ಏಷ್ಯಾಕಪ್ನಲ್ಲಿ (Asia Cup 2023) ಭಾರತ ಹಾಗೂ ಪಾಕಿಸ್ತಾನ (India vs Pakistan) ಮತ್ತೊಮ್ಮೆ ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಈ ಮೊದಲು ಈ ಎರಡೂ ತಂಡಗಳ ಮುಖಾಮುಖಿಗೆ ಮಳೆ ಅಡ್ಡಿಪಡಿಸಿತ್ತು. ಆದರೆ ಮಳೆ ಆಗಮನಕ್ಕೂ ಮುನ್ನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾಕ್ಕೆ ತಂಡದ ಮಧ್ಯಮ ಕ್ರಮಾಂಕ ಆಸರೆಯಾಗಿ ನಿಂತು ಪಾಕ್ ವೇಗಿಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕೆ ಕೊಂಡೊಯ್ದಿತ್ತು. ಆದರೆ ಪಾಕ್ ಇನ್ನಿಂಗ್ಸ್ ಆರಂಭವಾಗುವ ವೇಳೆಗೆ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು ರದ್ದಾಗೊಳಿಸಬೇಕಾಯಿತು. ಇನ್ನು ಆ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಅಗ್ರಕ್ರಮಾಂಕ ಸಂಪೂರ್ಣವಾಗಿ ನೆಲಕಚ್ಚಿತ್ತು. ಪಾಕ್ ವೇಗಿಗಳ ಮುಂದೆ ರನ್ ಗಳಿಸಲು ಪರದಾಡಿದ ತಂಡದ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಬೇಗನೇ ಪೆವಲಿಯನ್ ಸೇರಿಕೊಂಡಿದ್ದರು. ಆದರೆ ಇದೀಗ ಮತ್ತೊಮ್ಮೆ ಪಾಕ್ ವೇಗಿಗಳನ್ನು ಎದುರಿಸುವ ಸವಾಲು ಈ ಇಬ್ಬರ ಮುಂದಿದ್ದು, ಈ ಇಬ್ಬರು ದೈತ್ಯರು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ವಾಸ್ತವವಾಗಿ ಸೆಪ್ಟೆಂಬರ್ 10 ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸೂಪರ್-ಫೋರ್ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ಗಳು ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದಿದ್ದರು. ಅದರಲ್ಲೂ ರೋಹಿತ್, ಕೊಹ್ಲಿಯಂತಹ ಅನುಭವಿಗಳನ್ನು ಅಗ್ರ ಕ್ರಮಾಂಕದಲ್ಲಿ ಅಗ್ಗವಾಗಿ ಪೆವಿಲಿಯನ್ಗಟ್ಟಿದ್ದರು. ಇದೀಗ ಸೆಪ್ಟೆಂಬರ್ 10 ರಂದು ಪಾಕ್ ಬೌಲರ್ಗಳನ್ನು ಬೆಂಡೆತಲು ರೋಹಿತ್, ಕೊಹ್ಲಿ ಕಾತುರರಾಗಿದ್ದು, ಅವರಿಗೆ ಪೂರಕವಾಗಿ ಕೊಲಂಬೊ ಮೈದಾನದಲ್ಲಿನ ಅವರ ಅಂಕಿ ಅಂಶಗಳು ಕೂಡ ಅವರಿಗೆ ಬಲ ತುಂಬುತ್ತಿವೆ.
ಕೆಎಲ್ ರಾಹುಲ್ ಅಥವಾ ಇಶಾನ್ ಕಿಶನ್; ಪಾಕ್ ವಿರುದ್ಧ ಯಾರಿಗೆ ಸಿಗಲಿದೆ ತಂಡದಲ್ಲಿ ಆಡುವ ಅವಕಾಶ?
