗಳನ್ನು ಮಣಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಇಂಗ್ಲೆಂಡ್ ಟೆಸ್ಟ್ ತಂಡ (England Test Team), ಅದೇ ಆಕ್ರಮಣಕಾರಿ ಆಟದ ಮೂಲಕ ಟೀಂ ಇಂಡಿಯಾವನ್ನು (Team India) ಹಣಿಯುವ ಗುರಿಯೊಂದಿಗೆ ಭಾರತಕ್ಕೆ ಕಾಲಿಟ್ಟಿತ್ತು. ಅದರಂತೆ ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಮಣಿಸುವ ಮೂಲಕ ಆಂಗ್ಲರು ಒಂದು ಹೆಜ್ಜೆ ಮುಂದಿಟ್ಟಿದ್ದರು. ಆದರೆ ಆ ಬಳಿಕ ಟೀಂ ಇಂಡಿಯಾ ಪುನರಾಗಮನ ಮಾಡಿದ ರೀತಿಗೆ ಆಂಗ್ಲರ ಜಂಘಾಬಲವೇ ಅಡಗಿ ಹೋಗಿದೆ. ಮೊದಲ ಪಂದ್ಯ ಸೋತ ಬಳಿಕ ಟೂರ್ನಿಯಲ್ಲಿ ಕಂಬ್ಯಾಕ್ ಮಾಡಿದ ರೋಹಿತ್ ಪಡೆ ಉಳಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿತು. ಅಲ್ಲದೆ ಟೀಂ ಇಂಡಿಯಾ ಆಟಗಾರರಿಗೆ ಭಾಝ್ ಬಾಲ್ (Bazball) ಕ್ರಿಕೆಟ್ ಮೂಲಕ ಟೆಸ್ಟ್ ಕ್ರಿಕೆಟ್ ಪಾಠ ಹೇಳಲು ಬಂದಿದ್ದ ಆಂಗ್ಲರಿಗೆ, ರೋಹಿತ್ ಪಡೆ (Rohit Sharma) ಸರಿಯಾಗಿಯೇ ಬುದ್ದಿ ಕಲಿಸಿದೆ. ಟೀಂ ಇಂಡಿಯಾ ವಿರುದ್ಧದ ಸೋಲಿನ ಪರಿಣಾಮ ಇಂಗ್ಲೆಂಡ್ ತಂಡದ ಕೋಚ್​ ಬ್ರೆಂಡನ್ ಮೆಕಲಮ್ (Brendon McCullum ) ಹೇಳಿಕೆಯಿಂದ ಬಹಿರಂಗಗೊಂಡಿದೆ.​

ತನ್ನ ಆಕ್ರಮಣಕಾರಿ ಮತ್ತು ನಿರ್ಭೀತ ಕ್ರಿಕೆಟ್ ಶೈಲಿಯಿಂದಾಗಿ, ಇಂಗ್ಲೆಂಡ್ ತಂಡವು ಈ ಬಾರಿಯ ಭಾರತ ಪ್ರವಾಸದಲ್ಲಿ ಯಶಸ್ಸಿನ ನಿರೀಕ್ಷೆಯನ್ನು ಹೊಂದಿತ್ತು. ಸರಣಿ ಆರಂಭವಾದ ರೀತಿಯೂ ಉದ್ದೇಶಗಳಿಗೆ ಬಲ ನೀಡಿತು. ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಅಚ್ಚರಿ ಮೂಡಿಸಿ ಗೆಲುವು ಸಾಧಿಸಿತ್ತು. ಈ ಗೆಲುವಿನ ನಂತರ, ಅದರ ಪ್ರದರ್ಶನದಲ್ಲಿ ಮತ್ತಷ್ಟು ಸುಧಾರಣೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಉಳಿದ ನಾಲ್ಕು ಪಂದ್ಯಗಳಲ್ಲಿ ನಡೆದ ಕಥೆಯೇ ಬೇರೆಯದ್ದಾಗಿತ್ತು.

