ಏಕದಿನ ವಿಶ್ವಕಪ್‌ನಲ್ಲಿ (ICC World Cup 2023) ಟೀಂ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯವನ್ನು ನೆದರ್ಲೆಂಡ್ಸ್ (India vs Netherlands) ವಿರುದ್ಧ ಇದೇ ಭಾನುವಾರದಂದು ಬೆಂಗಳೂರಿನಲ್ಲಿ ಆಡಲಿದೆ. ಆದರೆ ಈವರೆಗೂ ಆಡಿರುವ ಎಂಟು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಈಗಾಗಲೇ ಖಚಿತಪಡಿಸಿದೆ. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹೀಗಿರುವಾಗ ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದ್ದು, ನ್ಯೂಜಿಲೆಂಡ್ ತಂಡವೇ ಭಾರತದ (New Zealand vs India) ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ 20 ವರ್ಷಗಳ ನಂತರ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತ ಇತಿಹಾಸ ನಿರ್ಮಿಸಿತ್ತು. ಆದರೆ ಈಗ ನಾಕೌಟ್ ಹಂತದಲ್ಲಿ ಮತ್ತೆ ಕಿವೀಸ್ ತಂಡವನ್ನು ಎದುರಿಸುವುದು ಟೀಂ ಇಂಡಿಯಾಕ್ಕೆ ಸುಲಭದ ಮಾತಲ್ಲ. ಏಕೆಂದರೆ ನಾಕೌಂಟ್ ಪಂದ್ಯಗಳಲ್ಲಿ ಕಿವೀಸ್ ಪಡೆ ಭಾರತಕ್ಕೆ ಅಂತಹ ಮರ್ಮಾಘಾತಗಳನ್ನು ನೀಡಿದೆ.
ಇಲ್ಲಿಯವರೆಗೆ, ಭಾರತ ತಂಡವು ಐಸಿಸಿ ನಾಕೌಟ್ ಪಂದ್ಯಗಳಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ನ್ಯೂಜಿಲೆಂಡ್ ವಿರುದ್ಧ ಆಡಿದೆ. ಉಭಯ ತಂಡಗಳು ಮೊದಲ ಬಾರಿಗೆ 2000 ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ನೈರೋಬಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಸೋಲು ಕಂಡಿತ್ತು. ಇದಾದ ಬಳಿಕ 2019ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲೂ ಕಿವೀಸ್ ತಂಡ 18 ರನ್‌ಗಳಿಂದ ಜಯಗಳಿಸಿತ್ತು.
ನ್ಯೂಜಿಲೆಂಡ್ಗೆ ಮತ್ತೊಂದು ಬಿಗ್ ಶಾಕ್; ವಿಶ್ವಕಪ್ನಿಂದ ಹೊರಬಿದ್ದ ತಂಡದ ಸ್ಟಾರ್ ವೇಗಿ..!
ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದ ಆ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕಿವೀಸ್ ತಂಡ 239 ರನ್ ಬಾರಿಸಿತ್ತು. ಆದರೆ, ಮಳೆ ಕಾರಣ ಭಾರತದ ಇನಿಂಗ್ಸ್ ಅನ್ನು ಮರುದಿನಕ್ಕೆ ಮುಂದೂಡಲಾಯಿತು. ಮೀಸಲು ದಿನದಂದು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತದ ಹೊರತಾಗಿಯೂ ಗೆಲುವಿಗಾಗಿ ಹೋರಾಟ ನೀಡಿತ್ತಾದರೂ, 18 ರನ್‌ಗಳಿಂದ ಸೋತು ವಿಶ್ವಕಪ್ನಿಂದ ಹೊರಬಿದ್ದಿತ್ತು. ಇನ್ನು ಮೂರನೇ ಬಾರಿಗೆ ಐಸಿಸಿ ನಾಕೌಟ್ ಪಂದ್ಯದಲ್ಲಿ ಉಭಯ ತಂಡಗಳು 2021 ರಲ್ಲಿ ಆಡಿದ ಮೊದಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲೂ ಕಿವೀಸ್ ತಂಡ ಭಾರತವನ್ನು ಮಣಿಸಿ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
2023ರ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಈ ಮೈದಾನದಲ್ಲಿ ಇದುವರೆಗೆ ನಾಲ್ಕು ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಮೂರು ಬಾರಿ ಗೆದ್ದಿದೆ. ಈ ಮೈದಾನದಲ್ಲಿ ಕೇವಲ ಒಂದು ಪಂದ್ಯದಲ್ಲಿ, ಗುರಿಯನ್ನು ಬೆನ್ನಟ್ಟಿದ ತಂಡವು ಗೆದ್ದಿದೆ. ಇದನ್ನು ಗಮನಿಸಿದರೆ, ವಾಂಖೆಡೆಯಲ್ಲಿ ಗುರಿ ಬೆನ್ನಟ್ಟುವುದು ಸುಲಭವಲ್ಲ. ಯಾಕೆಂದರೆ ಸಮಯ ಕಳೆದಂತೆ ವಾಂಖೆಡೆ ಪಿಚ್ ವೇಗದ ಬೌಲರ್‌ಗಳಿಗೆ ಹೆಚ್ಚು ಸಹಕಾರಿಯಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