ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಪಂದ್ಯವು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇಂದು ನಡೆಯಲಿರುವ ಕೊನೆಯ ದಿನದಾಟದಲ್ಲಿ 107 ರನ್ ಕಲೆಹಾಕಿದರೆ ಗೆಲುವು ಕಿವೀಸ್ ಪಾಲಾಗಲಿದೆ. ಅಂದರೆ ಇಂದು ಪಂದ್ಯ ನಡೆದರೆ ಭಾರತಕ್ಕೆ ಸೋಲು ಬಹುತೇಕ ಖಚಿತ. ಹೀಗಾಗಿಯೇ ಭಾರತೀಯ ಅಭಿಮಾನಿಗಳು ಕೊನೆಯ ದಿನದಾಟ ಮಳೆಗೆ ಆಹುತಿಯಾಗಲಿ ಎಂದು ಬಯಸುತ್ತಿದ್ದಾರೆ.
ಇತ್ತ ಬೆಂಗಳೂರಿನ ಹವಾಮಾನವು ಮಳೆಯ ಮುನ್ಸೂಚನೆಯನ್ನು ನೀಡಿದೆ. ಶನಿವಾರ ಸಂಜೆಯಿಂದ ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆಯಾಗಿದ್ದು, ಈ ಮಳೆಯು ಭಾನುವಾರ ಕೂಡ ಮುಂದುವರೆಯಲಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ.
ಅಕ್ಯುವೆದರ್ ವರದಿ ಪ್ರಕಾರ, ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಶೇ.70 ರಷ್ಟು ಮಳೆಯಾಗಲಿದ್ದು, ಈ ಮಳೆಯು ರಾತ್ರಿಯವರೆಗೆ ಮುಂದುವರೆಯಲಿದೆ. ಆದರೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5ನೇ ದಿನದಾಟ ಶುರುವಾಗುವುದು ಬೆಳಿಗ್ಗೆ 9.15 ರಿಂದ.
ಒಂದು ವೇಳೆ 9 ಗಂಟೆಯಿಂದ 11 ಗಂಟೆಯ ನಡುವೆ ಮಳೆ ಬಾರದೇ ಇದ್ದಲ್ಲಿ 15 ರಿಂದ 20 ಓವರ್‌ಗಳು ನಡೆಯುವುದು ಖಚಿತ. ಈ ಓವರ್‌ಗಳಲ್ಲಿ 107 ರನ್ ಗಳಿಸಲು ನ್ಯೂಝಿಲೆಂಡ್ ಪ್ರಯತ್ನಿಸುವುದಂತು ದಿಟ.
ಹೀಗಾಗಿಯೇ ಇದೀಗ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ಬೆಳಿಗ್ಗೆಯಿಂದಲೇ ಬೆಂಗಳೂರಿನಲ್ಲಿ ಮಳೆಯಾಗಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ. ಅದರಂತೆ ವರುಣ ದೇವನ ಕೃಪೆ ಭಾರತದ ಪಾಲಿಗಿರಲಿದೆಯಾ, ನ್ಯೂಝಿಲೆಂಡ್ ತಂಡಕ್ಕೆ ವಿಜಯಲಕ್ಷ್ಮಿ ಒಲಿಯಲಿದೆಯಾ ಕಾದು ನೋಡಬೇಕಿದೆ.
ಮೊದಲ ಇನಿಂಗ್ಸ್ನ ಮುನ್ನಡೆಯೊಂದಿಗೆ ನ್ಯೂಝಿಲೆಂಡ್ ತಂಡಕ್ಕೆ ಗೆಲ್ಲಲು ಕೇವಲ 107 ರನ್ಗಳ ಅವಶ್ಯಕತೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ರಿಷಭ್ ಪಂತ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿ ರೆಡಿ
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ವಿಲ್ ಯಂಗ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ವಿಲಿಯಂ ಒರೋಕ್, ಅಜಾಝ್ ಪಟೇಲ್.
Published On - 7:52 am, Sun, 20 October 24