
ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಜುಲೈ 2 ರಿಂದ ಶುರುವಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲವೆನ್ನಲ್ಲಿ ಮಹತ್ವದ ಬದಲಾವಣೆ ಮಾಡಬೇಕೆಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಕ್ಲಾರ್ಕ್ ಪ್ರಕಾರ, ಎಡ್ಜ್ಬಾಸ್ಟನ್ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಿದ್ದರೆ ಕುಲ್ದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು. ಇದರಿಂದ ಆಂಗ್ಲರ ವಿರುದ್ಧ ಭಾರತ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು ಎಂದು ಹೇಳಿದ್ದಾರೆ.
ಒಬ್ಬ ಬೌಲರ್ ಆಗಿ, ನಾನು ಯಾವುದೇ ಒಬ್ಬ ಆಟಗಾರನ ಬಗ್ಗೆ ಕೆಟ್ಟದಾಗಿ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ನೀವು ಖಂಡಿತವಾಗಿಯೂ ಕುಲ್ದೀಪ್ ಯಾದವ್ ಅವರನ್ನು ಆಡಿಸಬೇಕು . ಅವರಿಗೆ ತಂಡದಲ್ಲಿ ಸ್ಥಾನ ನೀಡಬೇಕು. ಕುಲ್ದೀಪ್ ವಿಕೆಟ್ ತೆಗೆದುಕೊಳ್ಳುವಂತಹ ಬೌಲರ್. ಅಂತಹ ಬೌಲರ್ ತಂಡದಲ್ಲಿರಲೇಬೇಕು.
ಭಾರತ ತಂಡವು ಹೆಚ್ಚುವರಿ ಬ್ಯಾಟ್ಸ್‌ಮನ್ ಬಗ್ಗೆ ಯೋಚಿಸುತ್ತಾರೆ. ಆದರೆ ಅವರು ವಿಶ್ವದ ನಂಬರ್ 1 ಸ್ಪಿನ್ನರ್ ಅನ್ನು ಆಯ್ಕೆ ಮಾಡಲು ಹೆದರುತ್ತಾರೆ. ಟೀಮ್ ಇಂಡಿಯಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮುಖ್ಯ ಅಂಶವೆಂದರೆ, ಇಂಗ್ಲೆಂಡ್ನಲ್ಲಿ ಗೆಲ್ಲಬೇಕಿದ್ದರೆ ಅವರನ್ನು ಆಲೌಟ್ ಮಾಡಲೇಬೇಕು. ಹೀಗಾಗಿ ವಿಕೆಟ್ ಟೇಕರ್ ಬೌಲರ್ಗಳಿಗೆ ಅವಕಾಶ ನೀಡಬೇಕು. ಅದರಂತೆ ಕುಲ್ದೀಪ್ ಯಾದವ್ ಅವರನ್ನು ಆಡಿಸುವುದು ಉತ್ತಮ ಮೈಕೆಲ್ ಕ್ಲಾರ್ಕ್ ಬಿಯಾಂಡ್ 23 ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.
ಇದೇ ವೇಳೆ ಮಾತನಾಡಿದ ಇಂಗ್ಲೆಂಡ್ನ ಮಾಜಿ ಆಟಗಾರ ನಿಕ್ ನೈಟ್, ಕುಲ್ದೀಪ್ ಯಾದವ್ ಕಣಕ್ಕಿಳಿಯುವುದರಿಂದ ಇಂಗ್ಲೆಂಡ್ ತಂಡವು ತೊಂದರೆಗೆ ಸಿಲುಕಬಹುದು. ಏಕೆಂದರೆ ಆಂಗ್ಲ ಬ್ಯಾಟರ್ಗಳು ಆಕ್ರಮಣಕಾರಿ ಕ್ರಿಕೆಟ್ ಆಡುತ್ತಿದ್ದಾರೆ. ಇದರಿಂದ ಕುಲ್ದೀಪ್ ಯಾದವ್ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಅವರು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್ಫುಲ್ ಶತಕ
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಸರಣಿಯಲ್ಲಿ ಆಂಗ್ಲರು 1-0 ಅಂತರದಿಂದ ಮುನ್ನಡೆ ಹೊಂದಿದ್ದಾರೆ. ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 5 ವಿಕೆಟ್ಗಳಿಂದ ಮಣಿಸಿ ಇಂಗ್ಲೆಂಡ್ ತಂಡ ಶುಭಾರಂಭ ಮಾಡಿದೆ. ಇದೀಗ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಡೇಡಿಯಂನಲ್ಲಿ ನಡೆಯಲಿರುವ ದ್ವಿತೀಯ ಪಂದ್ಯದ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಲು ಟೀಮ್ ಇಂಡಿಯಾ ಪ್ಲ್ಯಾನ್ ರೂಪಿಸುತ್ತಿದೆ. ಈ ತಂತ್ರಗಳೊಂದಿಗೆ ಕುಲ್ದೀಪ್ ಯಾದವ್ ಅವರನ್ನು ಸಹ ಕಣಕ್ಕಿಳಿಸಬೇಕೆಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಸಲಹೆ ನೀಡಿದ್ದಾರೆ.
Published On - 9:33 am, Sat, 28 June 25