ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ರೋಹಿತ್ ಶರ್ಮಾ ನೇತೃತ್ವದ ತಂಡ ಸರಣಿಯಲ್ಲಿ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳಲು ಬಯಸಿದೆ. ಟೀಂ ಇಂಡಿಯಾ ಈಗಾಗಲೇ ಈ ಸರಣಿಯನ್ನು ಕಳೆದುಕೊಂಡಿದ್ದು, ಈಗ ಮೂರನೇ ಪಂದ್ಯವನ್ನು ಗೆದ್ದು ಸರಣಿಯನ್ನು 2-1 ರಿಂದ ಅಂತ್ಯಗೊಳಿಸಲು ಬಯಸಿದೆ. ಆದಾಗ್ಯೂ ಮೊದಲ ಎರಡು ಟೆಸ್ಟ್ ಪಂದ್ಯಗಳ ಸೋಲು ಟೀಂ ಇಂಡಿಯಾವನ್ನು ಸಾಕಷ್ಟು ಮುಜುಗರಕ್ಕೀಡು ಮಾಡಿರುವುದಲ್ಲದೆ ವಿಶ್ವ ಕ್ರಿಕೆಟ್‌ನ ದೊಡ್ಡಣ್ಣ ಬಿಸಿಸಿಐಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಸರಣಿ ಸೋಲಿನ ನಂತರ ಕಾರ್ಯಪ್ರವೃತ್ತವಾಗಿರುವ ತಂಡದ ಮ್ಯಾನೇಜ್‌ಮೆಂಟ್ ಎಲ್ಲಾ ಆಟಗಾರರನ್ನು ತರಬೇತಿ ಸೆಷನ್ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ. ಅದರಂತೆ ಇದೀಗ ತಂಡದ ಎಲ್ಲಾ ಆಟಗಾರರು ದೀಪಾವಳಿ ಹಬ್ಬವನ್ನು ಮರೆತು ತರಬೇತಿಯಲ್ಲಿ ಭಾಗಿಯಾಗಬೇಕಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ಸುದ್ದಿಯ ಪ್ರಕಾರ, ತಂಡದ ಮ್ಯಾನೇಜ್‌ಮೆಂಟ್ ಎಲ್ಲಾ ಆಟಗಾರರನ್ನು ತರಬೇತಿ ಸೆಷನ್ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ. ಅಕ್ಟೋಬರ್ 30 ಮತ್ತು 31 ರಂದು ತರಬೇತಿ ಸೆಷನ್ ನಡೆಯಲಿದ್ದು, ಎಲ್ಲಾ ಆಟಗಾರರಿಗೆ ಇದು ಕಡ್ಡಾಯವಾಗಿರುತ್ತದೆ. ವಿರಾಟ್, ರೋಹಿತ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಈ ತರಬೇತಿ ಸೆಷನ್ನಲ್ಲಿ ಭಾಗವಹಿಸಬೇಕಾಗಿದೆ. ವಾಸ್ತವವಾಗಿ ಈ ಹಿಂದೆ ಹಲವು ಆಟಗಾರರಿಗೆ ತರಬೇತಿ ಸೆಷನ್ನಿಂದ ವಿಶ್ರಾಂತಿ ನೀಡಲಾಗುತ್ತಿತ್ತು. ಆದರೆ ಇದೀಗ ಆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಆದ್ದರಿಂದ ಎಲ್ಲಾ ಆಟಗಾರರು ದೀಪಾವಳಿಯಂದು ತರಬೇತಿ ಸೆಷನ್ನಲ್ಲಿ ಭಾಗವಹಿಸಲಿದ್ದಾರೆ.
ವರದಿ ಪ್ರಕಾರ, ಪುಣೆ ಟೆಸ್ಟ್‌ನಲ್ಲಿ ಸೋಲಿನ ನಂತರ ಬಿಸಿಸಿಐ ಆಟಗಾರರಿಗೆ ಎರಡು ದಿನಗಳ ವಿರಾಮ ನೀಡಿದೆ. ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 1 ರಿಂದ ಮುಂಬೈನಲ್ಲಿ ನಡೆಯಲಿದೆ. ಆದ್ದರಿಂದ, ಹೆಚ್ಚಿನ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಭಾನುವಾರವೇ ಮುಂಬೈಗೆ ಬಂದಿಳಿದಿದ್ದಾರೆ. ಆದರೆ ವಿರಾಟ್ ಮತ್ತು ರೋಹಿತ್ ಸದ್ಯ ಕುಟುಂಬದೊಂದಿಗೆ ಇದ್ದು, ಅವರು ಕೂಡ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಇಲ್ಲಿ ಟೀಂ ಇಂಡಿಯಾದ ಟೆಸ್ಟ್ ದಾಖಲೆ ಉತ್ತಮವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಇದುವರೆಗೆ 26 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ 12 ಪಂದ್ಯಗಳನ್ನು ಗೆದ್ದಿದ್ದರೆ, 7 ಪಂದ್ಯಗಳಲ್ಲಿ ಸೋಲು ಕಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