ಚಿಕ್ಕ ಹುಡುಗ ಈಗ ‘ವಿರಾಟ್’; ಕಿಂಗ್ ದಾಖಲೆಯ ಆಟಕ್ಕೆ ಕ್ರಿಕೆಟ್ ದೇವರ ಭಾವನಾತ್ಮಕ ಪೋಸ್ಟ್
IND vs NZ, ICC World Cup 2023: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 117 ರನ್ಗಳ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ (India Vs New Zealand) ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 117 ರನ್ಗಳ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರು ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ 50ನೇ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಈ ದಾಖಲೆಯನ್ನು ಬರೆದುಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ನೋಡಿದ ಎಲ್ಲರೂ ಹುಚ್ಚೆದ್ದು ಕುಣಿದರು. ಸ್ವತಃ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿಯ ಶತಕಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟುತ್ತ ಅಭಿನಂದನೆ ಸಲ್ಲಿಸಿದರು. ಇದೀಗ ಕೊಹ್ಲಿ ಶತಕವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಚಿನ್ ತೆಂಡೂಲ್ಕರ್ ಹಾಡಿ ಹೊಗಳಿದ್ದಾರೆ.
ಸಂತೋಷಪಡದೆ ಇರಲು ಸಾಧ್ಯವಿಲ್ಲ
ತಮ್ಮ ಎಕ್ಸ್ ಖಾತೆಯಲ್ಲಿ ವಿರಾಟ್ ಕೊಹ್ಲಿ ದಾಖಲೆಯನ್ನು ಕೊಂಡಾಡಿರುವ ಸಚಿನ್, ‘ನಾನು ನಿಮ್ಮನ್ನು (ವಿರಾಟ್ ಕೊಹ್ಲಿ) ಮೊದಲ ಬಾರಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ಇತರ ಸಹ ಆಟಗಾರರು ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಎಂದು ನಿಮಗೆ ಹೇಳಿದ್ದರು. ನೀವು ಹಾಗೆ ಮಾಡಲು ಬಂದಾಗ ತಮಾಷೆ ಮಾಡಿ ನಕ್ಕಿದ್ದರು. ನನಗೂ ಸಹ ನಗು ತಡೆಯಲಾಗಲಿಲ್ಲ. ಆದರೆ ಶೀಘ್ರದಲ್ಲೇ ನೀವು ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನನ್ನ ಹೃದಯವನ್ನು ಮುಟ್ಟಿದ್ದೀರಿ. ಅಂದಿನ ಚಿಕ್ಕ ಹುಡುಗ ‘ವಿರಾಟ್’ ಆಗಿ ಬೆಳೆದಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ. ಭಾರತೀಯನೊಬ್ಬ ನನ್ನ ದಾಖಲೆಯನ್ನು ಮುರಿದಿದ್ದಕ್ಕೆ ನಾನು ಹೆಚ್ಚು ಸಂತೋಷಪಡದೆ ಇರಲು ಸಾಧ್ಯವಿಲ್ಲ. ವಿಶ್ವಕಪ್‌ನ ಅತಿದೊಡ್ಡ ವೇದಿಕೆಯಲ್ಲಿ ಅದರಲ್ಲೂ ನನ್ನ ತವರು ನೆಲದಲ್ಲಿ, ಸೆಮಿ-ಫೈನಲ್ನಲ್ಲಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
The first time I met you in the Indian dressing room, you were pranked by other teammates into touching my feet. I couldn’t stop laughing that day. But soon, you touched my heart with your passion and skill. I am so happy that that young boy has grown into a ‘Virat’ player.
— Sachin Tendulkar (@sachin_rt) November 15, 2023
ಸಚಿನ್ಗೆ ತಲೆಬಾಗಿ ನಮಸ್ಕರಿಸಿದ ವಿರಾಟ್
ವಾಸ್ತವವಾಗಿ, ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಆರಾಧ್ಯ ಎಂದು ಪರಿಗಣಿಸುತ್ತಾರೆ. ಹೀಗಾಗಿ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದಾಗಲು ಕೊಹ್ಲಿ, ಸಚಿನ್ ತೆಂಡೂಲ್ಕರ್ ನನ್ನ ಹೀರೋ ಎಂದು ಬಣ್ಣಿಸಿದ್ದರು. ಇಂದು 50ನೇ ಶತಕ ಸಿಡಿಸಿದ ವಿರಾಟ್, ಈ ಐತಿಹಾಸಿಕ ಶತಕ ಬಾರಿಸಿದ ಬಳಿಕ ಸಚಿನ್ ತೆಂಡೂಲ್ಕರ್ ಎದುರು ತಲೆಬಾಗಿ ನಮಸ್ಕರಿಸಿದರು. ಸಚಿನ್ ಕೂಡ ಕಿಂಗ್ ಕೊಹ್ಲಿಯ ಸಾಧನೆಯನ್ನು ಚಪ್ಪಾಳೆ ತಟ್ಟುತ್ತಾ ಅಭಿನಂದಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Wed, 15 November 23