ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಿರತವಾಗಿದೆ. ಈಗಾಗಲೇ ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆದಿದ್ದು, ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯವನ್ನು ನ್ಯೂಜಿಲೆಂಡ್ ತಂಡ ಬರೋಬ್ಬರಿ 8 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇದೀಗ ಎರಡು ತಂಡಗಳು ಪುಣೆಯಲ್ಲಿ ನಡೆಯಲ್ಲಿರುವ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿವೆ. ಆದರೆ ಈ ನಡುವೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅದೊಂದು ವಿವಾದಾತ್ಮಕ ಪೋಸ್ಟ್ ಇಡೀ ಭಾರತೀಯರನ್ನು ಕೆರಳುವಂತೆ ಮಾಡಿದೆ. ಕಿವೀಸ್ ಮಂಡಳಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡಿರುವ ಕೆಲಸಕ್ಕೆ ವಿಶ್ವ ಕ್ರಿಕೆಟ್ನ ಮುಂದೆ ತಲೆತಗ್ಗಿಸಬೇಕಾಗಿದೆ.
ಅಷ್ಟಕ್ಕೂ ಕಿವೀಸ್ ಮಂಡಳಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಎಸಗಿರುವ ಪ್ರಮಾದವೆನೆಂದರೆ, ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯವಹಿಸುತ್ತಿರುವ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಭಾರತದ ನಕ್ಷೆಯನ್ನು ಬಳಸಿಕೊಂಡಿದೆ. ಆದರೆ ಕಿವೀಸ್ ಪೋಸ್ಟ್ ಮಾಡಿರುವ ಭಾರತದ ಈ ನಕ್ಷೆಯಲ್ಲಿ ಮಹಾ ಪ್ರಮಾದವೊಂದು ನಡೆದಿದೆ. ಅದೆನೆಂದರೆ, ಕಿವೀಸ್ ಪೋಸ್ಟ್ ಮಾಡಿರುವ ಭಾರತದ ನಕ್ಷೆಯಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭೂ ಪ್ರದೇಶವನ್ನು ಕೈಬಿಟ್ಟಿದೆ.
ಕಿವೀಸ್ ಮಂಡಳಿ ಮಾಡಿರುವ ಮಹಾಎಡವಟ್ಟನ್ನು ಗಮನಿಸಿದ ನೆಟ್ಟಿಗರು, ಮಂಡಳಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆ ಬಳಿಕ ತನ್ನ ತಪ್ಪನ್ನು ಅರಿತುಕೊಂಡಿರುವ ಕಿವೀಸ್ ಮಂಡಳಿ ಕೂಡಲೇ ತನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ತಾನು ಮಾಡಿದ್ದ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ. ಆದರೆ ಅಷ್ಟರಲ್ಲಾಗಲೇ ಕಿವೀಸ್ ಮಂಡಳಿಯ ಪ್ರಮಾದಕರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಭಾರತೀಯರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ತನ್ನಿಂದಾಗಿರುವ ಪ್ರಮಾದವನ್ನು ಕಿವೀಸ್ ಯಾವ ರೀತಿಯಾಗಿ ಸರಿಪಡಿಸಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
Dear @BLACKCAPS we Indians think as Newzealand is our 2nd home team so we can’t imagine how can you post a incorrect map 😡
Plz correct this, Jammu Kashmir and Ladakh region are incorrect 🙏— Munesh Yadav🇮🇳 (@95MuneshYadav) October 21, 2024
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ನ್ಯೂಜಿಲೆಂಡ್ ಬೋರ್ಡ್ ಭಾರತದ ನಕ್ಷೆಯನ್ನು ಪೋಸ್ಟ್ ಮಾಡಿತ್ತು. ಆದರೆ ಭಾರತದ ತಪ್ಪು ನಕ್ಷೆಯನ್ನು ಪೋಸ್ಟ್ ಮಾಡಿದ್ದ ಕಾರಣ ಕಿವೀಸ್ ಮಂಡಳಿ ಇದೀಗ ನೆಟ್ಟಿಗರಿಗೆ ಆಹಾರವಾಗಿದೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಪುಣೆ ಟೆಸ್ಟ್ ಪಂದ್ಯ ಅಕ್ಟೋಬರ್ 24 ರಿಂದ ಪ್ರಾರಂಭವಾಗಲಿದೆ. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಸೋತಿದ್ದು, ಸರಣಿ ಉಳಿಸಿಕೊಂಡು ಪುನರಾಗಮನ ಮಾಡಬೇಕಾದರೆ ಪುಣೆಯಲ್ಲಿ ಗೆಲ್ಲಲೇಬೇಕು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:05 pm, Mon, 21 October 24