ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದಲ್ಲಿ ನಿರ್ಗಮಿಸಿದ್ದೆ ತಡ ಭಾರತ ತಂಡ ನಂತರ ನಡೆದ ಒಂದೇ ಒಂದು ಟಿ20 ಪಂದ್ಯದಲ್ಲಿ ಸೋಲದೆ ದಾಖಲೆ ಬರೆಯುತ್ತಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಬಳಿಕ ಇದೀಗ ಅಂದುಕೊಂಡಂತೆ ಶ್ರೀಲಂಕಾ (India vs Sri Lanka) ವಿರುದ್ಧದ ಸರಣಿಯನ್ನೂ 3-0 ಅಂತರದಿಂದ ವೈಟ್ವಾಷ್ ಮಾಡಿ ಪರಾಕ್ರಮ ಮೆರೆದಿದೆ. ಈ ಮೂಲಕ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಖಾತೆಗೂ ದಾಖಲೆಗಳ ಪಟ್ಟಿ ಸೇರಿದೆ. ಭಾನುವಾರ ಧರ್ಮಶಾಲದ ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಮೂರನೇ ಟಿ20 ಕದನದಲ್ಲೂ ಟೀಮ್ ಇಂಡಿಯಾ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಮಿಂಚಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಶ್ರೇಯಸ್ ಅಯ್ಯರ್ (Shreyas Iyer) ಬ್ಯಾಟಿಂಗ್ನಲ್ಲಿ ಮತ್ತೊಮ್ಮೆ ಅಬ್ಬರಿಸಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದರೆ ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಡದೆ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ನಿರ್ಧಾರವನ್ನು ಭಾರತೀಯ ಬೌಲರ್ಗಳು ಆರಂಭದಲ್ಲೇ ತಲೆಕೆಳಗಾಗಿಸಿದರು. ಸಿರಾಜ್ ಮೊದಲ ಓವರ್‌ನಲ್ಲೇ ಗುಣತಿಲಕ ವಿಕೆಟ್ ಕಿತ್ತರು. ಆವೇಶ್ ಖಾನ್ ಕೂಡ ಹಿಂದುಳಿಯಲಿಲ್ಲ. ತಮ್ಮ ಮೊದಲ ಓವರ್‌ನಲ್ಲೇ ಕಳೆದ ಪಂದ್ಯದ ಹೀರೋ ನಿಸ್ಸಂಕ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಆವೇಶ್ ತಮ್ಮ ದ್ವಿತೀಯ ಓವರ್‌ನಲ್ಲಿ ಚರಿತ ಅಸಲಂಕ ಅವರನ್ನು ಕೀಪರ್ ಸ್ಯಾಮ್ಸನ್ ಕೈಗೆ ಕ್ಯಾಚ್ ಕೊಡಿಸಿದರು. ಪವರ್ ಪ್ಲೇ ವೇಳೆ ಲಂಕಾ 3 ವಿಕೆಟಿಗೆ ಕೇವಲ 18 ರನ್ ಗಳಿಸಿ ಕುಂಟುತ್ತಿತ್ತು. ಈ ಅವಧಿಯಲ್ಲಿ ಭಾರತ ಎದುರಾಳಿಗೆ ಬಿಟ್ಟುಕೊಟ್ಟಿದ್ದು ಕೇವಲ ಒಂದು ಬೌಂಡರಿಯನ್ನಷ್ಟೆ. ಇದು ಭಾರತ ಪವರ್ ಪ್ಲೇನಲ್ಲಿ ಬಿಟ್ಟುಕೊಟ್ಟ ಅತಿ ಕಡಿಮೆ ರನ್ ಆಯಿತು.
