IND vs NZ: ಡಕ್… ಡಕ್… ಭಾರತಕ್ಕೆ ಆರಂಭಿಕ ಆಘಾತ ನೀಡಿದ ಕಿವೀಸ್
India vs New Zealand, 1st Test: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವು ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಎರಡನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಎರಡಂಕಿ ಮೊತ್ತ ಕಲೆಹಾಕುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂರು ವಿಕೆಟ್ಗಳನ್ನು ಕಳೆದುಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಘಾತಕ್ಕೊಳಗಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.
ನಾಯಕ ರೋಹಿತ್ ಶರ್ಮಾ ಕೇವಲ 2 ರನ್ಗಳಿಸಿ ಟಿಮ್ ಸೌಥಿ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (0) ಕೂಡ ಶೂನ್ಯದೊಂದಿಗೆ ಪೆವಿಲಿಯನ್ಗೆ ಹಿಂತಿರುಗಿದರು. ಇನ್ನು ಶುಭ್ಮನ್ ಗಿಲ್ ಬದಲಿಯಾಗಿ ತಂಡದಲ್ಲಿ ಅವಕಾಶ ಪಡೆದ ಸರ್ಫರಾಝ್ ಖಾನ್ (0) ಕೂಡ ಸೊನ್ನೆ ಸುತ್ತುವ ಮೂಲಕ ನಿರಾಸೆ ಮೂಡಿಸಿದರು.
ಅಂದರೆ ಭಾರತ ತಂಡವು ಕೇವಲ 13 ರನ್ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಈ ಮೂವರಲ್ಲಿ ಇಬ್ಬರು ಡಕ್ ಔಟ್ ಆಗಿರುವುದು ವಿಶೇಷ. ಇನ್ನು 12 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 13 ರನ್ ಕಲೆಹಾಕಿದ್ದು, ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ (8) ಹಾಗೂ ರಿಷಭ್ ಪಂತ್ (3) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ- 13/3 (12.4)
ವಿ.ಸೂ: ಸದ್ಯ ಮಳೆಯ ಕಾರಣ ಪಂದ್ಯ ಸ್ಥಗಿತಗೊಂಡಿದೆ.
ಶುಭ್ಮನ್, ವಿಲಿಯಮ್ಸನ್ ಅಲಭ್ಯ:
ಬೆಂಗಳೂರು ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭ್ಮನ್ ಗಿಲ್ ಹೊರಗುಳಿದಿದ್ದಾರೆ. ಕತ್ತು ನೋವಿನ ಕಾರಣ ಗಿಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಮತ್ತೊಂದೆಡೆ ನ್ಯೂಝಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಅವರು ಪುಣೆಯಲ್ಲಿ ನಡೆಯಲಿರುವ ಎರಡನೇ ಪಂದ್ಯದ ವೇಳೆ ನ್ಯೂಝಿಲೆಂಡ್ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ರಿಷಭ್ ಪಂತ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್.
ಇದನ್ನೂ ಓದಿ: IPL 2025: ಮೂವರು ಆಟಗಾರರಿಗೆ 55 ಕೋಟಿ ರೂ. ನೀಡಿದ SRH
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಅಜಾಝ್ ಪಟೇಲ್, ವಿಲಿಯಂ ಒರೋಕ್.