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2017 ರಲ್ಲಿ ಈ ಮೈದಾನದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿಯ ಎರಡು ಪಂದ್ಯಗಳನ್ನು ಆಡಿದ್ದರು. ಆ ಸರಣಿಯ ನಾಲ್ಕನೇ ಪಂದ್ಯದಲ್ಲಿ ಕೊಹ್ಲಿ ಹಾಗೂ ರೋಹಿತ್ ಭರ್ಜರಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಹೆಸರಿನಲ್ಲಿ ದಾಖಲೆ ಬರೆದಿದ್ದರು.
ಆ ಪಂದ್ಯದಲ್ಲಿ ರೋಹಿತ್ 104 ರನ್ ಮತ್ತು ಕೊಹ್ಲಿ 131 ರನ್ ಸಿಡಿಸಿದ್ದರು. ಅದರ ಆಧಾರದ ಮೇಲೆ ಭಾರತ 375 ರನ್ ದಾಖಲಿಸಿತ್ತು. ಅಷ್ಟೇ ಅಲ್ಲದೆ ಕೊಹ್ಲಿ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, ಪ್ರೇಮದಾಸ ಸ್ಟೇಡಿಯಂನಲ್ಲಿ ಕೇವಲ 8 ಇನ್ನಿಂಗ್ಸ್‌ಗಳನ್ನಾಡಿರುವ ವಿರಾಟ್ 3 ಶತಕ ಮತ್ತು ಅರ್ಧಶತಕದೊಂದಿಗೆ 104 ಸರಾಸರಿಯಲ್ಲಿ 519 ರನ್ ಗಳಿಸಿದ್ದಾರೆ. 2017ರಲ್ಲಿ ಈ ಮೈದಾನದಲ್ಲಿ ಕೊಹ್ಲಿ ಸತತ ಎರಡು ಶತಕ ಸಿಡಿಸಿದ್ದು ಕೂಡ ದಾಖಲೆಯಾಗಿದೆ.
ಅಷ್ಟೇ ಅಲ್ಲ, ಈ ಮೈದಾನದಲ್ಲಿ 375 ರನ್‌ಗಳು ಏಕದಿನ ಕ್ರಿಕೆಟ್‌ನ ಇತಿಹಾಸದಲ್ಲಿ ಅತಿದೊಡ್ಡ ಸ್ಕೋರ್ ಆಗಿದ್ದು, ಈ ದಾಖಲೆಯನ್ನು ಟೀಂ ಇಂಡಿಯಾ ಬರೆದಿರುವುದು ವಿಶೇಷವಾಗಿದೆ. ಪ್ರೇಮದಾಸ ಸ್ಟೇಡಿಯಂನಲ್ಲಿ ಸೃಷ್ಟಿಯಾಗಿರುವ 5 ದೊಡ್ಡ ಸ್ಕೋರ್‌ಗಳಲ್ಲಿ ಮೂರು ಸ್ಕೋರ್ಗಳು ಭಾರತದ ಹೆಸರಿನಲ್ಲಿವೆ. ಟೀಂ ಇಂಡಿಯಾ ಕೂಡ ಈ ಮೈದಾನದಲ್ಲಿ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಟೀಂ ಇಂಡಿಯಾದ ಒಟ್ಟಾರೆ ದಾಖಲೆಯೂ ಉತ್ತಮವಾಗಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ 46 ಪಂದ್ಯಗಳನ್ನು ಆಡಿದ್ದು, 23ರಲ್ಲಿ ಗೆಲುವು ಸಾಧಿಸಿದೆ. ಒಟ್ಟಿನಲ್ಲಿ ಬ್ಯಾಟ್ಸ್ಮನ್ಗಳಿಗೆ ಸಹಕಾರಿಯಾಗಿರುವ ಪ್ರೇಮದಾಸ ಸ್ಟೇಡಿಯಂನ ಪಿಚ್ನಲ್ಲಿ ಭಾರತ ತಂಡದ ದಿಗ್ಗಜರು ಪಾಕ್ ಬೌಲರ್ಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:11 pm, Thu, 7 September 23