ನಂತರ ರವಿ ಬಿಷ್ಣೋಯಿ ಕೂಡ ಮೊದಲ ಓವರ್‌ನಲ್ಲೇ ವಿಕೆಟ್ ಬೇಟೆಯಾಡಿದರು. ಜನಿತ್ ಲಿಯನಗೆ ಬೌಲ್ಡ್ ಆಗಿ ನಿರ್ಗಮಿಸಿದರು. ಅರ್ಧ ಹಾದಿ ಕ್ರಮಿಸುವಾಗ ಲಂಕಾ 43ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಮತ್ತೆ ಆಸರೆಯಾಗಿದ್ದು 5ನೇ ವಿಕೆಟಿಗೆ ದಿನೇಶ್ ಚಂಡಿಮಾಲ್ ಮತ್ತು ನಾಯಕ ದಸುನ್ ಶಣಕ. ಇವರು ಒಂದಿಷ್ಟು ಪ್ರತಿರೋಧ ಒಡ್ಡಿದರು. ಚಂಡಿಮಾಲ್ 25 ರನ್ನಿಗೆ ನಿರ್ಗಮಿಸಿದರೂ ಶಣಕ ಕೊನೆಯ ಹಂತದಲ್ಲಿ ಮುನ್ನುಗ್ಗಿ ಬಾರಿಸಲಾರಂಭಿಸಿದರು. 15 ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 78 ರನ್ ಮಾಡಿದ್ದ ಶ್ರೀಲಂಕಾ, ಶಣಕ ಸಾಹಸದಿಂದ ಡೆತ್ ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳದುಕೊಳ್ಳದೆ 68 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
6ನೇ ವಿಕೆಟಿಗೆ 47 ಎಸೆತಗಳಿಂದ 86 ರನ್ ಹರಿದು ಬಂತು. ಶಣಕ 38 ಎಸೆತ ಎದುರಿಸಿ ಅಜೇಯ 74 ರನ್ ಬಾರಿಸಿದರು. 9 ಬೌಂಡರಿ, 2 ಸಿಕ್ಸರ್ ಸಿಡಿಸಿ ಗೌರವಯುತ ಮೊತ್ತವೊಂದನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಿತು. ಭಾರತ ಪರ ಆವೇಶ್ 2 ವಿಕೆಟ್ ಕಿತ್ತರೆ, ಸಿರಾಜ್, ಹರ್ಷಲ್, ಕುಲ್ದೀಪ್ ಮತ್ತಿ ರವಿ ತಲಾ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭವೂ ಚೆನ್ನಾಗಿರಲಿಲ್ಲ. 51 ರನ್‌ಗಳಿಗೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಅಮೋಘ ಲಯದಲ್ಲಿರುವ ಮುಂಬೈಕರ್ ಶ್ರೇಯಸ್ (ಅಜೇಯ 73; 45ಎ, 9ಬೌಂಡರಿ, 1ಸಿಕ್ಸರ್) ಮತ್ತೆ ಮಿಂಚಿದರು. ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ರವೀಂದ್ರ ಜಡೇಜ (ಅಜೇಯ22) ಕೂಡ ಮಿಂಚಿದರು. ಇದರಿಂದಾಗಿ ತಂಡವು 19 ಎಸೆತಗಳು ಬಾಕಿಯಿರುವಾಗಲೇ ಜಯಿಸಿತು. ಶ್ರೇಯಸ್ ಈ ಸರಣಿಯಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು.
ಈ ಮೂಲಕ ಮತ್ತೊಂದು ವೈಟ್ ವಾಷ್ ಸಾಧನೆ ಮಾಡಿದ ಟೀಮ್ ಇಂಡಿಯಾ ಸತತ 12ನೇ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಜಯ ಸಾಧಿಸಿತು. ಈ ಜಯದೊಂದಿಗೆ ಈ ಹಿಂದೆ ಸತತ 12 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಅಫ್ಘಾನಿಸ್ತಾನದ ದಾಖಲೆಯನ್ನು ಟೀಮ್ ಇಂಡಿಯಾ ಸರಿದೂಗಿಸಿತು.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಚಿನ್ ಬಾಲ್ಯ ಸೇಹಿತ ವಿನೋದ್ ಕಾಂಬ್ಳಿಯನ್ನು ಬಂಧಿಸಿದ ಮುಂಬೈ ಪೊಲೀಸರು..!