ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸಂಕಷ್ಟಕ್ಕೆ ಸಿಲುಕಲಿದೆ ಟೀಂ ಇಂಡಿಯಾ! ಇಲ್ಲಿದೆ ಫೈನಲ್ ಫೈಟ್ ಲೆಕ್ಕಾಚಾರ

|

Updated on: Sep 11, 2023 | 7:45 AM

IND vs PAK: ಮೀಸಲು ದಿನದಂದು ಪಂದ್ಯ ರದ್ದುಗೊಂಡರೆ, ಟೀಂ ಇಂಡಿಯಾ ಫೈನಲ್ ತಲುಪುವ ಹಾದಿ ಮತ್ತಷ್ಟು ಕಠಿಣವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇನ್ನುಳಿದ ಎರಡು ಪಂದ್ಯಗಳನ್ನು ಅಂದರೆ, ಸೆ.12ರಂದು ಶ್ರೀಲಂಕಾ ವಿರುದ್ಧ ನಡೆಯುವ ಹಾಗೂ ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ವಿರುದ್ಧ ನಡೆಯುವ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು.

ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸಂಕಷ್ಟಕ್ಕೆ ಸಿಲುಕಲಿದೆ ಟೀಂ ಇಂಡಿಯಾ! ಇಲ್ಲಿದೆ ಫೈನಲ್ ಫೈಟ್ ಲೆಕ್ಕಾಚಾರ
ಟೀಂ ಇಂಡಿಯಾ
Follow us on

ಈ ಬಾರಿಯ ಏಷ್ಯಾಕಪ್​ಗೆ (Asia Cup 2023) ಮಳೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಮಳೆಯಿಂದಾಗಿ ಸೆಪ್ಟೆಂಬರ್ 2 ರಂದು ನಡೆದ ಭಾರತ ಮತ್ತು ಪಾಕಿಸ್ತಾನ (India vs Pakistan ನಡುವಿನ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದೀಗ ಉಭಯ ತಂಡಗಳ ನಡುವಿನ ಸೂಪರ್-4 ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಿದೆ. ಸೆಪ್ಟೆಂಬರ್ 10 ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಪಂದ್ಯಕ್ಕೂ ಮಳೆ ವಿಲನ್ ಆಗಿ ಎಂಟ್ರಿಕೊಟ್ಟಿತು. ಹೀಗಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ನಿಗದಿತ ದಿನದಲ್ಲಿ ಪಂದ್ಯ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಈ ಪಂದ್ಯವು ಮೀಸಲು ದಿನದಂದು ಅಂದರೆ ಸೆಪ್ಟೆಂಬರ್ 11 ರಂದು ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ (Team India) ಸಂಕಷ್ಟ ಹೆಚ್ಚುವುದು ಖಚಿತ. ಒಂದು ವೇಳೆ ಮಳೆಯಿಂದಾಗಿ ಈ ಪಂದ್ಯವನ್ನು ಮೀಸಲು ದಿನದಂದು ಕೂಡ ನಡೆಸಲಾಗದಿದ್ದರೆ ಭಾರತಕ್ಕೆ ಫೈನಲ್ ಆಡುವುದು ಕೊಂಚ ಕಷ್ಟಕರವಾಗಬಹುದು.

ಪಂದ್ಯ ರದ್ದಾದರೆ ಏನಾಗುತ್ತದೆ?

ಮೀಸಲು ದಿನದಂದು ಪಂದ್ಯ ರದ್ದುಗೊಂಡರೆ, ಟೀಂ ಇಂಡಿಯಾ ಫೈನಲ್ ತಲುಪುವ ಹಾದಿ ಮತ್ತಷ್ಟು ಕಠಿಣವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಇನ್ನುಳಿದ ಎರಡು ಪಂದ್ಯಗಳನ್ನು ಅಂದರೆ, ಸೆ.12ರಂದು ಶ್ರೀಲಂಕಾ ವಿರುದ್ಧ ನಡೆಯುವ ಹಾಗೂ ಸೆಪ್ಟೆಂಬರ್ 15ರಂದು ಬಾಂಗ್ಲಾದೇಶ ವಿರುದ್ಧ ನಡೆಯುವ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಒಂದು ವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಎರಡೂ ಪಂದ್ಯಗಳನ್ನು ಗೆದ್ದರೆ ಟೀಂ ಇಂಡಿಯಾ ಒಟ್ಟು ಐದು ಅಂಕಗಳನ್ನು ಸಂಪಾಧಿಸಲಿದೆ. ಹೀಗಾದರೆ ಟೀಂ ಇಂಡಿಯಾ ಸುಲಭವಾಗಿ ಫೈನಲ್ ಪ್ರವೇಶಿಸಲಿದೆ.

