
ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟಕ್ಕೆ ಕಾಲಿಟ್ಟಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ದ್ವಿತೀಯ ದಿನದಾಟದಲ್ಲಿ ಅರ್ಧಶತಕ ಪೂರೈಸಿದ್ದ ಯಶಸ್ವಿ ಜೈಸ್ವಾಲ್ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಬ್ಯಾಟಿಂಗ್ ವೇಳೆ ಜಡೇಜಾ ಅವರಿಗೆ ಸಮಸ್ಯೆಗಳು ಎದುರಾಗಿದ್ದವು. ಆದರೆ ಈ ಸಮಸ್ಯೆಗಳು ಎದುರಾಗಿದ್ದು ಬೌಲರ್ಗಳಿಂದ ಅಲ್ಲ. ಬದಲಾಗಿ ಸ್ಟೇಡಿಯಂ ಗ್ಯಾಲರಿಯಲ್ಲಿ ಕೂತಿದ್ದ ಪ್ರೇಕ್ಷಕನಿಂದ..!
ಹೌದು, ಮೂರನೇ ದಿನದಾಟದಂದು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ ಉತ್ತಮ ಆರಂಭ ಪಡೆದಿದ್ದರು. ಇದರ ನಡುವೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬರ ಟಿ-ಶರ್ಟ್ ಜಡೇಜಾ ಅವರ ಕಣ್ಣು ಕುಕ್ಕಲಾರಂಭಿಸಿದೆ.
ಪ್ರೇಕ್ಷಕರೊಬ್ಬರು ಸ್ಟ್ರೈಟ್ ಗ್ಯಾಲರಿಯಲ್ಲಿ ರೆಡ್ ಟಿ-ಶರ್ಟ್ ಧರಿಸಿ ಕೂತಿದ್ದರಿಂದ ಇತ್ತ ಜಡೇಜಾ ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ವಿಷಯವನ್ನು ಅವರು ಆನ್-ಫೀಲ್ಡ್ ಅಂಪೈರ್ ಕುಮಾರ್ ಧರ್ಮಸೇನ ಅವರಿಗೆ ತಿಳಿಸಿದರು.
ತಕ್ಷಣವೇ ಅಂಪೈರ್, ಸ್ಟೇಡಿಯಂ ಸಿಬ್ಬಂದಿಗೆ ತಿಳಿಸಿ ರೆಡ್ ಟಿ-ಶರ್ಟ್ ಧರಿಸಿದ ಪ್ರೇಕ್ಷಕನನ್ನು ಅಲ್ಲಿಂದ ಸ್ಥಳಾಂತರಿಸುವಂತೆ ಕೇಳಿಕೊಂಡರು. ಆದರೆ ತಾನು ಕೂತಿದ್ದ ಜಾಗದಿಂದ ಕದಲಲು ರೆಡ್ ಟಿ-ಶರ್ಟ್ ಪ್ರೇಕ್ಷಕ ಒಪ್ಪಲಿಲ್ಲ.
ಈ ವೇಳೆ ಸಮಸ್ಯೆಯನ್ನು ತಿಳಿಸಿದ ಮೈದಾನದ ಸಿಬ್ಬಂದಿಯೊಬ್ಬರು, ಅವರಿಗೆ ಬೂದು ಬಣ್ಣದ ಟಿ-ಶರ್ಟ್ ನೀಡಿದರು. ಪ್ರೇಕ್ಷಕ ತನ್ನ ರೆಡ್ ಟಿ-ಶರ್ಟ್ ಮೇಲೆ ಮತ್ತೊಂದು ಟಿ-ಶರ್ಟ್ ಧರಿಸುತ್ತಿದ್ದಂತೆ ರವೀಂದ್ರ ಜಡೇಜಾ ಥಂಬ್ಸ್-ಅಪ್ ಮೂಲಕ ಧನ್ಯವಾದ ತಿಳಿಸಿದರು.
Red shirt, but total green flag 💚#SonySportsNetwork #ENGvIND #NayaIndia #DhaakadIndia #TeamIndia #ExtraaaInnings pic.twitter.com/gkV3t21x6K
— Sony Sports Network (@SonySportsNetwk) August 2, 2025
ಇನ್ನು ಆ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ರವೀಂದ್ರ ಜಡೇಜಾ 77 ಎಸೆತಗಳನ್ನು ಎದುರಿಸಿ 5 ಫೋರ್ಗಳೊಂದಿಗೆ 53 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಢಿಯಾ ದ್ವಿತೀಯ ಇನಿಂಗ್ಸ್ನಲ್ಲಿ 396 ರನ್ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಬೌಲರ್ ಎಂಡ್ನ ಗ್ಯಾಲರಿಯಲ್ಲಿ ರೆಡ್ ಟಿ-ಶರ್ಟ್ ಧರಿಸಿದ ಪ್ರೇಕ್ಷಕರಿದ್ದರೆ ಕೆಲ ಬ್ಯಾಟರ್ಗಳಿಗೆ ಸಮಸ್ಯೆಯಾಗುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ಚೆಂಡನ್ನು ಗುರುತಿಸಲು ಸಾಧ್ಯವಾಗದೇ ಇರುವುದು. ಅಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ರೆಡ್ ಬಾಲ್ ಬಳಸಲಾಗುತ್ತದೆ. ಅತ್ತ ಸಂಪೂರ್ಣ ಏಕಾಗ್ರತೆಯಿಂದ ಬ್ಯಾಟರ್ ಚೆಂಡನ್ನು ಎದುರು ನೋಡುತ್ತಿರುತ್ತಾರೆ.
ಇದನ್ನೂ ಓದಿ: ಆರ್ಚರ್ ಅಲ್ಲ… ಇಂಗ್ಲೆಂಡ್ ಪರ ಕಣಕ್ಕಿಳಿದ ತಂಡದಲ್ಲಿರದ ಆಟಗಾರ
ಇದೇ ವೇಳೆ ರೆಡ್ ಬಣ್ಣದ ಬಟ್ಟೆ ಧರಿಸಿದ ಪ್ರೇಕ್ಷಕರು ನೇರವಾಗಿ ಕೂತಿದ್ದರೆ ರೆಡ್ ಬಾಲ್ ಅನ್ನು ಗುರುತಿಸುವಲ್ಲಿ ಬ್ಯಾಟರ್ಗಳು ಎಡವುತ್ತಾರೆ. ಇದೇ ಸಮಸ್ಯೆ ಎದುರಾಗುತ್ತಿರುವುದರಿಂದ ರವೀಂದ್ರ ಜಡೇಜಾ ಕೂಡ ರೆಡ್ ಟಿ-ಶರ್ಟ್ ಧರಿಸಿದ್ದ ಪ್ರೇಕ್ಷಕನ ಬಗ್ಗೆ ಅಂಪೈರ್ಗೆ ತಿಳಿಸಿದ್ದರು. ಹೀಗಾಗಿ ರೆಡ್ ಟಿ-ಶರ್ಟ್ ಪ್ರೇಕ್ಷಕ ಟಿ-ಶರ್ಟ್ ಮೇಲೆ ಟಿ-ಶರ್ಟ್ ಧರಿಸಿ ಪಂದ್ಯ ವೀಕ್ಷಿಸಬೇಕಾಯಿತು.
Published On - 10:54 am, Sun, 3 August 25