ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ (India vs Ireland) ವಶಪಡಿಸಿಕೊಂಡಿದೆ. ಇನ್ನು ಈ ಸರಣಿಯಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ ರಿಂಕು ಸಿಂಗ್ಗೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಗಿಟ್ಟಿಸಿಕೊಂಡ ಐಪಿಎಲ್ ಸ್ಟಾರ್ ರಿಂಕು ಸಿಂಗ್ (Rinku Singh) ತಾವು ಬಾಲ್ ಎದುರಿಸಿದ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ನೀಡಿ ಮ್ಯಾನ್ ಆಫ್ ದಿ ಮ್ಯಾಚ್ (Man Of The Match) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ವಾಸ್ತವವಾಗಿ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ನಂತರ ರಿಂಕು ಸಿಂಗ್ ಮತ್ತು ಶಿವಂ ದುಬೆ ಇಬ್ಬರೂ ಟೀಂ ಇಂಡಿಯಾದ ಇನ್ನಿಂಗ್ಸ್ ಅನ್ನು ಅದ್ಭುತವಾಗಿ ನಿಭಾಯಿಸಿದರು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ ರಿಂಕು, ಆ ಬಳಿಕ ಐರ್ಲೆಂಡ್ ಬೌಲರ್ಗಳನ್ನು ಚಿಂದಿ ಉಡಾಯಿಸಿದರು.
ರಿಂಕು ಮತ್ತು ಶಿವಂ ದುಬೆ ಐದನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ನೀಡಿದರು. ಆದರೆ 19.5ನೇ ಎಸೆತದಲ್ಲಿ ರಿಂಕು ಔಟಾದರು. ರಿಂಕು 21 ಎಸೆತಗಳಲ್ಲಿ 180.95 ಸ್ಟ್ರೈಕ್ ರೇಟ್‌ನಲ್ಲಿ 38 ರನ್ ಗಳಿಸಿದರು. ಈ ನಡುವೆ ರಿಂಕು 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು. ಅಂದರೆ ರಿಂಕು ಕೇವಲ 5 ಎಸೆತಗಳಲ್ಲಿ 26 ರನ್ ಸಿಡಿಸಿದರು. ಈ ಮೂಲಕ ತಮ್ಮ ಗೇಮ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ರಿಂಕು ಆಡಿದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಜೈಸ್ವಾಲ್ ಪರ ಬ್ಯಾಟ್ ಬೀಸಿ, ರಿಂಕು ಸಿಂಗ್ ವಿಚಾರದಲ್ಲಿ ಎಚ್ಚರಿಕೆ ನೀಡಿದ ಗೌತಮ್ ಗಂಭೀರ್
ಆ ಬಳಿಕ ಮಾತನಾಡಿದ ರಿಂಕು, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಲು ನನಗೆ ಯಾವುದೇ ಒತ್ತಡವಿಲ್ಲ. ಆದರೆ ನಿಜವಾದ ಆತಂಕ ಇರುವುದು ಸಂದರ್ಶನದ ಬಗ್ಗೆ. ಏಕೆಂದರೆ ನನಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಬರುವುದಿಲ್ಲ. ಆದ್ದರಿಂದ ನಾನು ಸಂದರ್ಶನದಿಂದ ತಪ್ಪಿಸಿಕೊಳ್ಳಲು ಬಯಸುತ್ತೇನೆ’ ಎಂದು ಹೇಳಿದರು. ಹೀಗಾಗಿ ಹಿಂದಿಯಿಂದ ಇಂಗ್ಲಿಷ್‌ಗೆ ಅನುವಾದಿಸಲು ರಿಂಕು ಸಿಂಗ್ಗೆ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ಸಹಾಯ ಮಾಡಿದರು. ಇನ್ನು ಪಂದ್ಯದ ಬಗ್ಗೆ ಮಾತನಾಡಿದ ರಿಂಕು, ‘ನಾನು ಆತ್ಮವಿಶ್ವಾಸದಿಂದ ಇದ್ದೆ. ಐಪಿಎಲ್‌ನ ಎಲ್ಲಾ ಅನುಭವವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇನಿಂಗ್ಸ್ ಮುಗಿಯುವವರೆಗೂ ಬ್ಯಾಟಿಂಗ್ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದರು.
ಪಂದ್ಯ ಪುರುಷೋತ್ತಮ ಪ್ರಶಸ್ತಿ ಗೆದ್ದಿರುವುದು ಹೇಗನಿಸುತ್ತಿದೆ? ಎಂಬುದಕ್ಕೆ ಉತ್ತರಿಸಿದ ರಿಂಕು, ‘ನಾನು ಹತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಕಠಿಣ ಪರಿಶ್ರಮದ ಫಲ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ವಾಸ್ತವವಾಗಿ, ನಾನು ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಕಾಯುತ್ತಿದ್ದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಮೊದಲ ಇನಿಂಗ್ಸ್. ಬೆಸ್ಟ್ ಆಗಿರುವುದು ಒಳ್ಳೆಯದೇ ಅನಿಸುತ್ತದೆ’ ಎಂದು ರಿಂಕು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:45 am, Mon, 21 August 23