IND vs ENG: ಬಲಿಷ್ಠ ಆಂಗ್ಲರನ್ನು ಎದುರಿಸಲು ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ; ವಿಡಿಯೋ

|

Updated on: Oct 26, 2023 | 6:32 AM

IND vs ENG, ICC World Cup 2023: ಭಾನುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ವಿಶ್ವಕಪ್ ಹೈವೋಲ್ಟೇಜ್ ಪಂದ್ಯಕ್ಕೆ ಲಕ್ನೋ ಸಜ್ಜಾಗುತ್ತಿದ್ದು, ಬಿಗಿ ಭದ್ರತೆಯ ನಡುವೆ ಟೀಂ ಇಂಡಿಯಾ ಬುಧವಾರ ಸಂಜೆ ನಗರಕ್ಕೆ ಆಗಮಿಸಿದೆ. ಅಕ್ಟೋಬರ್ 29 ರಂದು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

IND vs ENG: ಬಲಿಷ್ಠ ಆಂಗ್ಲರನ್ನು ಎದುರಿಸಲು ಲಕ್ನೋಗೆ ಬಂದಿಳಿದ ಟೀಂ ಇಂಡಿಯಾ; ವಿಡಿಯೋ
ಟೀಂ ಇಂಡಿಯಾ
Follow us on

ಭಾನುವಾರ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ವಿಶ್ವಕಪ್ (ICC World Cup 2023) ಹೈವೋಲ್ಟೇಜ್ ಪಂದ್ಯಕ್ಕೆ ಲಕ್ನೋ ಸಜ್ಜಾಗುತ್ತಿದ್ದು, ಬಿಗಿ ಭದ್ರತೆಯ ನಡುವೆ ಟೀಂ ಇಂಡಿಯಾ (Team India) ಬುಧವಾರ ಸಂಜೆ ನಗರಕ್ಕೆ ಆಗಮಿಸಿದೆ. ಅಕ್ಟೋಬರ್ 29 ರಂದು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Cricket Stadium in Lucknow) ಭಾರತವು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ತಮ್ಮ ಕೊನೆಯ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದ ಟೀಂ ಇಂಡಿಯಾದ ಆಟಗಾರರಿಗೆ ಬಿಸಿಸಿಐ 2 ದಿನಗಳ ರಜೆ ನೀಡಿತ್ತು. ಈ ರಜೆ ಅವಧಿಯಲ್ಲಿ ತಂಡದ ಆಟಗಾರರು ತಮ್ಮ ಕುಟುಂಬದೊಂದಿಗೆ ಸಮಯ ಕಳೆದಿದ್ದರು. ಇದೀಗ ತಂಡ ಕೂಡಿಕೊಂಡಿರುವ ಆಟಗಾರರು ಆಂಗ್ಲರ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಒಂದೆಡೆ ಟೀಂ ಇಂಡಿಯಾ ಪಂದ್ಯಾವಳಿಯಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದರೆ, ಇನ್ನೊಂದೆಡೆ ರೋಹಿತ್ ಪಡೆಯನ್ನು ಸೋಲಿಸಿ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಇಂಗ್ಲೆಂಡ್ ಎದುರು ನೋಡುತ್ತಿದೆ.

ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನ

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇಲ್ಲಿಯವರೆಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಈ ಟೂರ್ನಿಯಲ್ಲಿ ರೋಹಿತ್ ಪಡೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಸೋಲಿಸಿದೆ. ಹೀಗಾಗಿ ತಮ್ಮ ಕಿಸೆಯಲ್ಲಿ 10 ಅಂಕ ಮತ್ತು 1.353 ರ ನಿವ್ವಳ ರನ್ ರೇಟ್‌ ಹೊಂದಿರುವ ಟೀಂ ಇಂಡಿಯಾ ಪಾಯಿಂಟ್ಸ್ ಟೇಬಲ್‌ನಲ್ಲಿ ಸದ್ಯ ಮೊದಲ ಸ್ಥಾನದಲ್ಲಿದೆ. ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಭಾರತದ ಸೆಮಿಫೈನಲ್ ಹಾದಿ ಅಷ್ಟೊಂದು ದುರ್ಗಮವಾಗಿಲ್ಲ. ಆದರೆ ಇಂಗ್ಲೆಂಡ್ ವಿರುದ್ಧದ ಗೆಲುವು ರೋಹಿತ್ ಪಡೆಯ ಆತ್ಮಸ್ಥೈರ್ಯವನ್ನು ದುಪ್ಪಟ್ಟು ಮಾಡಲಿದೆ. ಹಾಗಾಗಿ ಶತಾಯಗತಾಯ ಈ ಪಂದ್ಯವನ್ನು ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

ಹಾರ್ದಿಕ್ ಅನುಮಾನ?

ವರದಿ ಪ್ರಕಾರ, ಅಕ್ಟೋಬರ್ 29 ರಂದು ನಡೆಯಲ್ಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮೈದಾನಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ವರದಿಯಾಗಿದ್ದು, ಹಾರ್ದಿಕ್ ಗಾಯದಿಂದ ಚೇತರಿಸಿಕೊಂಡಿದ್ದಾರಾದರೂ, ಅವರ ವಿಷಯದಲ್ಲಿ ಬಿಸಿಸಿಐ ಯಾವುದೇ ಆತುರವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ  ಅವರಿಗೆ ಇನ್ನೂ ಎರಡು ಪಂದ್ಯಗಳಿಂದ ವಿಶ್ರಾಂತಿ ನೀಡಲು ಚಿಂತಿಸಲಾಗಿದೆ ಎಂದು ವರದಿಯಾಗಿದೆ.

ICC World Cup 2023: ಟೀಂ ಇಂಡಿಯಾಗೆ ಬಿಗ್ ಶಾಕ್; ಮುಂದಿನ 2 ಪಂದ್ಯಗಳಿಗೆ ಹಾರ್ದಿಕ್ ಅಲಭ್ಯ..!

ಇಂಗ್ಲೆಂಡ್‌ನ ಕಳಪೆ ಪ್ರದರ್ಶನ

ಮತ್ತೊಂದೆಡೆ, ಇಂಗ್ಲೆಂಡ್ ಈ ವಿಶ್ವಕಪ್​ನಲ್ಲಿ ಇಲ್ಲಿಯವರೆಗೆ ಕಳಪೆ ಪ್ರದರ್ಶನ ನೀಡಿದೆ. ಹಾಲಿ ಚಾಂಪಿಯನ್ ಆಡಿರುವ ಒಟ್ಟು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು, ಕೇವಲ ಒಂದು ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಭಾರತ ತಂಡವನ್ನು ಎದುರಿಸುವ ಮೊದಲು ಗುರುವಾರ ಶ್ರೀಲಂಕಾವನ್ನು ಎದುರಿಸುತ್ತಿರುವ ಇಂಗ್ಲೆಂಡ್‌ಗೆ ಇದು ಆರನೇ ಪಂದ್ಯವಾಗಿದೆ. ಆದಾಗ್ಯೂ, ಇಲ್ಲಿಂದ ಕೊನೆಯ ನಾಲ್ಕಕ್ಕೆ ಅರ್ಹತೆ ಪಡೆಯುವುದು ಇಂಗ್ಲೆಂಡ್​ಗೆ ತುಂಬಾ ಕಷ್ಟಕರವಾಗಿದೆ. ಆದರೆ ಉಳಿದ ಎಲ್ಲಾ ಪಂದ್ಯಗಳನ್ನು ಆಂಗ್ಲರು ಅತ್ಯಧಿಕ ರನ್​ ರೇಟ್​ನಿಂದ ಗೆದ್ದರೆ ಆಗೊಂದು ಅವಕಾಶ ಸಿಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 6:28 am, Thu, 26 October 23