ಅಪ್ಪನ ಆರೋಪಗಳ ನಡುವೆ ಮಡದಿಗೆ ವಿಶೇಷ ಪ್ರಶಸ್ತಿಯನ್ನು ಅರ್ಪಿಸಿದ ಜಡೇಜಾ

|

Updated on: Feb 19, 2024 | 6:45 PM

Ravindra jadeja: ಜಡೇಜಾ ಅವರ ತಂದೆ ತಮ್ಮ ಸೊಸೆ ರಿವಾಬಾ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಹೆಂಡತಿಯ ಮಾತುಗಳನ್ನು ಕೇಳಿ ನನ್ನ ಮಗ ನನ್ನಿಂದ ದೂರವಿದ್ದಾನೆ ಎಂದು ಜಡೇಜಾ ತಂದೆ, ಅನಿರುದ್ಧ್ ಸಿಂಗ್ ಜಡೇಜಾ ಆರೋಪ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹೆಂಡತಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿರುವ ಜಡೇಜಾ, ಮಡದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ಅಪ್ಪನ ಆರೋಪಗಳ ನಡುವೆ ಮಡದಿಗೆ ವಿಶೇಷ ಪ್ರಶಸ್ತಿಯನ್ನು ಅರ್ಪಿಸಿದ ಜಡೇಜಾ
ರವೀಂದ್ರ ಜಡೇಜಾ, ಮಡದಿ ರಿವಾಬ
Follow us on

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ರಾಜ್‌ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಚೆಂಡು ಹಾಗೂ ಬ್ಯಾಟಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇದರಿಂದಾಗಿ ಡ್ಯಾಶಿಂಗ್ ಆಟಗಾರನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಜಡೇಜಾ ಈ ಪ್ರಶಸ್ತಿಯನ್ನು ಸ್ವೀಕರಿಸಿದ ತಕ್ಷಣ, ಅವರು ಅದನ್ನು ತಮ್ಮ ಪತ್ನಿ ರಿವಾಬ (Rivaba Jadeja)  ಅವರಿಗೆ ಅರ್ಪಿಸಿದರು. ಇತ್ತೀಚೆಗೆ ಜಡೇಜಾ ಅವರ ತಂದೆ ತಮ್ಮ ಸೊಸೆ ರಿವಾಬ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದರು. ಹೆಂಡತಿಯ ಮಾತುಗಳನ್ನು ಕೇಳಿ ನನ್ನ ಮಗ ನನ್ನಿಂದ ದೂರವಿದ್ದಾನೆ ಎಂದು ಜಡೇಜಾ ತಂದೆ, ಅನಿರುದ್ಧ್ ಸಿಂಗ್ ಜಡೇಜಾ ಆರೋಪ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಹೆಂಡತಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿರುವ ಜಡೇಜಾ, ಮಡದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್​ಗಳ ನಿರ್ಣಾಯಕ ಶತಕ ಸಿಡಿಸಿದ್ದ ಜಡೇಜಾ, ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಹಾಗೂ ಒಟ್ಟಾರೆ ಮೂರನೇ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದರು. ಅಲ್ಲದೆ ಜಡೇಜಾ, ರವಿಚಂದ್ರನ್ ಅಶ್ವಿನ್ ನಂತರ ಟೆಸ್ಟ್‌ನಲ್ಲಿ ಶತಕ ಮತ್ತು ಐದು ವಿಕೆಟ್‌ಗಳನ್ನು ಪಡೆದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡರು. ಈ ಆಲ್‌ರೌಂಡರ್ ಪ್ರದರ್ಶನಕ್ಕಾಗಿ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