IND vs ENG: 5ನೇ ಟೆಸ್ಟ್​ ಮೊದಲ ಇನ್ನಿಂಗ್ಸ್​ನಲ್ಲೇ ಹಲವು ದಾಖಲೆ ಬರೆದ ಜೈಸ್ವಾಲ್..! ಪಟ್ಟಿ ಇಲ್ಲಿದೆ

ನಮ್ಮ ದೌರ್ಬಲ್ಯಗಳನ್ನು ತೆರೆದಿಟ್ಟಿದೆ

ಧರ್ಮಶಾಲಾದಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿ ತಂಡದ ಹೀನಾಯ ಸೋಲಿನ ನಂತರ, ಕೋಚ್ ಬ್ರೆಂಡನ್ ಮೆಕಲಮ್ ತಮ್ಮ ತಂಡದ ದೌರ್ಬಲ್ಯ ಮತ್ತು ನ್ಯೂನತೆಗಳನ್ನು ಬಹಿರಂಗವಾಗಿ ಒಪ್ಪಿಕೊಂಡರು. ನ್ಯೂಜಿಲೆಂಡ್‌ನ ಮಾಜಿ ನಾಯಕ ಮೆಕಲಮ್, ತಂಡದ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಸರಣಿಯು ಮುಂದುವರೆದಂತೆ ತಮ್ಮ ತಂಡದ ವೈಫಲ್ಯ ಅನುಭವಿಸಿದ ರೀತಿ ನಮ್ಮನ್ನು ಗಂಭೀರವಾದ ಚರ್ಚೆಗೀಡು ಮಾಡಿದೆ.

ಭಾಝ್ ಬಾಲ್ ಕ್ರಿಕೆಟ್​ನಲ್ಲಿ ಕೆಲವು ಬದಲಾವಣೆಗಳ ಅಗತ್ಯವಿದೆ. ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 28 ರನ್‌ಗಳಿಂದ ಗೆದ್ದಿತ್ತು. ಆದರೆ ಇದರ ನಂತರ ಟೀಂ ಇಂಡಿಯಾ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಪುನರಾಗಮನ ಮಾಡಿತು. ಈ ಸರಣಿ ನಮ್ಮ ದೌರ್ಬಲ್ಯಗಳನ್ನು ತೆರೆದಿಟ್ಟಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಮತ್ತು ನಮ್ಮ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

ಬದಲಾವಣೆ ಅಗತ್ಯ- ಮೆಕಲಮ್

ಟೀಂ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಆಟದ ಪ್ರತಿಯೊಂದು ವಿಭಾಗದಲ್ಲೂ ನಮ್ಮನ್ನು ಒತ್ತಡಕ್ಕೆ ಒಳಪಡಿಸಿತು. ಅತಿ ಆಕ್ರಮಣಕಾರಿ ಆಟದ ಭಾಝ್ ಬಾಲ್ ಯುಗದಲ್ಲಿ ಇಂಗ್ಲೆಂಡ್‌ ಸೋತ ಮೊದಲ ಸರಣಿ ಇದಾಗಿದೆ. ನಮ್ಮ ತಂಡ ಕಳೆದ ಮೂರು ಸರಣಿಗಳಲ್ಲಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಭಾಝ್ ಬಾಲ್‌ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ. ನಾವು ಬಯಸಿದ ರೀತಿಯಲ್ಲಿ ಆಡಲು ಭಾರತ ಬಿಡಲಿಲ್ಲ. ನಾವು ನಮ್ಮ ಶೈಲಿಯನ್ನು ಪರಿಶೀಲಿಸಬೇಕು ಮತ್ತು ಸುಧಾರಿಸಬೇಕು. ಎಂದು ಮೆಕಲಮ್ ಹೇಳಿದರು.

ಮೊದಲ ಬಾರಿಗೆ ಸೋಲು

2022ರಲ್ಲಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿ ನೇಮಕಗೊಂಡ ಬ್ರೆಂಡನ್‌ ಮೆಕಲಮ್‌ ಅವರ ಅವಧಿಯಲ್ಲಿ ಆಂಗ್ಲರ ತಂಡದ ಆಟದ ಶೈಲಿಯೇ ಬದಲಾಗಿತ್ತು ಮತ್ತು ನಿರ್ಭೀತ ಕ್ರಿಕೆಟ್‌ ಆಡುತ್ತಿತ್ತು. ಈ ಅವಧಿಯಲ್ಲಿ ತಂಡವು ಸ್ವಲ್ಪ ಯಶಸ್ಸನ್ನು ಸಾಧಿಸಿತ್ತು. ಆದರೆ ಅದರ ದೊಡ್ಡ ಪರೀಕ್ಷೆ ಭಾರತ ಪ್ರವಾಸವಾಗಿತ್ತು. ಇದೀಗ ಭಾರತ ಪ್ರವಾಸದಲ್ಲಿ ಸಂಪೂರ್ಣವಾಗಿ ವಿಫಲವಾದ ಇಂಗ್ಲೆಂಡ್ ಇನ್ನಾದರೂ ತನ್ನ ಆಟದ ಶೈಲಿಯನ್ನು ಪರಿಸ್ಥಿತಿಗೆ ತಕ್ಕಂತೆ ಬದಲಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Mon, 11 March 24