India vs South Africa T20: ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದ ಟಿ20 ಸರಣಿಗೆ ಸಜ್ಜಾಗಿ ನಿಂತಿದೆ. ಈ ಸಿರೀಸ್ ಟೀಮ್ ಇಂಡಿಯಾ (Team India) ಪಾಲಿಗೆ ಬಹಳ ಮಹತ್ವದ ಸರಣಿ. ಏಕೆಂದರೆ ಈಗಾಗಲೇ ಭಾರತ ತಂಡವು ಟಿ20 ಕ್ರಿಕೆಟ್ನಲ್ಲಿ ಸತತವಾಗಿ 12 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೀಗ ವಿಶ್ವ ದಾಖಲೆಯ ಹೊಸ್ತಿಲಲ್ಲಿ ಇದ್ದು, ಹೊಸ ರೆಕಾರ್ಡ್ ಬರೆಯಲು ಒಂದು ಗೆಲುವಿನ ಅವಶ್ಯಕತೆಯಿದೆ. ಆದರೆ ಪ್ರಸ್ತುತ ಸರಣಿಯಲ್ಲಿ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (Rohit sharma), ವಿರಾಟ್ ಕೊಹ್ಲಿ (Virat Kohli) ಸೇರಿದಂತೆ ಪ್ರಮುಖ ಆಟಗಾರರು ಆಡುತ್ತಿಲ್ಲ ಎಂಬುದು ವಿಶೇಷ. ಹೀಗಾಗಿ ತಂಡದ ಸಾರಥ್ಯವನ್ನು ಕೆಎಲ್ ರಾಹುಲ್ (KL Rahul) ಅವರಿಗೆ ನೀಡಲಾಗಿದೆ. ಇದೀಗ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿಶ್ವ ದಾಖಲೆ ಬರೆಯುವ ಅವಕಾಶ ಟೀಮ್ ಇಂಡಿಯಾ ಮುಂದಿದ್ದು, ಈ ದಾಖಲೆಯು ಕೆಎಲ್ ರಾಹುಲ್ ಅವರ ನಾಯಕತ್ವದಲ್ಲಿ ಮೂಡಿಬರಲಿದೆಯಾ ಎಂಬುದೇ ಪ್ರಶ್ನೆ.
ಏಕೆಂದರೆ ಕೆಎಲ್ ರಾಹುಲ್ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಮೂರೂ ಮ್ಯಾಚ್ನಲ್ಲೂ ಭಾರತ ತಂಡ ಸೋತಿದೆ. ಇತ್ತ ಟೀಮ್ ಇಂಡಿಯಾ ನಾಯಕತ್ವದ ರೇಸ್ನಲ್ಲಿ ರಿಷಭ್ ಪಂತ್ ಇದ್ದು, ಅದರ ಜೊತೆಗೆ ಇದೀಗ ಐಪಿಎಲ್ನಲ್ಲಿ ಯಶಸ್ವಿ ನಾಯಕ ಎನಿಸಿಕೊಳ್ಳುವ ಮೂಲಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಎಂಟ್ರಿಕೊಟ್ಟಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವಕ್ಕೆ ಸೌತ್ ಆಫ್ರಿಕಾ ಸರಣಿ ಅಗ್ನಿಪರೀಕ್ಷೆ ಆಗಿರಲಿದೆ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ರಾಹುಲ್ ಅವರ ನಾಯಕತ್ವದ ನಡೆಗಳನ್ನು ನಾವು ಐಪಿಎಲ್ನಲ್ಲೇ ಗಮನಿಸಿದ್ದೇವೆ. ಇದಾಗ್ಯೂ ಅವರು ಟೀಮ್ ಇಂಡಿಯಾವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದನ್ನು ಸೌತ್ ಆಫ್ರಿಕಾ ಸರಣಿಯ ವೇಳೆ ನಿರೀಕ್ಷಿಸಲಿದ್ದೇವೆ ಎಂದಿದ್ದಾರೆ. ಅಂದರೆ ಕೆಎಲ್ ರಾಹುಲ್ ಅವರ ನಾಯಕತ್ವದ ಬಗ್ಗೆ ಈಗಾಗಲೇ ಆಯ್ಕೆ ಸಮಿತಿಯಲ್ಲಿ ಚರ್ಚೆಯಾಗಿದೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಹಾಗಾಗಿ ಸೌತ್ ಆಫ್ರಿಕಾ ವಿರುದ್ದದ ಸಂಪೂರ್ಣ ಸರಣಿಯ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಅವರಿಗೆ ವಹಿಸಲಾಗಿದೆ.
