ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium in Mumbai) ನಡೆಯುತ್ತಿರುವ ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (India Vs New Zealand), ಕಿವೀಸ್ ಬೌಲರ್ಗಳ ಮೇಲೆ ಸವಾರಿ ಮಾಡಿ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 398 ರನ್ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ (Rohit Sharma) 47 ರನ್ಗಳ ಇನ್ನಿಂಗ್ಸ್ ಆಡಿದರೆ, ಮತ್ತೊಬ್ಬ ಆರಂಭಿಕ ಶುಭ್ಮನ್ ಗಿಲ್ (Shubman Gill) ಅಜೇಯ 80 ರನ್ ಬಾರಿಸಿದರು. ಹಾಗೆಯೇ ವಿರಾಟ್ ಕೊಹ್ಲಿ (Virat Kohli) 117 ರನ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) 105 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು. ನ್ಯೂಜಿಲೆಂಡ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಏಕೈಕ ವಿಕೆಟ್ ಪಡೆದರು.
ಮೇಲೆ ಹೇಳಿದಂತೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಎಂದಿನಂತೆ ರೋಹಿತ್ ಅಬ್ಬರದ ಆರಂಭ ನೀಡಿದರು. ರೋಹಿತ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದರೆ, ಇನ್ನೊಂದು ತುದಿಯಲ್ಲಿ ಗಿಲ್ ಅವರಿಗೆ ಉತ್ತಮ ಬೆಂಬಲ ನೀಡಿದರು. ರೋಹಿತ್ ದೊಡ್ಡ ಶಾಟ್ ಬಾರಿಸುವ ಯತ್ನದಲ್ಲಿ 47 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕೊಹ್ಲಿ ಹಾಗೂ ಗಿಲ್ ಭಾರತದ ಇನ್ನಿಂಗ್ಸ್ ಅನ್ನು ಸಮರ್ಥವಾಗಿ ನಿಭಾಯಿಸಿದರು.
Virat Kohli: ಏಕದಿನದಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ..!
ಶುಭಮನ್ ಗಿಲ್ 79 ರನ್‌ಗಳಿಸಿದ್ದಾಗ ಕಾಲಿನ ಸೆಳೆತಕ್ಕೆ ಒಳಗಾಗಿ ಮೈದಾನದಿಂದ ಹೊರ ನಡೆದರು. ಗಿಲ್ ನಿರ್ಗಮನದ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ಭಾರತದ ರನ್ ರೇಟ್ಗೆ ವೇಗ ನೀಡಿ ತಂಡದ ಸ್ಕೋರ್ ವೇಗವನ್ನು ಹೆಚ್ಚಿಸಿದರು. ಇಬ್ಬರೂ ಶತಕದ ಜೊತೆಯಾಟವನ್ನು ಹಂಚಿಕೊಂಡರು ನಂತರ ಇಬ್ಬರೂ ತಮ್ಮ ವೈಯಕ್ತಿಕ ಶತಕಗಳನ್ನು ಪೂರ್ಣಗೊಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಕೊಹ್ಲಿ 113 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 117 ರನ್ ಗಳಿಸಿದರು.
ವಿರಾಟ್ ನಂತರ, ಶ್ರೇಯಸ್ ಅಯ್ಯರ್ ಕೂಡ ಕೇವಲ 70 ಎಸೆತಗಳಲ್ಲಿ 105 ರನ್ ಗಳಿಸಿ ತಂಡದ ಸ್ಕೋರ್ ಅನ್ನು 400 ರ ಸಮೀಪಕ್ಕೆ ಕೊಂಡೊಯ್ದರು. ಅಯ್ಯರ್ ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು. ಈ ಇಬ್ಬರ ಇನ್ನಿಂಗ್ಸ್ ಜೊತೆಗೆ ಭಾರತದ ಇನ್ನಿಂಗ್ಸ್ಗೆ ಅಂತಿಮ ಟಚ್ ನೀಡಿದ ಕನ್ನಡಿಗೆ ಕೆ. ಎಲ್. ರಾಹುಲ್ 20 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Wed, 15 November 23