IND vs ENG: ಈತನ ದಾಳಿಯನ್ನು ಎದುರಿಸಲು ಸಿದ್ಧರಾಗಿರಬೇಕು; ಇಂಗ್ಲೆಂಡ್‌ ತಂಡಕ್ಕೆ ಕೋಚ್ ಎಚ್ಚರಿಕೆ

India vs England: ಎಡ್ಜ್‌ಬಾಸ್ಟನ್‌ನಲ್ಲಿ ಭಾರತದ ಭರ್ಜರಿ ಗೆಲುವಿನ ನಂತರ, ಇಂಗ್ಲೆಂಡ್ ತಂಡ ಲಾರ್ಡ್ಸ್‌ ಪಂದ್ಯಕ್ಕೆ ತಂತ್ರ ಬದಲಾಯಿಸಲು ಯೋಜಿಸುತ್ತಿದೆ. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲೂ ಭಾರತದ ವೇಗದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡದ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ತಮ್ಮ ತಂಡಕ್ಕೆ ಬುಮ್ರಾ ಅವರ ಆಗಮನಕ್ಕೆ ಸಿದ್ಧರಾಗುವಂತೆ ಎಚ್ಚರಿಸಿದ್ದಾರೆ.

IND vs ENG: ಈತನ ದಾಳಿಯನ್ನು ಎದುರಿಸಲು ಸಿದ್ಧರಾಗಿರಬೇಕು; ಇಂಗ್ಲೆಂಡ್‌ ತಂಡಕ್ಕೆ ಕೋಚ್ ಎಚ್ಚರಿಕೆ
Team India

Updated on: Jul 07, 2025 | 8:59 PM

ಎಡ್ಜ್‌ಬಾಸ್ಟನ್‌ನಲ್ಲಿ ಆತಿಥೇಯ ಆಂಗ್ಲರನ್ನು 336 ರನ್​ಗಳಿಂದ ಮಣಿಸಿರುವ ಟೀಂ ಇಂಡಿಯಾದ (Team India) ಆತ್ಮವಿಶ್ವಾಸ ಇಮ್ಮಡಿಕೊಂಡಿದೆ. ಅದರಲ್ಲೂ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಇಲ್ಲದ ಹೊರತಾಗಿಯೂ ಟೀಂ ಇಂಡಿಯಾದ ಅನಾನುಭವಿ ವೇಗದ ಬೌಲಿಂಗ್ ವಿಭಾಗ ಆಂಗ್ಲರನ್ನು ಹೀನಾಯವಾಗಿ ಸೋಲಿಸಿರುವುದು ಅವರ ನಿದ್ದೆಗೆಡಿಸಿದೆ. ಹೀಗಾಗಿ ಇಂಗ್ಲೆಂಡ್‌ ತಂಡ ಮುಂಬರುವ ಲಾರ್ಡ್ಸ್‌ ಟೆಸ್ಟ್ (Lord’s Test) ಪಂದ್ಯಕ್ಕೆ ಬೇರೆಯದ್ದೇ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಅದರ ಭಾಗವಾಗಿ ತಂಡಕ್ಕೆ ಮತ್ತೊಬ್ಬ ವೇಗಿಯ ಆಗಮನವಾಗಿದ್ದರೆ, ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ವೇಗಿ ಜೋಪ್ರಾ ಆರ್ಚರ್​ ಅವರನ್ನು ಮೂರನೇ ಪಂದ್ಯದಲ್ಲಿ ಕಣಕ್ಕಿಳಿಸಲು ಮುಂದಾಗಿದೆ. ಇದೆಲ್ಲದರ ನಡುವೆ ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ತಮ್ಮ ತಂಡಕ್ಕೆ ಎಚ್ಚರಿಕೆಯೊಂದನ್ನು ಸಹ ನೀಡಿದ್ದಾರೆ.

