IND vs WI: ಸಂಜು, ಸೂರ್ಯನಿಗೆ ಕೊನೆಯ ಚಾನ್ಸ್​..!

| Updated By: ಝಾಹಿರ್ ಯೂಸುಫ್

Updated on: Jul 31, 2023 | 5:33 PM

India vs West Indies 3rd ODI: ಈ ನಿರ್ಣಾಯಕ ಪಂದ್ಯವು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

IND vs WI: ಸಂಜು, ಸೂರ್ಯನಿಗೆ ಕೊನೆಯ ಚಾನ್ಸ್​..!
Sanju Samson-Suryakumar Yadav
Follow us on

India vs West Indies: ಭಾರತ-ವೆಸ್ಟ್ ಇಂಡೀಸ್ ನಡುವಣ 3ನೇ ಏಕದಿನ ಪಂದ್ಯವು ನಾಳೆ (ಆಗಸ್ಟ್ 1) ನಡೆಯಲಿದೆ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಸರಣಿ ನಿರ್ಣಾಯಕ. ಅಂದರೆ 3 ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್​ಗಳಿಂದ ಗೆಲುವು ದಾಖಲಿಸಿದರೆ, 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 6 ವಿಕೆಟ್​ಗಳ ಜಯ ಸಾಧಿಸಿತ್ತು.

ಇದೀಗ 1-1 ಅಂತರದಿಂದ ಸರಣಿಯು ಸಮಬಲದಲ್ಲಿದ್ದು, ಹೀಗಾಗಿ ಮೂರನೇ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ. ಇತ್ತ ಈ ನಿರ್ಣಾಯಕ ಪಂದ್ಯವು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.

ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಕಲೆಹಾಕಿದ್ದು ಕೇವಲ 43 ರನ್​ಗಳು ಮಾತ್ರ. ಇನ್ನು 2ನೇ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ 9 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಇದೀಗ ಈ ಇಬ್ಬರು ಆಟಗಾರರಿಗೆ ಮೂರನೇ ಏಕದಿನ ಪಂದ್ಯದಲ್ಲೂ ಅವಕಾಶ ಸಿಗಲಿದೆ. ಆದರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಮಾತ್ರ ಮುಂಬರುವ ಸರಣಿಗಳಲ್ಲಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬಹುದು.

ಏಕೆಂದರೆ ಮುಂಬರುವ ಸರಣಿಗಳ ಮೂಲಕ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಬಹುದು. ಈ ಇಬ್ಬರೂ ಕೂಡ ಏಕದಿನ ಕ್ರಿಕೆಟ್​ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರ.

ಇದೀಗ ಟೀಮ್ ಇಂಡಿಯಾ ಏಕದಿನ ವಿಶ್ವಕಪ್​ಗಾಗಿ ನಾಲ್ಕನೇ ಕ್ರಮಾಂಕಕ್ಕೆ ಉತ್ತಮ ಬ್ಯಾಟರ್​ನ ಹುಡುಕಾಟದಲ್ಲಿದೆ. ಈ ಸ್ಥಾನವನ್ನು ತುಂಬಬಲ್ಲ ಆಟಗಾರರಾಗಿ ಇದೀಗ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗುತ್ತಿದೆ. ಆದರೆ ಇಬ್ಬರ ವೈಫಲ್ಯ ಟೀಮ್ ಮ್ಯಾನೇಜ್ಮೆಂಟ್​ನ ಚಿಂತೆಯನ್ನು ಹೆಚ್ಚಿಸಿದೆ.

ಇತ್ತ ಕೆಎಲ್ ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಿದರೆ 5ನೇ ಕ್ರಮಾಂಕದಲ್ಲಿ ಆಡುವುದು ಖಚಿತ ಎನ್ನಬಹುದು. ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.

ಸದ್ಯ ಕೆಎಲ್​ಆರ್ ಹಾಗೂ ಅಯ್ಯರ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದು, ಮುಂಬರುವ ಸರಣಿಗಳ ಮೂಲಕ ವಾಪಾಸ್ಸಾತಿ ಮಾಡುವ ವಿಶ್ವಾಸದಲ್ಲಿದ್ದಾರೆ. ಈ ಇಬ್ಬರ ಆಗಮನದೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಹಾಗೂ ಸ್ಯಾಮ್ಸನ್ ಅವರಿಗೆ ಅವಕಾಶ ಕೈ ತಪ್ಪುವುದು ಖಚಿತ ಎನ್ನಬಹುದು.

ಹೀಗಾಗಿಯೇ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವು ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್​ ಪಾಲಿಗೆ ಕೊನೆಯ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ ಕಡೆಯ ಚಾನ್ಸ್​ನಲ್ಲಿ ಈ ಇಬ್ಬರು ಆಟಗಾರರು ಮಿಂಚುವ ಮೂಲಕ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ICC Test Rankings: ಅಗ್ರ ಹತ್ತರಲ್ಲಿ ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ) , ಇಶಾನ್ ಕಿಶನ್ (ವಿಕೆಟ್ ಕೀಪರ್) , ಶುಭ್​ಮನ್ ಗಿಲ್ , ವಿರಾಟ್ ಕೊಹ್ಲಿ , ಹಾರ್ದಿಕ್ ಪಾಂಡ್ಯ , ಸೂರ್ಯಕುಮಾರ್ ಯಾದವ್ , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಕುಲ್ದೀಪ್ ಯಾದವ್ , ಉಮ್ರಾನ್ ಮಲಿಕ್ , ಮುಖೇಶ್ ಕುಮಾರ್ , ಯುಜ್ವೇಂದ್ರ ಚಾಹಲ್ , ಸಂಜು ಸ್ಯಾಮ್ಸನ್, ಜಯದೇವ್ ಉನಾದ್ಕಟ್, ರುತುರಾಜ್ ಗಾಯಕ್ವಾಡ್, ಅಕ್ಷರ್ ಪಟೇಲ್.

 

 

Published On - 5:32 pm, Mon, 31 July 23