ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ನಡೆದ ಸರಣಿಯ ಎರಡನೇ ಟೆಸ್ಟ್ ಪಂದ್ಯ ಎರಡನೇ ದಿನದ ಎರಡನೇ ಸೆಷನ್‌ನಲ್ಲಿ ಅಂತ್ಯಗೊಂಡಿದೆ. ಈ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಬೇಗ ಮುಗಿದ (ಚೆಂಡುಗಳ ವಿಚಾರದಲ್ಲಿ) ಟೆಸ್ಟ್ ಪಂದ್ಯ ಎನಿಸಿಕೊಂಡಿದೆ. 1877 ರಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಅಲ್ಲಿಂದ 2024ರ ವರೆಗೆ ಟೆಸ್ಟ್ ಪಂದ್ಯವೊಂದು ಕೇವಲ 642 ಎಸೆತಗಳಲ್ಲಿ ಅಂತ್ಯಗೊಂಡಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಕೇವಲ 107 ಓವರ್‌ಗಳನ್ನು ಮಾತ್ರ ಬೌಲ್ ಮಾಡಲಾಯಿತು. ವಾಸ್ತವವಾಗಿ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಿಂದ 100 ಓವರ್‌ಗಳನ್ನು ಬೌಲ್ ಮಾಡಲಾಗುತ್ತದೆ. ಇದರರ್ಥ ಈ ಪಂದ್ಯ ಕೂಡ ಬಹುತೇಕ ಏಕದಿನ ಪಂದ್ಯದಂತೆ ಇತ್ತು.
ಟೆಸ್ಟ್ ಪಂದ್ಯವೊಂದು ಅತಿ ಕಡಿಮೆ ಅವಧಿಗೆ ಅಂತ್ಯಗೊಂಡಿರುವುದು ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೂ ಮುನ್ನ 1932ರಲ್ಲಿ ಅಂದರೆ 92 ವರ್ಷಗಳ ಹಿಂದೆ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯ ಕೇವಲ 656 ಎಸೆತಗಳಲ್ಲಿ ಮುಕ್ತಾಯವಾಗಿತ್ತು. ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕೇಪ್ ಟೌನ್ ಟೆಸ್ಟ್ ಕೇವಲ 642 ಎಸೆತಗಳಲ್ಲಿ ಪೂರ್ಣಗೊಂಡಿದೆ. ಇಷ್ಟು ಬೇಗ ಮುಗಿದ ಈ ಶತಮಾನದ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.
IND vs SA: ಐತಿಹಾಸಿಕ ಗೆಲುವಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ..!
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಮೊದಲ ಬಾರಿಗೆ ಗೆದ್ದಿದೆ. 1993ರಲ್ಲಿ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಇಲ್ಲಿ ಆಡಿತ್ತು. ಇದೀಗ 31 ವರ್ಷಗಳ ಬಳಿಕ ಇಲ್ಲಿ ಏಳನೇ ಪಂದ್ಯ ಆಡುತ್ತಿರುವ ಟೀಂ ಇಂಡಿಯಾ ಮೊದಲ ಗೆಲುವು ಸಾಧಿಸಿದೆ. ಭಾರತ ಮಾತ್ರವಲ್ಲ, ನ್ಯೂಲ್ಯಾಂಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಷ್ಯಾದ ಯಾವುದೇ ತಂಡಕ್ಕೆ ಇದು ಮೊದಲ ಟೆಸ್ಟ್ ಗೆಲುವು. ಈ ಪಂದ್ಯವನ್ನು ಭಾರತ ತಂಡ 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 55 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಸಿರಾಜ್ 6 ವಿಕೆಟ್ ಪಡೆದಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ 6 ವಿಕೆಟ್ ಪಡೆದರೆ, ಆಫ್ರಿಕಾ ಪರ ಏಡೆನ್ ಮಾರ್ಕ್ರಂ ಶತಕ ಬಾರಿಸಿ ಮಿಂಚಿದರು. ಆಫ್ರಿಕಾ ನೀಡಿದ 79 ರನ್ಗಳ ಗುರಿಯನ್ನು ಭಾರತ 3 ವಿಕೆಟ್ ಕಳೆದುಕೊಂಡು ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Thu, 4 January 24