ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ20 ಸರಣಿಯ ಹೀನಾಯ ಸೋಲಿನ ಬಳಿಕ ಶ್ರೀಲಂಕಾ ಕ್ರಿಕೆಟ್ (Sri Lanka Cricket) ತಂಡ ಭಾರತಕ್ಕೆ ಆಗಮಿಸಿದೆ. ಆದರೆ ಇಲ್ಲಿಯೂ ಲಂಕಾ ತಂಡಕ್ಕೆ ಭಾರತ ಎದುರು ಸವಾಲೊಡ್ಡುವುದು ತುಂಬಾ ಕಷ್ಟ, ಏಕೆಂದರೆ ಟೀಂ ಇಂಡಿಯಾ ಪ್ರಚಂಡ ಫಾರ್ಮ್‌ನಲ್ಲಿದೆ. ತಂಡದ ಆಟಗಾರರ ಫಿಟ್ನೆಸ್ ಶ್ರೀಲಂಕಾಕ್ಕೆ ಈ ಸವಾಲನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಕೊರೊನಾ ವೈರಸ್ ಸೋಂಕಿನಿಂದ ಸ್ಟಾರ್ ಲೆಗ್ ಸ್ಪಿನ್ನರ್ ವನಿಂದು ಹಸರಂಗಾ (Wanindu Hasaranga) ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದು ಸಾಲದೆಂಬಂತೆ ಈಗ ಶ್ರೀಲಂಕಾ ತಂಡದ ಇನ್ನಿಬ್ಬರು ಆಟಗಾರರು ಮೊದಲ ಪಂದ್ಯದಲ್ಲಿ ಆಡುವುದು ಅಸಾಧ್ಯವಾಗಿದೆ. ಶ್ರೀಲಂಕಾದ ಮಾಧ್ಯಮಗಳ ವರದಿ ಪ್ರಕಾರ, ತಂಡದ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ (Kusal Mendis) ಮತ್ತು ಯುವ ಸ್ಪಿನ್ನರ್ ಮಹಿಶ್ ಟೀಕ್ಷಣ ಅವರು ಗಾಯದ ಕಾರಣ ಮೊದಲ ಟಿ20ಯಿಂದ ಹೊರಗುಳಿಯಲಿದ್ದಾರೆ.
ಮೂರು ಪಂದ್ಯಗಳ ಟಿ20 ಸರಣಿಗಾಗಿ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದೆ. ಶ್ರೀಲಂಕಾ ತಂಡವು ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಸರಣಿಯನ್ನು ಮುಗಿಸಿ ನೇರವಾಗಿ ಭಾರತವನ್ನು ತಲುಪಿದೆ. ಸರಣಿಯ ಮೊದಲ ಪಂದ್ಯ ಲಕ್ನೋದಲ್ಲಿ ನಡೆಯಲಿದೆ. ಆದರೆ, ಈ ಪಂದ್ಯದಲ್ಲಿ ಶ್ರೀಲಂಕಾ ಈ ಇಬ್ಬರು ಆಟಗಾರರಿಲ್ಲದೇ ಆಡಬೇಕಾಗಿದೆ. ಇಬ್ಬರೂ ಆಟಗಾರರು ಒಟ್ಟಾಗಿ ಆಸ್ಟ್ರೇಲಿಯಾ ವಿರುದ್ಧ ತಂಡಕ್ಕೆ ಏಕೈಕ ಜಯ ತಂದುಕೊಟ್ಟಿದ್ದರು.