ಎಚ್ಚರಿಕೆ ನೀಡಿದ ಮೆಕಲಮ್

ಈ ಮೊದಲೇ ವರದಿಯಾದ್ದಂತೆ ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಈ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಲಿದ್ದಾರೆ. ಅದರಂತೆ ಎಡ್ಜ್‌ಬಾಸ್ಟನ್ ಟೆಸ್ಟ್​ನಿಂದ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಲಾರ್ಡ್ಸ್‌ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಬುಮ್ರಾ ಇಲ್ಲದೆಯೇ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಭಾರತಕ್ಕೆ ಬುಮ್ರಾ ಆಗಮನ ಮತ್ತಷ್ಟು ಬಲ ನೀಡಲಿದೆ. ಹೀಗಾಗಿ ಇದರ ಪರಿಣಾಮವನ್ನು ಟೆಸ್ಟ್ ಪಂದ್ಯಕ್ಕೂ ಮುನ್ನವೇ ಮನಗಂಡಿರುವ ಇಂಗ್ಲೆಂಡ್‌ ಕೋಚ್ ಬ್ರೆಂಡನ್ ಮೆಕಲಮ್ ತಮ್ಮ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾರನ್ನು ಎದುರಿಸಲು ಸಿದ್ಧರಾಗಿರಬೇಕು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ನಾವು ಚೆನ್ನಾಗಿ ಸಿದ್ಧರಾಗಿರಬೇಕು

ಈ ಬಗ್ಗೆ ಮಾತನಾಡಿರುವ ಮೆಕಲಮ್, ‘ಮುಂದಿನ ಪಂದ್ಯದಲ್ಲಿ ಬುಮ್ರಾ ಆಡುವ ಎಲ್ಲಾ ಸಾಧ್ಯತೆಗಳಿವೆ. ಆದ್ದರಿಂದ ನಾವು ಚೆನ್ನಾಗಿ ಸಿದ್ಧರಾಗಿರಬೇಕು. ಲಾರ್ಡ್ಸ್‌ ಪಿಚ್ ಬರ್ಮಿಂಗ್ಹ್ಯಾಮ್‌ಗಿಂತ ಭಿನ್ನವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ, ಇದು ನಮಗೆ ಒಳ್ಳೆಯದು. ಎರಡನೇ ಟೆಸ್ಟ್‌ನ ಐದು ದಿನವೂ ನಾವು ಟೀಂ ಇಂಡಿಯಾ ವಿರುದ್ಧ ಮೇಲುಗೈ ಸಾಧಿಸಲು ಆಗಲಿಲ್ಲ. ಆದರೆ ಭಾರತ ತಂಡ ಮಾತ್ರ ಎಲ್ಲಾ ಐದು ದಿನ ಅದ್ಭುತ ಪ್ರದರ್ಶನ ನೀಡಿತು. ಶುಭ್‌ಮನ್ ಗಿಲ್ ಒಬ್ಬ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಅವರು ಈ ಪಿಚ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆದರೆ ನಾವು ಬಯಸಿದಂತೆ ಎಡ್ಜ್‌ಬಾಸ್ಟನ್​ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಟೀಂ ಇಂಡಿಯಾ ಗೆಲುವಿಗೆ ಸಂಪೂರ್ಣವಾಗಿ ಅರ್ಹವಾಗಿದೆ.

IND vs ENG: ಲಾರ್ಡ್ಸ್‌ ಟೆಸ್ಟ್​ಗೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಖಚಿತ ಎಂದ ಹೆಡ್ ಕೋಚ್

ನಮ್ಮದು ತಪ್ಪು ನಿರ್ಧಾರವಾಗಿತ್ತು

ಟಾಸ್ ಗೆದ್ದ ನಂತರ ಇಂಗ್ಲೆಂಡ್, ಭಾರತವನ್ನು ಬ್ಯಾಟಿಂಗ್‌ಗೆ ಅಹ್ವಾನಿಸಿದ್ದು ತಪ್ಪು ನಿರ್ಧಾರವಾಗಿತ್ತು ಮತ್ತು ಒಟ್ಟಾರೆಯಾಗಿ ಪಿಚ್ ಅನ್ನು ಸಹ ನಾವು ತಪ್ಪಾಗಿ ಅರ್ಥೈಸಿಕೊಂಡೆವು. ಪಂದ್ಯ ಮುಂದುವರೆದಂತೆ, ಟಾಸ್ ಬಗ್ಗೆ ಯೋಚಿಸಿದ ನಾವು ಅವಕಾಶವನ್ನು ಕಳೆದುಕೊಂಡೆವು ಎಂಬುದನ್ನು ಅರಿತುಕೊಂಡೆವು. ಪಂದ್ಯ ಮುಂದುವರೆದಂತೆ ವಿಕೆಟ್ ಇಷ್ಟು ಚೆನ್ನಾಗಿ ವರ್ತಿಸುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಬಹುಶಃ ನಾವು ಸ್ವಲ್ಪ ತಪ್ಪು ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ನನಗಿನಿಸುತ್ತದೆ ಎಂದು ಮೆಕಲಮ್ ಹೇಳಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