ಇತ್ತೀಚೆಗಷ್ಟೇ ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಮಾಡಿದ ಭಾರತ ವನಿತಾ ಪಡೆ (IND W vs BAN W), ತವರು ನೆಲದಲ್ಲೇ ಬಾಂಗ್ಲಾ ವನಿತೆಯರಿಗೆ ವೈಟ್ ವಾಶ್ ಮುಖಭಂಗದ ಶಾಕ್ ನೀಡಿತ್ತು. ಇದೀಗ ಹರ್ಮನ್ಪ್ರೀತ್ ಪಡೆ ತನ್ನ ಮುಂದಿನ ಸರಣಿಗಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಮೂರು ಮಾದರಿಯ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ (South Africa Women’s Tour Of India 2024) ಆತಿಥ್ಯವಹಿಸುತ್ತಿದೆ. ವಾಸ್ತವವಾಗಿ ಭಾರತ ವನಿತಾ ಪಡೆ ಇದೇ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ. ಉಭಯ ತಂಡಗಳ ಈ ಮುಖಾಮುಖಿಯಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.
ಉಭಯ ತಂಡಗಳ ಮೂರು ಮಾದರಿಯ ಕ್ರಿಕೆಟ್ನ ಈ ಸರಣಿಗಾಗಿ ಬಿಸಿಸಿಐ ಮಂಗಳವಾರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೇಳಾಪಟ್ಟಿಯಂತೆ ಜೂನ್ 16 ರಿಂದ ಬೆಂಗಳೂರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 1 ರಂದು ಚೆನ್ನೈನಲ್ಲಿ ಏಕೈಕ ಟೆಸ್ಟ್ ಮತ್ತು ಜುಲೈ 5 ರಿಂದ ಮೂರು ಪಂದ್ಯಗಳ ಟಿ20 ಸರಣಿಯು ಅದೇ ಸ್ಥಳದಲ್ಲಿ ನಡೆಯಲಿದೆ. ವಿಶೇಷವೆಂದರೆ 1976ರ ನಂತರ ಮೊದಲ ಬಾರಿಗೆ ಮಹಿಳಾ ಟೆಸ್ಟ್ ಪಂದ್ಯಕ್ಕೆ ಚೆನ್ನೈ ಆತಿಥ್ಯ ವಹಿಸಲಿದೆ. ಈ ಮೊದಲು ವೆಸ್ಟ್ ಇಂಡೀಸ್ 1976 ರಲ್ಲಿ ಭಾರತದ ವಿರುದ್ಧ ಈ ನೆಲದಲ್ಲಿ ಟೆಸ್ಟ್ ಆಡಿತ್ತು.
ವಾಸ್ತವವಾಗಿ 2022-2025ರ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿ ಈ ಹೋಮ್ ಸರಣಿಯನ್ನು ಆಡಲಾಗುತ್ತದೆ. ಕಳೆದ ವರ್ಷ ವಾಂಖೆಡೆಯಲ್ಲಿ ಭಾರತವು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಸರಣಿಯನ್ನು ಆಡಿತ್ತು. ಇದೀಗ ಭಾರತ ಮಹಿಳಾ ತಂಡ ಜೂನ್‌ನಲ್ಲಿ ತವರಿನ ಸರಣಿಯನ್ನು ಆಡಲು ಸಿದ್ಧವಾಗಿದೆ. ಸುಮಾರು ಒಂದು ದಶಕದ ಹಿಂದೆ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿತ್ತು. ಆ ವೇಳೆ ಉಭಯ ತಂಡಗಳ ನಡುವೆ 1 ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಗೆಲುವು ಸಾಧಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