ಮೆಂಡಿಸ್ ಮತ್ತು ತೀಕ್ಷಣಗೆ ಇಂಜುರಿ
ಶ್ರೀಲಂಕಾದ ಪ್ರಸಿದ್ಧ ಕ್ರೀಡಾ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಅವರು ಪಂದ್ಯದ ಒಂದು ದಿನ ಮೊದಲು ಫೆಬ್ರವರಿ 23 ರಂದು ಬುಧವಾರ ಟ್ವೀಟ್ ಮಾಡಿ, ಈ ಇಬ್ಬರೂ ಆಟಗಾರರಿಗೆ ಮಂಡಿರಜ್ಜು ಸಮಸ್ಯೆ ಇದ್ದು, ಎರಡನೇ ಟಿ20ಯಲ್ಲೂ ಮೆಂಡಿಸ್ ಆಡುವುದು ಕಷ್ಟ ಎಂದು ಬರೆದುಕೊಂಡಿದ್ದಾರೆ. ಶ್ರೀಲಂಕಾ ನಾಳೆ (ಫೆಬ್ರವರಿ 24) ಕುಸಾಲ್ ಮೆಂಡಿಸ್ ಮತ್ತು ಮಹಿಷ್ ತೀಕ್ಷಣ ಇಲ್ಲದೆ ಪಂದ್ಯವನ್ನಾಡಲಿದೆ. ಮೆಂಡಿಸ್ ಒಂದಕ್ಕಿಂತ ಹೆಚ್ಚು ಪಂದ್ಯಗಳಿಂದ ಹೊರಗುಳಿಯಬಹುದು ಎಂಬ ಆತಂಕವಿದೆ. ಇಬ್ಬರಿಗೂ ಮಂಡಿರಜ್ಜು ಸಮಸ್ಯೆ ಇದೆ.
Sri Lanka will be without Kusal Mendis and Maheesh Theekshana tomorrow. Mendis possibly could be ruled out of more than one game. Both have hamstring niggles. All hope is not lost for Wanindu though. If he return a negative PCR tomorrow, he’ll fly to Dharamshala from Canberra.
— Rex Clementine (@RexClementine) February 23, 2022
ಆದರೆ, ಹಸರಂಗ ವಿಚಾರದಲ್ಲಿ ಶ್ರೀಲಂಕಾ ತಂಡಕ್ಕೆ ಇನ್ನೂ ಭರವಸೆ ಇದೆ. ಅವರು ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಅವರ ಕೋವಿಡ್ ಪರೀಕ್ಷೆಯು ನೆಗೆಟಿವ್ ಬಂದರೆ, ಅವರು ನೇರವಾಗಿ ಭಾರತದ ಧರ್ಮಶಾಲಾವನ್ನು ತಲುಪಲಿದ್ದಾರೆ. ಅಲ್ಲಿ ಸರಣಿಯ ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳನ್ನು ಆಡಲಾಗುತ್ತದೆ.
ಶ್ರೀಲಂಕಾ ಸೋಲು, ಭಾರತಕ್ಕೆ ಫಿಟ್ನೆಸ್ ಸಮಸ್ಯೆ
21ರ ಹರೆಯದ ಸ್ಪಿನ್ನರ್ ಮಹಿಷ್ ತೀಕ್ಷಣಾ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ, ಈ ಆಫ್ ಸ್ಪಿನ್ನರ್ ಆರ್ಥಿಕ ಬೌಲಿಂಗ್‌ನೊಂದಿಗೆ 5 ವಿಕೆಟ್‌ಗಳನ್ನು ಪಡೆದರು. ಅದೇ ಸಮಯದಲ್ಲಿ, ಕಳೆದ ತಿಂಗಳು ನಿಷೇಧದ ನಂತರ ಶ್ರೀಲಂಕಾ ತಂಡಕ್ಕೆ ಮರಳಿದ್ದ ಎಡಗೈ ಆಕ್ರಮಣಕಾರಿ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಕೂಡ ಕೊನೆಯ ಟಿ20 ನಲ್ಲಿ 68 ರನ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ ತಂಡವನ್ನು ಗೆಲ್ಲಿಸಿದರು. ಈ ಮೂವರು ಆಟಗಾರರ ಅನುಪಸ್ಥಿತಿಯಲ್ಲಿ ಶ್ರೀಲಂಕಾ ತಂಡದ ಮೇಲೆ ಹೆಚ್ಚುವರಿ ಒತ್ತಡ ಬೀಳಲಿದೆ. ಆದರೆ, ಸ್ವತಃ ಭಾರತ ತಂಡವೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದೆ. ಕೆಎಲ್ ರಾಹುಲ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಂಡದಿಂದ ಔಟಾದ ನಂತರ ದೀಪಕ್ ಚಹಾರ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಗಾಯದಿಂದ ಸರಣಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ:IND vs SL: ಉಭಯ ದೇಶಗಳ ನಡುವಿನ ಟಿ20ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿ ಇಲ್ಲಿದೆ
Published On - 6:26 pm, Wed, 23 February 22