IND vs WI 1st ODI: ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಇಂದು ಚಾಲನೆ: ರೋಹಿತ್ಗೆ ತಲೆನೋವಾದ ಪ್ಲೇಯಿಂಗ್ XI
India vs West Indies: ಟೀಮ್ ಇಂಡಿಯಾಕ್ಕೆ ಪ್ಲೇಯಿಂಗ್ ಇಲೆವೆನ್ನದ್ದೇ ದೊಡ್ಡ ಚಿಂತೆ. ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲು ಮೂವರು ತಯಾರಾಗಿದ್ದಾರೆ. ಶುಭ್ಮನ್ ಗಿಲ್, ಇಶಾನ್ ಕಿಶನ್ ಹಾಗೂ ರತುರಾಜ್ ಗಾಯಕ್ವಾಡ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಬಾರ್ಬಡಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಕದಿನ ವಿಶ್ವಕಪ್ (ODI World Cup) ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೆ (Team India) ಒಡಿಐ ಸರಣಿಯ ಮೂರೂ ಪಂದ್ಯ ಬಹುಮುಖ್ಯವಾಗಿದೆ. ಅತ್ತ ವೆಸ್ಟ್ ಇಂಡೀಸ್ ವಿಶ್ವಕಪ್ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದು, ನೂತನ ಯೋಜನೆಯೊಂದಿಗೆ ಕಣಕ್ಕಿಳಿದು ಮಾನ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಉಭಯ ತಂಡಗಳಿಗೆ ಏಕದಿನ ಸರಣಿ ಮುಖ್ಯ ಆಗಿರುವಾಗ ಮೊದಲ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಟೀಮ್ ಇಂಡಿಯಾಕ್ಕೆ ಪ್ಲೇಯಿಂಗ್ ಇಲೆವೆನ್ನದ್ದೇ ದೊಡ್ಡ ಚಿಂತೆ. ರೋಹಿತ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲು ಮೂವರು ತಯಾರಾಗಿದ್ದಾರೆ. ಶುಭ್ಮನ್ ಗಿಲ್, ಇಶಾನ್ ಕಿಶನ್ ಹಾಗೂ ರತುರಾಜ್ ಗಾಯಕ್ವಾಡ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಟೆಸ್ಟ್ನಲ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ನಂತರದ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ಕಿಶನ್ಗೆ ಅವಕಾಶ ಸಿಕ್ಕರೆ ಸಂಜು ಸ್ಯಾಮ್ಸನ್ ಬೆಂಚ್ ಕಾಯಬೇಕಿದೆ.
IND vs WI: ಮೊದಲ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿರಲಿದೆ
ಆಲ್ರೌಂಡರ್ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ವಹಿಸಬಹುದು. ಇವರ ಜೊತೆಗೆ ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಆಯ್ಕೆ ಕೂಡ ಇದೆ. ವೇಗಿಗಳಾಗಿ ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕಟ್, ಮುಖೇಶ್ ಕುಮಾರ್ ಇದ್ದರೆ ಪ್ರಮುಖ ಸ್ಪಿನ್ನರ್ಗಳಾಗಿ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ.
ಅತ್ತ ವೆಸ್ಟ್ ಇಂಡೀಸ್ ತಂಡ ಕೂಡ ಬಲಿಷ್ಠವಾಗಿದೆ. ಸ್ಫೋಟಕ ಬ್ಯಾಟರ್ ಶ್ರಿಮ್ರೋನ್ ಹೆಟ್ಮೇರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇವರು 2022ರ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ಪರ ಕೊನೆಯದಾಗಿ ಕಣಕ್ಕಿಳಿದಿದ್ದರು. ಇದೀಗ ಸುಮಾರು ಒಂದು ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ. ಇವರ ಜೊತೆಗೆ ಒಶಾನೆ ಥಾಮಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ವೇಗದ ಬೌಲರ್ ಜೇಡನ್ ಸೀಲ್ಸ್ ಮತ್ತು ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ ಅವರು ಇಂಜುರಿಯಿಂದ ಗುಣಮುಖರಾಗಿ ತಂಡ ಸೇರಿಕೊಂಡಿದ್ದಾರೆ. ಗುಡಾಕೇಶ್ ಮೋಟಿ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು ಇಂದು ಆಡಬಹುದು. ಆದರೆ, ನಿಕೋಲಸ್ ಪೂರನ್ ಹಾಗೂ ಜೇಸನ್ ಹೋಲ್ಡರ್ ಇಲ್ಲಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ.
ಪಂದ್ಯ ಎಷ್ಟು ಗಂಟೆಗೆ-ನೇರ ಪ್ರಸಾರ?:
ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯದ ಟಾಸ್ ಪ್ರಕ್ರಿಯೆಯು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಗೆ ನಡೆಯಲಿದ್ದು, ಪಂದ್ಯ 7.30ಕ್ಕೆ ಶುರುವಾಗಲಿದೆ. ಈ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೆ ಫ್ಯಾನ್ ಕೋಡ್ ಆ್ಯಪ್ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್.
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಖೈಲ್ ಮೇಯರ್ಸ್, ಅಲಿಕ್ ಅಥಾನಾಝ್, ಕೀಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರೋನ್ ಹೆಟ್ಮೇರ್, ಅಲ್ಝಾರಿ ಜೋಸೆಫ್, ಯಾನಿಕ್ ಕ್ಯಾರಿಯಾ, ಬ್ರ್ಯಾಂಡನ್ ಕಿಂಗ್, ಗುಡಾಕೇಶ್ ಮೋಟಿ, ಕೆವಿನ್ ಸಿಂಕ್ಲೇರ್, ರೊಮೊರಿಯೊ ಶೆಫರ್ಡ್, ಒಶಾನೆ ಥಾಮಸ್, ಜೇಡನ್ ಸೀಲ್ಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