
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ಜ.25) ಶುರುವಾಗಲಿದೆ. ಮೊದಲ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಕಿಂಗ್ ಕೊಹ್ಲಿ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ.
ವಿರಾಟ್ ಕೊಹ್ಲಿ ಅಲಭ್ಯತೆಯ ಹೊರತಾಗಿಯೂ ಟೀಮ್ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಏಕೆಂದರೆ ಭಾರತ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ಹೀಗಾಗಿ ಉತ್ತಮ ಸಮತೋಲನದ ಆಡುವ ಬಳಗವನ್ನು ರೂಪಿಸುವ ಆಯ್ಕೆ ಟೀಮ್ ಇಂಡಿಯಾ ಮುಂದಿದೆ.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಹಾಗೂ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇನ್ನು ಶುಭ್‌ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ವಿರಾಟ್ ಕೊಹ್ಲಿಯ ಸ್ಥಾನದಲ್ಲಿ 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಇನ್ನು ಐದನೇ ಕ್ರಮಾಂಕವು ಕೆಎಲ್ ರಾಹುಲ್ಗೆ ಖಾಯಂ ಎನ್ನಬಹುದು.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಎಂದು ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಸದ್ಯ ತಂಡದಲ್ಲಿರುವ ಅನುಭವಿ ವಿಕೆಟ್ ಕೀಪರ್ ಎಂದರೆ ಕೆಎಸ್ ಭರತ್. ಹೀಗಾಗಿ ಮೊದಲ ಪಂದ್ಯದಲ್ಲಿ ಭರತ್ ಅವರೇ ವಿಕೆಟ್ ಕೀಪರ್-ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಹೈದರಾಬಾದ್ ಪಿಚ್ ಸ್ಪಿನ್ನರ್ಗಳಿಗೆ ಸಹಕಾರಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಟೀಮ್ ಇಂಡಿಯಾ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯಬಹುದು. ಅದರಂತೆ ಸ್ಪಿನ್ ಆಲ್ರೌಂಡರ್ಗಳಾಗಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ವೇಗಿಗಳಾಗಿ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಕಣಕ್ಕಿಳಿಯಲಿದ್ದಾರೆ. ಅದರಂತೆ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ.
ಇದನ್ನೂ ಓದಿ: Virat Kohli: ಮೈದಾನಕ್ಕಿಳಿಯದೇ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.