
ಕ್ರಿಕೆಟ್ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳು ಮೈದಾನಕ್ಕೆ ಪ್ರವೇಶಿಸಿದ ಘಟನೆಗಳನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಕೆಲವೊಮ್ಮೆ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಂದ ಕೆಲ ಕಾಲ ಆಟ ನಿಲ್ಲುವುದನ್ನು ನಾವು ನೋಡಿದ್ದೇವೆ. ಇನ್ನೂ ಒಮ್ಮೊಮ್ಮೆ ನಾಯಿ, ಬೆಕ್ಕುಗಳು ಮೈದಾನಕ್ಕೆ ನುಗ್ಗಿದ ಘಟನೆಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಗುವಾಹಟಿಯಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಪಂದ್ಯದ ವೇಳೆ ಏನಾಯಿತು ಎಂಬುದು ಯಾರ ಊಹೆಗೂ ನಿಲುಕದ ಸಂಗತಿಯಾಗಿದೆ. ಇಂತಹ ಘಟನೆಗಳು ಆಟದ ನಡುವೆ ನಡೆಯುವುದು ತೀರ ವಿರಳವಾದರೂ, ಈ ಘಟನೆ ಸಂಬಂವಿಸಿದಾಗ ಇಡೀ ಕ್ರೀಡಾಂಗಣವೇ ಶಾಕ್ ಆಗುವುದನ್ನು ನಾವು ಕಾಣಬಹುದಾಗಿದೆ. ಇಂದಿನ ಪಂದ್ಯದಲ್ಲೂ ಅಂತಹದ್ದೆ ಘಟನೆ ನಡೆದಿದ್ದು, ಟೀಂ ಇಂಡಿಯಾದ ಇನ್ನಿಂಗ್ಸ್ ವೇಳೆ ಹಾವೊಂದು ಮೈದಾನಕ್ಕೆ ನುಗ್ಗಿ ಕೆಲಕಾಲ ಮೈದಾನದಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಅಕ್ಟೋಬರ್ 2 ರ ಭಾನುವಾರದಂದು ಗುವಾಹಟಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯುತ್ತಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಆಟದ ಮೋಜು ಕೆಡಿಸಬಹುದು ಎಂಬ ಭಯ ಎಲ್ಲರಲ್ಲೂ ಇತ್ತು. ಆದರೆ ಎಲ್ಲರ ನಿರೀಕ್ಷೆಯಂತೆ ಆಟಕ್ಕೆ ಮಳೆ ಅವಕಾಶ ಮಾಡಿಕೊಟ್ಟರು ಇದಕ್ಕಿದ್ದಂತೆ ಮೈದಾನಕ್ಕೆ ನುಗ್ಗಿದ ಅಪರೂಪದ ಅತಿಥಿಯಿಂದ ಕೆಲಕಾಲ ಆಟವನ್ನು ನಿಲ್ಲಿಸಬೇಕಾಯಿತು.
Snake ? in the House #INDvsSA pic.twitter.com/CllrcwSfcJ
— Ashwani JP Singh (@ashwanijpsingh) October 2, 2022
ಪಂದ್ಯವನ್ನು ನಿಲ್ಲಿಸಿದ ವಿಶೇಷ ಅತಿಥಿ
ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಪವರ್‌ಪ್ಲೇಯಲ್ಲಿ ಟೀಂ ಇಂಡಿಯಾಕ್ಕೆ ತ್ವರಿತ ಆರಂಭ ನೀಡಿದರು. ಅಂತಹ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾ ತಂಡಕ್ಕೂ ವಿಶ್ರಾಂತಿ ಬೇಕಿತ್ತು. ಆದರೆ ಐಪಿಎಲ್‌ನಂತೆ, ಐಸಿಸಿ ಟೂರ್ನಿಗಳಲ್ಲಿ ಸ್ಟ್ರಾಟಜಿಕ್ ಟೈಮ್ ಔಟ್ ಇಲ್ಲ. ಆದರೆ ಮೈದಾನಕ್ಕೆ ನುಗ್ಗಿದ ಅಪರೂಪದ ಅತಿಥಿ ಆಫ್ರಿಕನ್ನರಿಗೆ ಉಸಿರಾಡಲು ಅವಕಾಶ ನೀಡಿತು. ಭಾರತದ ಇನಿಂಗ್ಸ್‌ನ ಎಂಟನೇ ಓವರ್ನಲ್ಲಿ ಈ ಇಡೀ ಪ್ರಸಂಗಕ್ಕೆ ಕ್ರೀಡಾಂಗಣ ಸಾಕ್ಷಿಯಾಯಿತು.
ಎಂಟನೇ ಓವರ್ ಆರಂಭಕ್ಕೂ ಮುನ್ನ ಆಟವನ್ನು ನಿಲ್ಲಿಸಲಾಯಿತು. ಏನಾಯಿತು ಎಂದು ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುವಷ್ಟರಲ್ಲಿ ಕ್ಯಾಮರಾದ ಕಣ್ಣು ಮೈದಾನದಲ್ಲಿ ಹರಿಯುತ್ತಿದ್ದ ಹಾವಿನ ಮೇಲೆ ಬಿತ್ತು. ಅಷ್ಟರಲ್ಲಾಗಲೇ ಹಾವು ಹರಿಯುತ್ತಿದ್ದ ಜಾಗದಲ್ಲಿ ಫೀಲ್ಡಿಂಗ್ಗೆ ನಿಂತಿದ್ದ ಆಫ್ರಿಕನ್ ಕ್ರಿಕೆಟರ್ ಆದಾಗಲೇ ಆ ಜಾಗದಿಂದ ಕಾಲ್ಕಿತ್ತಿದ್ದರು. ಆ ಬಳಿಕ ಮೈದಾನಕ್ಕೆ ಆಗಮಿಸಿದ ಗ್ರೌಂಡ್ಸ್ಮೆನ್ಗಳು ಹಾವನ್ನು ಸುರಕ್ಷಿತವಾಗಿ ಹಿಡಿದು, ಮೈದಾನದಿಂದ ಹೊರಕ್ಕೆ ಕೊಂಡೊಯ್ದರು. ಹಾವನ್ನು ಮೈದಾನದಿಂದ ಸಂರಕ್ಷಿಸಿದ ಬಳಿಕ ನಿಟ್ಟುಸಿರು ಬಿಟ್ಟ ಉಭಯ ತಂಡಗಳು ಆಟವನ್ನು ಮುಂದುವರೆಸಿದವು.
Published On - 9:06 pm, Sun, 2 October 22