
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 19, 2026 ರಂದು ವೆಲ್ಲಿಂಗ್ಟನ್‌ನ ಐತಿಹಾಸಿಕ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನವೇ ಪಿಚ್‌ನ ಸ್ವರೂಪ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಬೇಸಿನ್ ರಿಸರ್ವ್ ಪಿಚ್ ಕ್ಯುರೇಟರ್ ಟಾಮ್ ಡೇವಿ ಅವರು ನೀಡಿರುವ ಮಾಹಿತಿಯಂತೆ, ಮೊದಲ ದಿನದ ಆಟಕ್ಕಾಗಿ ಪಿಚ್ ಮೇಲೆ ಸುಮಾರು 15 ಮಿಲಿಮೀಟರ್ ನಷ್ಟು ಹಸಿರು ಹುಲ್ಲನ್ನು ಉಳಿಸಿಕೊಳ್ಳಲಾಗುತ್ತಿದೆ. ಪಿಚ್‌ನಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವ ಸಲುವಾಗಿ ಅದನ್ನು ಹೊದಿಕೆಯಿಂದ ಮುಚ್ಚಿಡಲಾಗಿದೆ. ಪಿಚ್ ಮೇಲ್ನೋಟಕ್ಕೆ ಸಂಪೂರ್ಣ ಹಸಿರಾಗಿ ಕಂಡರೂ, ಅದು ಸಾಕಷ್ಟು ಗಟ್ಟಿಯಾಗಿದ್ದು, ವೇಗದ ಬೌಲರ್‌ಗಳಿಗೆ ಉತ್ತಮ ಬೌನ್ಸ್ ಮತ್ತು ಸ್ವಿಂಗ್ ನೀಡಲಿದೆ.
ಈ ಪಿಚ್ ಸಾಂಪ್ರದಾಯಿಕ ನ್ಯೂಝಿಲೆಂಡ್ ಶೈಲಿಯಲ್ಲಿದ್ದು, ಬ್ಯಾಟ್ ಮತ್ತು ಬಾಲ್ ನಡುವೆ ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಅಂದರೆ ಟೀಮ್ ಇಂಡಿಯಾ ಆಟಗಾರರಿಗೆ ಅಗ್ನಿ ಪರೀಕ್ಷೆ ಎದುರಾಗುವುದು ಖಚಿತ.
ಪಿಚ್ ಕ್ಯುರೇಟರ್ ತಿಳಿಸಿರುವಂತೆ, ಈ ಪಿಚ್ ಸಾಂಪ್ರದಾಯಿಕ ನ್ಯೂಝಿಲೆಂಡ್ ಶೈಲಿಯಲ್ಲೇ ಸಿದ್ಧಗೊಂಡಿದೆ. ತವರಿನ ವಾತಾವರಣ ಮತ್ತು ಪಿಚ್‌ಗಳ ಲಾಭ ಪಡೆಯುವುದರಲ್ಲಿ ನ್ಯೂಝಿಲೆಂಡ್ ವೇಗದ ಬೌಲರ್‌ಗಳು ಎತ್ತಿದ ಕೈ. ಹೀಗಾಗಿ, ಆರಂಭದಲ್ಲೇ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಕಿವೀಸ್ ವೇಗಿಗಳು ಸಜ್ಜಾಗಿದ್ದಾರೆ.
ಇನ್ನು ಬೇಸಿನ್ ರಿಸರ್ವ್ ಮೈದಾನದಲ್ಲಿ ಬೀಸುವ ವೇಗದ ಅಡ್ಡಗಾಳಿ ಬೌಲರ್‌ಗಳಿಗೆ ಹೆಚ್ಚಿನ ಸ್ವಿಂಗ್ ನೀಡುತ್ತದೆ. ಗಾಳಿಯ ದಿಕ್ಕನ್ನು ಅಂದಾಜಿಸಿ ಬ್ಯಾಟಿಂಗ್ ಮಾಡುವುದು ಭಾರತೀಯ ಬ್ಯಾಟರ್‌ಗಳಿಗೆ ಸುಲಭದ ಮಾತಲ್ಲ. ಅದರಲ್ಲೂ ಯುವ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ಟೀಮ್ ಇಂಡಿಯಾ, ಕಿವೀಸ್ ವೇಗಿಗಳ ಮಾರಕ ಸ್ವಿಂಗ್ ಎಸೆತಗಳನ್ನು ಎದುರಿಸಿ ಕ್ರೀಸ್‌ನಲ್ಲಿ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಲಿದೆ.
ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಕಳೆದ 10 ಟೆಸ್ಟ್ ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ಇಲ್ಲಿ ವೇಗದ ಬೌಲರ್‌ಗಳದ್ದೇ ಸಂಪೂರ್ಣ ಪ್ರಾಬಲ್ಯವಿದೆ. ಒಟ್ಟು ವಿಕೆಟ್‌ಗಳಲ್ಲಿ ಶೇ. 84 ರಷ್ಟು ವಿಕೆಟ್‌ಗಳನ್ನು ವೇಗಿಗಳೇ ಕಬಳಿಸಿದ್ದರೆ, ಸ್ಪಿನ್ನರ್‌ಗಳಿಗೆ ಕೇವಲ ಶೇ. 13 ರಷ್ಟು ವಿಕೆಟ್ ಮಾತ್ರ ಲಭಿಸಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 313 ರನ್‌ಗಳಾಗಿದೆ.
ಹಸಿರು ಪಿಚ್‌ನ ಸವಾಲನ್ನು ಎದುರಿಸಲು ಟೀಮ್ ಇಂಡಿಯಾ ತನ್ನ ವೇಗದ ಬೌಲಿಂಗ್ ಪಡೆಯನ್ನು ಮತ್ತಷ್ಟು ಬಲಪಡಿಸಿದೆ. ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಮತ್ತು ಆಕಾಶ್ ದೀಪ್ ಜೊತೆಗೆ ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಇದನ್ನೂ ಓದಿ: 7.1 ರನ್ ರೇಟ್… ಆಸ್ಟ್ರೇಲಿಯಾದಲ್ಲಿ ಆಂಗ್ಲ ದಾಂಡಿಗರ ಅಬ್ಬರ!
ಒಟ್ಟಿನಲ್ಲಿ, ವೆಲ್ಲಿಂಗ್ಟನ್‌ನ 15 ಮಿ.ಮೀ ಹಸಿರು ಹಾಸಿನ ಮೇಲೆ ಉಭಯ ತಂಡಗಳ ವೇಗಿಗಳ ಅಬ್ಬರ ಜೋರಾಗಿರಲಿದೆ. ಕಿವೀಸ್ ವೇಗಿಗಳ ಸ್ವಿಂಗ್ ಮತ್ತು ವೇಗದ ಗಾಳಿಯ ಸವಾಲನ್ನು ಭಾರತದ ಯುವ ಬ್ಯಾಟರ್‌ಗಳು ಹೇಗೆ ಮೆಟ್ಟಿನಿಲ್ಲಲಿದ್ದಾರೆ ಎಂಬುದರ ಮೇಲೆಯೇ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶ ನಿರ್ಧಾರವಾಗಲಿದೆ.