ಏಕದಿನ ವಿಶ್ವಕಪ್‌ನ (ICC World Cup 2023) 37 ನೇ ಪಂದ್ಯದಲ್ಲಿ ಇಂದು ಅಗ್ರ 2 ತಂಡಗಳಾದ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ (India vs South Africa) ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ 10 ಓವರ್ಗಳಲ್ಲೇ ತನ್ನ ಪವರ್ ತೋರಿ ಬರೋಬ್ಬರಿ 91 ರನ್ ಕಲೆಹಾಕಿದೆ. ಈ ಮೂಲಕ ಇತರ ಎದುರಾಳಿ ತಂಡಗಳೆದುರು ಮಾರಕ ಬೌಲಿಂಗ್ ಮೂಲಕ ಅಬ್ಬರಿಸುತ್ತಿದ್ದ ಆಫ್ರಿಕಾ ಬೌಲರ್ಗಳಿಗೆ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಶುಭ್ಮನ್ ಗಿಲ್ (Shubman Gill) ಆರಂಭದಲ್ಲೇ ಕಡಿವಾಣ ಹಾಕಿದ್ದಾರೆ. ಆದರೆ ಆರಂಭಿಕರಿಬ್ಬರ ವಿಕೆಟ್ ಪತನವಾಗಿರುವುದು ತಂಡಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ಗೆ ಈ ಇಬ್ಬರು 62 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಆರಂಭದಿಂದಲೂ ತಮ್ಮ ಸ್ಫೋಟಕ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ, ಬೌಂಡರಿ ಮೂಲಕ ತಮ್ಮ ಖಾತೆ ತೆರೆದರು. ಎರಡನೇ ಓವರ್ನಲ್ಲಿ ದಾಳಿಗಿಳಿದ ಯಾನ್ಸನ್ಗೂ ಉತ್ತಮ ಆರಂಭ ಸಿಗಲಿಲ್ಲ ಈ ಓವರ್ನಲ್ಲಿ ಒಟ್ಟು 18 ರನ್ ಬಂದವು.
IND vs SA: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; ಉಭಯ ತಂಡಗಳು ಹೀಗಿವೆ
ಇಲ್ಲಿಗೆ ನಿಲ್ಲದ ರೋಹಿತ್ ಹಾಗೂ ಗಿಲ್ ಮೂರನೇ ಓವರ್ನಲ್ಲೂ 8 ರನ್ ಕಲೆಹಾಕಿದರು. ಹೀಗಾಗಿ ಮೊದಲ ಐದು ಓವರ್ಗಳಲ್ಲಿ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಬರೋಬ್ಬರಿ 61 ರನ್ ಕಲೆಹಾಕಿತು. ಇದರಲ್ಲಿ ನಾಯಕ ರೋಹಿತ್ ಶರ್ಮಾ ಅವರದ್ದೇ ಸಿಂಹಪಾಲು. ಆದರೆ 7ನೇ ಓವರ್ನಲ್ಲಿ ದಾಳಿಗಿಳಿದ ಕಗಿಸೋ ರಬಾಡ ಟೀಂ ಇಂಡಿಯಾಕ್ಕೆ ಮೊದಲ ಶಾಕ್ ನೀಡಿದರು.
ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 40 ರನ್ ಬಾರಿಸಿದ್ದ ನಾಯಕ ರೋಹಿತ್ ರಬಾಡ ಅವರ ಬೌಲಿಂಗ್ನಲ್ಲಿ ಬವುಮಾಗೆ ಕ್ಯಾಚಿತ್ತು ಔಟಾದರು. ಈ ಮೂಲಕ ರೋಹಿತ್ ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯವಾಯಿತು. ಆ ಬಳಿಕ ಕೊಹ್ಲಿ ಜೊತೆಯಾದ ಗಿಲ್ ಕೂಡ ತಂಡದ ಮೊತ್ತವನ್ನು ಹೆಚ್ಚಿಸುವ ಬರದಲ್ಲಿ ಕೇಶವ್ ಮಹಾರಾಜ್ಗೆ ಬಲಿಯಾಗಿದ್ದಾರೆ.
ಗಿಲ್ ತಮ್ಮ ಇನ್ನಿಂಗ್ಸ್ನಲ್ಲಿ 24 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 23 ರನ್ ಸಿಡಿಸಿ ಮಹಾರಾಜ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪ್ರಸ್ತುತ ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿದೆ. ಈಗಾಗಲೇ ಭಾರತದ ಇನ್ನಿಂಗ್ಸ್ನ 15 ಓವರ್ಗಳು ಮುಗಿದಿವೆ. ಸದ್ಯ ಕೊಹ್ಲಿ ಹಾಗೂ ಶ್ರೇಯಸ್ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sun, 5 November 23