6,6,4,6,4…! ಕೇವಲ 5 ಎಸೆತಗಳಲ್ಲಿ ಪಾಕ್ ಬೌಲರ್​ ಹುಟ್ಟಡಗಿಸಿದ ರೋಹಿತ್! ವಿಡಿಯೋ ನೋಡಿ

ಭಾರತ-ಪಾಕಿಸ್ತಾನ ಫೈನಲ್?

ಸದ್ಯಕ್ಕೆ ಬಾಂಗ್ಲಾದೇಶವನ್ನು ಸೋಲಿಸಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ತಲಾ ಎರಡು ಅಂಕಗಳನ್ನು ಪಡೆದಿವೆ. ಸದ್ಯ ಈ ಎರಡೂ ತಂಡಗಳು ಭಾರತಕ್ಕಿಂತ ಮುಂದಿವೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದುಗೊಳಿಸಿದರೆ, ಪಾಕಿಸ್ತಾನ ಕೂಡ ಒಂದು ಅಂಕವನ್ನು ಪಡೆಯುವುದರೊಂದಿಗೆ ತನ್ನ ಎರಡು ಪಂದ್ಯಗಳಿಂದ ಮೂರು ಅಂಕಗಳನ್ನು ಸಂಪಾಧಿಸಲಿದೆ. ನಂತರ ಶ್ರೀಲಂಕಾವನ್ನು ಎದುರಿಸಲಿರುವ ಪಾಕಿಸ್ತಾನ, ಆ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿದರೆ ಅದರ ಖಾತೆಗೆ ಒಟ್ಟು ಐದು ಅಂಕಗಳು ಸೇರಲಿವೆ. ಇತ್ತ ಭಾರತ ಕೂಡ ತನ್ನ ಎರಡೂ ಪಂದ್ಯಗಳನ್ನು ಗೆದ್ದರೆ, ಅದು ಕೂಡ ಐದು ಅಂಕಗಳನ್ನು ಹೊಂದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಫೈನಲ್‌ನ ರೇಸ್‌ನಿಂದ ಹೊರಗುಳಿಯುತ್ತವೆ. ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ನಡೆಯಲಿದೆ.

ಒಂದು ವೇಳೆ ಶ್ರೀಲಂಕಾ ಪಾಕಿಸ್ತಾನವನ್ನು ಸೋಲಿಸಿ, ಆ ನಂತರ ಭಾರತದೆದುರು ಸೋತರೆ ಅದೂ ಕೂಡ ನಾಲ್ಕು ಅಂಕಗಳನ್ನು ಹೊಂದಿರುತ್ತದೆ. ಹೀಗಾಗಿ ಭಾರತ ಮತ್ತು ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಸೋತರೆ ಭಾರತ ಮತ್ತು ಶ್ರೀಲಂಕಾ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತದ ಲೆಕ್ಕಾಚಾರ ಸ್ಪಷ್ಟವಾಗಿದ್ದು, ರೋಹಿತ್ ಪಡೆ ಏಷ್ಯಾಕಪ್ ಫೈನಲ್‌ ಆಡಬೇಕೆಂದರೆ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಎಲ್ಲಾ ತಂಡಗಳು ಸಮಾನ ಅಂಕ ಪಡೆದರೆ?

ಇದೆಲ್ಲದರ ಹೊರತಾಗಿ ಎಲ್ಲಾ ತಂಡಗಳು ಸಮಾನ ಅಂಕ ಪಡೆದರೆ ಆಗ ಫೈನಲ್ ಲೆಕ್ಕಾಚಾರ ಏನು ಎಂಬುದನ್ನು ನೋಡುವುದಾದರೆ.. ಪಾಕಿಸ್ತಾನವು ತನ್ನ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಒಂದನ್ನು ಗೆದ್ದರೆ, ಅದು ನಾಲ್ಕು ಅಂಕಗಳನ್ನು ಹೊಂದಿರುತ್ತದೆ. ಅದೇ ರೀತಿ, ಶ್ರೀಲಂಕಾ ಕೂಡ ತನ್ನ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಇನ್ನೊಂದರಲ್ಲಿ ಗೆದ್ದರೆ, ಅದು ಕೂಡ ನಾಲ್ಕು ಅಂಕಗಳನ್ನು ಹೊಂದಿರುತ್ತದೆ. ಟೀಂ ಇಂಡಿಯಾ ತನ್ನ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ಒಂದರಲ್ಲಿ ಸೋತರೆ, ಅದರ ಬಳಿಯಲ್ಲೂ 4 ಅಂಕಗಳಿರುತ್ತವೆ. ಇಂತಹ ಸಂದರ್ಭದಲ್ಲಿ ನೆಟ್ ರನ್ ರೇಟ್‌ ಅನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಯಾವ ತಂಡ ಉತ್ತಮ ರನ್ ರೇಟ್ ಹೊಂದಿರತ್ತದೋ ಆ ತಂಡ ಫೈನಲ್‌ಗೆ ತಲುಪಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:38 am, Mon, 11 September 23