Virat Kohli Century: 50ನೇ ಏಕದಿನ ಶತಕ; ಕ್ರಿಕೆಟ್ ದೇವರ ದಾಖಲೆ ಮುರಿದ ಕಿಂಗ್..!
Virat Kohli Century: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಏಕದಿನ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ಅವರ 50ನೇ ಶತಕವಾಗಿದ್ದು, ಈ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium in Mumbai) ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ (India Vs New Zealand) ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಏಕದಿನ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ (Virat Kohli) ಅವರ 50ನೇ ಶತಕವಾಗಿದ್ದು, ಈ ಮೂಲಕ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪೈಕಿ ಅಗ್ರಸ್ಥಾನಕ್ಕೇರಿದ್ದಾರೆ. ಇದುವರೆಗೆ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪೈಕಿ ತಲಾ 49 ಶತಕ ಸಿಡಿಸಿದ್ದ ಟೀಂ ಇಂಡಿಯಾದ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ವಿರಾಟ್ ಕೊಹ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದರು. ಆದರೀಗ ಕಿವೀಸ್ ವಿರುದ್ಧ 50ನೇ ಶತಕ ಪೂರ್ಣಗೊಳಿಸಿರುವ ವಿರಾಟ್ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇದಲ್ಲದೆ ವಿಶ್ವಕ್ರಿಕೆಟ್ನಲ್ಲಿ 50 ಏಕದಿನ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಐತಿಹಾಸಿಕ ಏಕದಿನ ಶತಕ
ವಿರಾಟ್ ಕೊಹ್ಲಿ ತಮ್ಮ ಇನ್ನಿಂಗ್ಸ್‌ನಲ್ಲಿ 106 ಎಸೆತಗಳನ್ನು ಎದುರಿಸಿ ಈ ಐತಿಹಾಸಿಕ ಶತಕ ಪೂರೈಸಿದರು. ಈ ವೇಳೆ ಅವರು 8 ಬೌಂಡರಿ ಹಾಗೂ 1 ಸಿಕ್ಸರ್ ಸಹ ಬಾರಿಸಿದರು. ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದ 279 ಇನ್ನಿಂಗ್ಸ್‌ನಲ್ಲಿ ಈ 50 ಏಕದಿನ ಶತಕಗಳ ದಾಖಲೆಯನ್ನು ನಿರ್ಮಿಸಿದ್ದಾರೆ. ಕೊಹ್ಲಿಗೂ ಮೊದಲು, ಸಚಿನ್ ತೆಂಡೂಲ್ಕರ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 452ನೇ ಇನ್ನಿಂಗ್ಸ್‌ನಲ್ಲಿ 49 ಶತಕವನ್ನು ಬಾರಿಸಿದ್ದರು. ಇವರಲ್ಲದೆ, ರೋಹಿತ್ ಶರ್ಮಾ ಕೂಡ 31 ಶತಕಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಮೂವರ ನಂತರ ಏಕದಿನ ವೃತ್ತಿಜೀವನದಲ್ಲಿ 30 ಶತಕಗಳನ್ನು ಸಿಡಿಸಿರುವ ರಿಕಿ ಪಾಂಟಿಂಗ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಅವರು ಏಕದಿನದಲ್ಲಿ 28 ಶತಕಗಳನ್ನು ಸಿಡಿಸಿದ್ದು, ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
View this post on Instagram
ಸಚಿನ್ಗೆ ತಲೆಬಾಗಿ ನಮಸ್ಕರಿಸಿದ ವಿರಾಟ್
ವಾಸ್ತವವಾಗಿ, ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಆರಾಧ್ಯ ಎಂದು ಪರಿಗಣಿಸುತ್ತಾರೆ. ಹೀಗಾಗಿ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದಾಗಲು ಕೊಹ್ಲಿ, ಸಚಿನ್ ತೆಂಡೂಲ್ಕರ್ ನನ್ನ ಹೀರೋ ಎಂದು ಬಣ್ಣಿಸಿದ್ದರು. ಇಂದು 50ನೇ ಶತಕ ಸಿಡಿಸಿದ ವಿರಾಟ್, ಈ ಐತಿಹಾಸಿಕ ಶತಕ ಬಾರಿಸಿದ ಬಳಿಕ ಸಚಿನ್ ತೆಂಡೂಲ್ಕರ್ ಎದುರು ತಲೆಬಾಗಿ ನಮಸ್ಕರಿಸಿದರು. ಸಚಿನ್ ಕೂಡ ಕಿಂಗ್ ಕೊಹ್ಲಿಯ ಸಾಧನೆಯನ್ನು ಚಪ್ಪಾಳೆ ತಟ್ಟುತ್ತಾ ಅಭಿನಂದಿಸಿದರು.
Virat Kohli Bowing Down To Sachin Tendulkar After Scoring 50th Int Ton🙌👑 #INDvsNZ #ViratKohli𓃵 #SachinTendulkar #Semifinal pic.twitter.com/WgiCpH2Him
— Dev Basrani (@MSDIAN___DEV) November 15, 2023
ಈ ವಿಶ್ವಕಪ್‌ನಲ್ಲಿ ಕೊಹ್ಲಿ ಅಬ್ಬರ
ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದಾರೆ ಮತ್ತು ಟೀಂ ಇಂಡಿಯಾ ಪರ ನಿರಂತರವಾಗಿ ರನ್ ಗಳಿಸುತ್ತಿದ್ದಾರೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಅವರು ಈ ವಿಶ್ವಕಪ್‌ನಲ್ಲಿ ಇದುವರೆಗೆ 3 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದು, ಇದುವರೆಗೆ 8 ಬಾರಿ 50+ ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Wed, 15 November 23