ಒಂದು ವೇಳೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದ ಸೋತರೆ ಕೆಎಲ್ ರಾಹುಲ್ ಅವರ ನಾಯಕತ್ವದ ಕೆರಿಯರ್ಗೆ ಅದು ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಕಳೆದ 12 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದು, ಇದೀಗ 13ನೇ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡಬೇಕಾದ ಅನಿವಾರ್ಯತೆ ಕೆಎಲ್ಆರ್ ಮುಂದಿದೆ.
ಏಕೆಂದರೆ ಈ ಗೆಲುವು ಟೀಮ್ ಇಂಡಿಯಾ ಪಾಲಿಗೆ ವಿಶ್ವ ದಾಖಲೆಯಾಗಲಿದೆ. ಈಗಾಗಲೇ ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ಹಾಗೂ ರೊಮೆನಿಯಾ ತಂಡಗಳು ಸತತ 12 ಗೆಲುವು ದಾಖಲಿಸಿ ವಿಶ್ವ ದಾಖಲೆ ಬರೆದಿದೆ. ಈ ದಾಖಲೆಯನ್ನು ಸರಿಗಟ್ಟಿರುವ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ದದ ಮೊದಲ ಪಂದ್ಯ ಗೆದ್ದು ವಿಶ್ವ ದಾಖಲೆ ಬರೆಯುವ ಇರಾದೆಯಲ್ಲಿದೆ. ಅಂದರೆ ಇಲ್ಲಿ ನಾಯಕ ಕೆಎಲ್ ರಾಹುಲ್ ಅವರಿಗೆ ಮೊದಲ ಪಂದ್ಯವೇ ಅಗ್ನಿಪರೀಕ್ಷೆ ಆಗಿರಲಿದೆ.
ಇಂಡಿಯಾ-ಸೌತ್ ಆಫ್ರಿಕಾ 5 ಪಂದ್ಯಗಳ ಸರಣಿ:
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿ ಒಂದು ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ. ಹೀಗಾಗಿ ಐಪಿಎಲ್ ಅನ್ನು ಸ್ಟೇಡಿಯಂನಲ್ಲಿ ಕಣ್ತುಂಬಿಕೊಳ್ಳಲು ಸಾಧ್ಯವಾಗದ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿ20 ಪಂದ್ಯವನ್ನು ವೀಕ್ಷಿಸಬಹುದು.
ಈ ಸರಣಿಯು ಜೂನ್ 9 ರಂದು ಆರಂಭವಾಗಲಿದ್ದು, ಅಂತಿಮ ಪಂದ್ಯ ಜೂನ್ 19 ರಂದು ನಡೆಯಲಿದೆ. ಈಗಾಗಲೇ ಸರಣಿಗಾಗಿ ಭಾರತ ಯುವ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಇನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹೀಗಾಗಿ ತಂಡವನ್ನು ಕನ್ನಡಿಗ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಗೆ ಟೀಮ್ ಇಂಡಿಯಾ ಹೀಗಿದೆ.
ಟೀಮ್ ಇಂಡಿಯಾ ಟಿ20 ತಂಡ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್ದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್.
ದಕ್ಷಿಣ ಆಫ್ರಿಕಾ ಟಿ20 ತಂಡ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೋಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ತಬ್ರೇಝ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಯಾನ್ಸೆನ್.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.