ಇಂಗ್ಲೆಂಡ್ ತಂಡಕ್ಕೆ ಬ್ರೂಕ್ ಎಂಟ್ರಿ: ಏಕದಿನ ವಿಶ್ವಕಪ್ಗೂ ಆಯ್ಕೆ?
Harry Brook: ಒಂದು ವೇಳೆ ಏಕದಿನ ವಿಶ್ವಕಪ್ಗೂ ಮುನ್ನ ಜಾನಿ ಬೈರ್‌ಸ್ಟೋವ್ ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾದರೆ ಹ್ಯಾರಿ ಬ್ರೂಕ್ಗೆ ಅದೃಷ್ಟ ಖುಲಾಯಿಸುವುದು ಖಚಿತ ಎನ್ನಬಹುದು. ಇದಕ್ಕಾಗಿಯೇ ಇದೀಗ 24 ವರ್ಷದ ಯುವ ದಾಂಡಿಗನನ್ನು ನ್ಯೂಝಿಲೆಂಡ್ ಸರಣಿಗಾಗಿ ಆಯ್ಕೆ ಮಾಡಲಾಗಿದೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಇಂಗ್ಲೆಂಡ್ನ (England) ಹೊಡಿಬಡಿ ದಾಂಡಿಗ ಹ್ಯಾರಿ ಬ್ರೂಕ್ (Harry Brook) ಇದೀಗ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ಅದು ಕೂಡ ಏಕದಿನ ಸರಣಿಗಾಗಿ ಎಂಬುದು ವಿಶೇಷ. ಬುಧವಾರದಿಂದ ಶುರುವಾಗಲಿರುವ ಕಿವೀಸ್ ವಿರುದ್ಧದ 4 ಪಂದ್ಯಗಳ ಸರಣಿಗಾಗಿ ಬ್ರೂಕ್ ಅವರನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆ ಮಾಡಲಾಗಿದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಏಕದಿನ ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದ 15 ಸದಸ್ಯರ ಬಳಗದಲ್ಲಿ ಹ್ಯಾರಿ ಬ್ರೂಕ್ಗೆ ಸ್ಥಾನ ನೀಡಲಾಗಿಲ್ಲ. ಅತ್ಯುತ್ತಮ ಫಾರ್ಮ್ನಲ್ಲಿದ್ದರೂ ಯುವ ಆಟಗಾರನಿಗೆ ಸ್ಥಾನ ಕಲ್ಪಿಸದಿರಲು ಮುಖ್ಯ ಕಾರಣ ಬೆನ್ ಸ್ಟೋಕ್ಸ್ ಅವರ ಕಂಬ್ಯಾಕ್.
ಅಂದರೆ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದ ಬೆನ್ ಸ್ಟೋಕ್ಸ್ ಇದೀಗ ಏಕದಿನ ವಿಶ್ವಕಪ್ಗಾಗಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕಕ್ಕೆ ಸ್ಟೋಕ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಹ್ಯಾರಿ ಬ್ರೂಕ್ ಅವಕಾಶ ವಂಚಿತರಾಗಿದ್ದರು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಆಯ್ಕೆ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು.
ಇದೀಗ ಏಕದಿನ ವಿಶ್ವಕಪ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಹೀಗಾಗಿ ಏಕದಿನ ವಿಶ್ವಕಪ್ ತಂಡದಲ್ಲೂ ಬ್ರೂಕ್ಗೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಜಾನಿ ಬೈರ್ಸ್ಟೋವ್ಗೆ ಗಾಯದ ಸಮಸ್ಯೆ:
ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಭುಜದ ನೋವಿನಿಂದ ಬಳಲುತ್ತಿದ್ದಾರೆ. ಇದಾಗ್ಯೂ ಅವರು ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಏಕದಿನ ವಿಶ್ವಕಪ್ಗಾಗಿ ಅವರು ಈ ಸರಣಿಯ ವೇಳೆ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.
ಒಂದು ವೇಳೆ ಏಕದಿನ ವಿಶ್ವಕಪ್ಗೂ ಮುನ್ನ ಜಾನಿ ಬೈರ್‌ಸ್ಟೋವ್ ಸಂಪೂರ್ಣ ಫಿಟ್ನೆಸ್ ಸಾಧಿಸುವಲ್ಲಿ ವಿಫಲರಾದರೆ ಹ್ಯಾರಿ ಬ್ರೂಕ್ಗೆ ಅದೃಷ್ಟ ಖುಲಾಯಿಸುವುದು ಖಚಿತ ಎನ್ನಬಹುದು. ಇದಕ್ಕಾಗಿಯೇ ಇದೀಗ 24 ವರ್ಷದ ಯುವ ದಾಂಡಿಗನನ್ನು ನ್ಯೂಝಿಲೆಂಡ್ ಸರಣಿಗಾಗಿ ಆಯ್ಕೆ ಮಾಡಲಾಗಿದೆ.
ನ್ಯೂಝಿಲೆಂಡ್ ಸರಣಿಗೆ ಇಂಗ್ಲೆಂಡ್ ಏಕದಿನ ತಂಡ:
ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಹ್ಯಾರಿ ಬ್ರೂಕ್.
ಇದನ್ನೂ ಓದಿ: Harry Brook: ಬೂಮ್ ಬೂಮ್ ಬ್ರೂಕ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೋಟಕ ದಾಂಡಿಗ
ಇಂಗ್ಲೆಂಡ್ ವಿಶ್ವಕಪ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಗಸ್ ಅಟ್ಕಿನ್ಸನ್, ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲಾನ್, ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ, ಮಾರ್ಕ್ ವುಡ್ ಮತ್ತು ಕ್ರಿಸ್ ವೋಕ್ಸ್.
ತಂಡದಲ್ಲಿ ಬದಲಾವಣೆಗೆ ಅವಕಾಶ:
ಏಕದಿನ ವಿಶ್ವಕಪ್ ಆರಂಭಕ್ಕೂ ಒಂದು ವಾರ ಮುಂಚಿತವಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇದಾದ ಬಳಿಕ ಗಾಯದ ಸಮಸ್ಯೆ ಅಥವಾ ಇನ್ನಿತರ ಕಾರಣಗಳಿಗಾಗಿ ಬದಲಿ ಆಟಗಾರರನ್ನು ಆಯ್ಕೆ ಮಾಡಬೇಕಿದ್ದರೆ ಮುನ್ನ ಐಸಿಸಿಯ ಟೆಕ್ನಿಕಲ್ ಕಮಿಟಿಯ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ನ್ಯೂಝಿಲೆಂಡ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈ ಬಿಟ್ಟು ಹ್ಯಾರಿ ಬ್ರೂಕ್ಗೆ ವಿಶ್ವಕಪ್ ತಂಡದಲ್ಲಿ ಅವಕಾಶ ಕಲ್ಪಿಸಿದರೂ ಅಚ್ಚರಿಪಡಬೇಕಿಲ್ಲ.