ಮಡದಿಗೆ ಪ್ರಶಸ್ತಿ ಅರ್ಪಿಸಿದ ಜಡ್ಡು

ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಡೇಜಾ, “ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದದ್ದು ವಿಶೇಷ ಅನುಭವ. ಅದೂ ಕೂಡ ಒಂದೇ ಟೆಸ್ಟ್‌ನಲ್ಲಿ ಶತಕ ಮತ್ತು ಐದು ವಿಕೆಟ್ ಪಡೆದಿರುವುದು ಇನ್ನಷ್ಟು ವಿಶೇಷವಾಗಿದೆ. ಅಲ್ಲದೆ ನನ್ನ ತವರು ನೆಲದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯುವುದು ಸ್ಮರಣೀಯವಾಗಿದೆ. ನಾನು ಈ ಪ್ರಶಸ್ತಿಯನ್ನು ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ. ಅವಳು ನನ್ನನ್ನು ಮಾನಸಿಕವಾಗಿ ಸಧೃಡಗೊಳಿಸಲು ತೆರೆಮರೆಯಲ್ಲಿ ಸಾಕಷ್ಟು ಶ್ರಮಿಸುತ್ತಾಳೆ. ಹಾಗೆಯೇ ಯಾವಾಗಲೂ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತಾಳೆ ಎಂದಿದ್ದಾರೆ.

ರಿವಾಬ ವಿರುದ್ಧ ಜಡೇಜಾ ತಂದೆಯ ಆರೋಪ

ವಾಸ್ತವವಾಗಿ ಕೆಲವು ದಿನಗಳ ಹಿಂದೆ ಸ್ಥಳೀಯ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ರಿವಾಬ ಅವರ ಮಾವ ಅನಿರುದ್ಧ್ ಸಿಂಗ್ ಜಡೇಜಾ ಅವರು ಸೊಸೆ ರಿವಾಬ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ‘ನನಗೂ ನನ್ನ ಮಗ ರವೀಂದ್ರ ಮತ್ತು ಅವರ ಪತ್ನಿ ರಿವಾಬ ಅವರೊಂದಿಗೆ ಯಾವುದೇ ಸಂಬಂಧವಿಲ್ಲ. ನಾವು ಅವರನ್ನು ಕರೆಯುವುದಿಲ್ಲ, ಅವರು ನಮ್ಮನ್ನು ಕರೆಯುವುದಿಲ್ಲ. ನನ್ನ ಮಗ ಮದುವೆಯಾದ ಎರಡು, ಮೂರು ತಿಂಗಳ ನಂತರ ಸಮಸ್ಯೆಗಳು ಪ್ರಾರಂಭವಾದವು. ಆ ಬಳಿಕ ನನ್ನ ಮಗ ಮನೆ ತೊರೆದು ಬೇರೆಡೆ ವಾಸಿಸಲು ಆರಂಭಿಸಿದ. ಪ್ರಸ್ತುತ ನಾನು ಜಾಮ್‌ನಗರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಆದರೆ ನನ್ನ ಮಗ ರವೀಂದ್ರ ತನ್ನದೇ ಆದ ಪ್ರತ್ಯೇಕ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ನನ್ನ ಮಡದಿಗೆ ಬರುವ ಪಿಂಚಣೆಯಲ್ಲಿ ಜೀವನ ಸಾಗಿಸುತ್ತಿದ್ದೇನೆ. ನನ್ನ ಮಗನಿಗೆ ಹೆಂಡತಿ ರಿವಾಬ ಏನು ಮೋಡಿ ಮಾಡಿದ್ದಾಳೆಂದು ನನಗೆ ತಿಳಿದಿಲ್ಲ. ನನ್ನ ಮಗ ನಮ್ಮಿಂದ ದೂರಾಗಿದ್ದಾನೆ ಎಂದಿದ್ದರು.

ಪತ್ನಿಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದ ಜಡೇಜಾ

ತಂದೆಯ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಜಡೇಜಾ ಅವರು ತಮ್ಮ ಹೆಂಡತಿಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು, ಇದು ಪೂರ್ವ ನಿಯೋಜಿತ ಸಂದರ್ಶನ. ಇದರಲ್ಲಿ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರವಾದ್ದವು. ಹೀಗಾಗಿ ನಾನುಈ ಆರೋಪಗಳೆಲ್ಲವನ್ನು ನಿರಾಕರಿಸುತ್ತೇನೆ. ನನ್ನ ಹಾಗೂ ನನ್ನ ಹೆಂಡತಿಯ ಇಮೇಜ್ ಹಾಳು ಮಾಡುವ ಯತ್ನ ನಡೆಯುತ್ತಿದೆ. ನನಗೂ ಹೇಳಲು ಸಾಕಷ್ಟಿದೆ. ಆದರೆ ನಾನು ಅದನ್ನು ಸಾರ್ವಜನಿಕವಾಗಿ ಹೇಳಲು ಬಯಸುವುದಿಲ್ಲ ಎಂದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Mon, 19 February 24