Rishab Pant: ಧೋನಿ ದಾಖಲೆ ಮುರಿದ ರಿಷಭ್ ಪಂತ್

| Updated By: ಝಾಹಿರ್ ಯೂಸುಫ್

Updated on: Dec 28, 2021 | 10:20 PM

India vs South Africa Test: ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 272 ರನ್​ಗಳಿಸಿತ್ತು.

Rishab Pant: ಧೋನಿ ದಾಖಲೆ ಮುರಿದ ರಿಷಭ್ ಪಂತ್
Rishab Pant
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ (Team India) ವಿಕೆಟ್‌ಕೀಪರ್ ರಿಷಬ್ ಪಂತ್ (Rishab Pant) ವಿಶೇಷ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 327 ರನ್​ಗಳಿಸಿದರೆ, ದಕ್ಷಿಣ ಆಫ್ರಿಕಾ 197 ರನ್​ಗಳಿಗೆ ಸರ್ವಪತನ ಕಂಡಿತು. ಇದೇ ವೇಳೆ ವಿಕೆಟ್ ಹಿಂದೆ ರಿಷಭ್ ಪಂತ್ ನಾಲ್ಕು ಕ್ಯಾಚ್​ಗಳನ್ನು ಪಡೆದಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 100 ಬಲಿ ಪಡೆದ ದಾಖಲೆಯನ್ನು ಪಂತ್ ತಮ್ಮ ಹೆಸರಿಗೆ ಬರೆದುಕೊಂಡರು. ಅದು ಕೂಡ ಅತೀ ವೇಗವಾಗಿ ಎಂಬುದು ವಿಶೇಷ.

ಹೌದು, ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್​ನಲ್ಲಿ 100 ಮಂದಿಯನ್ನು ಕ್ಯಾಚ್ ಹಾಗೂ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ಕೇವಲ 26 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡುವ ಮೂಲಕ ಟೀಮ್ ಇಂಡಿಯಾ ಯಶಸ್ವಿ ವಿಕೆಟ್ ಕೀಪರ್​ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಮಹೇಂದ್ರ ಸಿಂಗ್ ಧೋನಿ ಹಾಗೂ ವೃದ್ಧಿಮಾನ್ ಸಾಹ ಹೆಸರಿನಲ್ಲಿತ್ತು. 36 ಟೆಸ್ಟ್​ ಪಂದ್ಯಗಳಿಂದ ಧೋನಿ-ಸಾಹ 100 ಮಂದಿಯ ಔಟ್​ಗೆ ಕಾರಣರಾಗಿದ್ದರು. ಇದೀಗ ಕೇವಲ 26 ಟೆಸ್ಟ್​ ಪಂದ್ಯಗಳಿಂದ 100 ಬಲಿ ಪಡೆಯುವ ಮೂಲಕ ಧೋನಿಯ ದಾಖಲೆಯನ್ನು ಮುರಿದು ರಿಷಭ್ ಪಂತ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ಪರ 100 ಮಂದಿಯನ್ನು ಔಟ್ ಮಾಡಿದ ವಿಕೆಟ್​ ಕೀಪರ್​ಗಳ ಪಟ್ಟಿಯಲ್ಲಿ ಒಟ್ಟು ಐವರು ವಿಕೆಟ್ ಕೀಪರ್​ಗಳಿದ್ದು, ಅದರಂತೆ ಇದೀಗ ಅಗ್ರಸ್ಥಾನದಲ್ಲಿ ರಿಷಭ್ ಪಂತ್ (26) ಇದ್ದಾರೆ. ದ್ವಿತೀಯ ಸ್ಥಾನವನ್ನು ಧೋನಿ ಹಾಗೂ ಸಾಹ (36) ಜಂಟಿಯಾಗಿ ಹಂಚಿಕೊಂಡಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಕಿರಣ್ ಮೋರೆ (39 ಟೆಸ್ಟ್), 4ನೇ ಸ್ಥಾನದಲ್ಲಿ ನಯನ್ ಮೊಂಗಿಯಾ (41 ಟೆಸ್ಟ್) ಹಾಗೂ 5ನೇ ಸೈಯದ್ ಕಿರ್ಮಾನಿ (42 ಟೆಸ್ಟ್) ಇದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್​ಗೆ ಕಾರಣರಾದ ಭಾರತದ ಆರನೇ ವಿಕೆಟ್ ಕೀಪರ್ ಎಂಬ ಸಾಧನೆಯನ್ನು ಪಂತ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನದಲ್ಲಿದ್ದು, ಮಾಹಿ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 294 ಬಲಿಪಶುಗಳನ್ನು ತೆಗೆದುಕೊಂಡಿದ್ದಾರೆ. ಇದರಲ್ಲಿ 256 ಕ್ಯಾಚ್‌ಗಳು ಮತ್ತು 38 ಸ್ಟಂಪಿಂಗ್‌ಗಳನ್ನು ಸೇರಿವೆ.

ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 3 ವಿಕೆಟ್​ ನಷ್ಟಕ್ಕೆ 272 ರನ್​ಗಳಿಸಿತ್ತು. 2ನೇ ದಿನದಾಟವು ಮಳೆಗೆ ಅಹುತಿಯಾದರೆ, ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 55 ಸೇರಿಸುವಷ್ಟರಲ್ಲಿ ಸರ್ಪಪತನ ಕಂಡಿತು. ಅದರಂತೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 327 ರನ್​ ಕಲೆಹಾಕಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಮೊಹಮ್ಮದ್ ಶಮಿ ಅವರ ಮಾರಕ ದಾಳಿಗೆ ತತ್ತರಿಸಿ 197 ರನ್​ಗಳಿಗೆ ಸರ್ವಪತನ ಕಂಡಿದೆ. ಸದ್ಯ ಭಾರತ 146 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(IND vs SA: Rishab Pant breaks Dhoni’s record)