ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತಿದ್ದ ಟೀಂ ಇಂಡಿಯಾ (India vs West Indies) ಇದೀಗ ಆ ನಂತರದ ಎರಡೂ ಪಂದ್ಯಗಳನ್ನು ಗೆದ್ದು, ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ. ಶನಿವಾರ, ಆಗಸ್ಟ್ 12 ರಂದು, ಫ್ಲೋರಿಡಾದಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಏಕಪಕ್ಷೀಯ ರೀತಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ಗಳಿಂದ ಸೋಲಿಸುವಲ್ಲಿ ಟೀಂ ಇಂಡಿಯಾ (Team India) ಯಶಸ್ವಿಯಾಗಿದೆ. ವೆಸ್ಟ್ ಇಂಡೀಸ್ ನೀಡಿದ 178 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ತನ್ನ ಆರಂಭಿಕ ಜೋಡಿಯಾದ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ (Yashasvi Jaiswal and Shubman Gill ) ಅವರ 165 ರನ್‌ಗಳ ಜೊತೆಯಾಟದಿಂದಾಗಿ ಕೇವಲ 1 ವಿಕೆಟ್ ಕಳೆದುಕೊಂಡು ಇನ್ನು 18 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಇದು ಫ್ಲೋರಿಡಾದಲ್ಲಿ ಭಾರತಕ್ಕೆ ಸತತ ಐದನೇ ಗೆಲುವಾಗಿದ್ದು, ಇದರೊಂದಿಗೆ ಆಗಸ್ಟ್ 13 ರಂದು ಇದೇ ಮೈದಾನದಲ್ಲಿ ನಡೆಯಲ್ಲಿರುವ ಸರಣಿಯ ನಿರ್ಧಾರ ಹಾಗೂ ಕೊನೆಯ ಟಿ20 ಪಂದ್ಯದಲ್ಲೂ ಈ ಗೆಲುವಿನ ಸರಣಿಯನ್ನು ಮುಂದುವರೆಸಲು ಹಾರ್ದಿಕ್ ಪಡೆ ತಯಾರಿ ನಡೆಸುತ್ತಿದೆ.
ಲಾಡರ್‌ಹಿಲ್‌ನ ಫ್ಲಾಟ್ ಪಿಚ್‌ನಲ್ಲಿ ವೆಸ್ಟ್ ಇಂಡೀಸ್ ದೊಡ್ಡ ಸ್ಕೋರ್ ಮಾಡುವುದನ್ನು ಟೀಂ ಇಂಡಿಯಾ ಬೌಲರ್‌ಗಳು ತಡೆದಿದ್ದರಿಂದ ಈ ಪಂದ್ಯವು ಟೀಂ ಇಂಡಿಯಾ ಪರ ವಾಲಿತು. ಅಲ್ಲದೆ ತಂಡದ ಫಿಲ್ಡಿಂಗ್ ಕೂಡ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಹಾಗೆಯೇ ಈ ಸರಣಿಯಲ್ಲಿ ಉತ್ತಮ ಆರಂಭ ನೀಡುವಲ್ಲಿ ನಿರಂತರವಾಗಿ ವಿಫಲವಾಗಿದ್ದ ಆರಂಭಿಕ ಜೋಡಿ, ಈ ಪಂದ್ಯದಲ್ಲಿ ಲಯಕ್ಕೆ ಬಂದಿದ್ದು ಟೀಂ ಇಂಡಿಯಾವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿತು.
IND vs WI: ಉಳಿದಿರುವ 2 ಟಿ20 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ತಿಲಕ್ ವರ್ಮಾ!
ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬೌಲಿಂಗ್ ಆರಂಭಿಸಿತು. ಎರಡನೇ ಓವರ್ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಎರಡನೇ ಓವರ್‌ನಲ್ಲಿ ಕೈಲ್ ಮೇಯರ್ಸ್ ಅವರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇನ್ನು ಟಿ20 ತಂಡದಲ್ಲಿ ಅವಕಾಶ ಪಡೆದಿದ್ದ ಶಾಯ್ ಹೋಪ್ ಬಂದ ತಕ್ಷಣ ಬಿರುಸಿನ ಬ್ಯಾಟಿಂಗ್ ಆರಂಭಿಸಿದರು. ಅಲ್ಲದೆ ಆರನೇ ಓವರ್‌ನಲ್ಲಿಯೇ ತಂಡವನ್ನು 50 ರನ್‌ಗಳ ಗಡಿ ದಾಟಿಸಿದರು. ಆದರೆ ಆ ಬಳಿಕ ಭಾರತ ಸತತ 3 ವಿಕೆಟ್ ಪಡೆದು ವಿಂಡೀಸ್ ರನ್ ವೇಗಕ್ಕೆ ಕಡಿವಾಣ ಹಾಕಿತು. ಅರ್ಷದೀಪ್ ಆರನೇ ಓವರ್‌ನಲ್ಲಿ ಬ್ರಾಂಡನ್ ಕಿಂಗ್ ಅವರನ್ನು ಬಲಿಪಡೆದರೆ, ಏಳನೇ ಓವರ್‌ನಲ್ಲಿ ನಿಕೋಲಸ್ ಪೂರನ್ ಹಾಗೂ ನಾಯಕ ರೋವ್ಮನ್ ಪೊವೆಲ್ ಅವರ ವಿಕೆಟ್ ಕಬಳಿಸುವ ಮೂಲಕ ಕುಲ್ದೀಪ್ ವಿಂಡೀಸ್ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದರು.
Two wickets in the 1st over of the spell!
Chahal in 1st T20I
Kuldeep today 💪#WIvIND #INDvWIAdFreeonFanCode pic.twitter.com/Vos81nSMbx— FanCode (@FanCode) August 12, 2023
ಕೇವಲ 57 ರನ್‌ಗಳಿಗೆ 4 ವಿಕೆಟ್ ಪತನಗೊಂಡ ವಿಂಡೀಸ್ ಇನ್ನಿಂಗ್ಸ್ ಸಂಕಷ್ಟದಲ್ಲಿರುವಂತೆ ಕಂಡರೂ ಆ ಬಳಿಕ ಶಿಮ್ರಾನ್ ಹೆಟ್ಮೆಯರ್ ಹಾಗೂ ಶಾಯ್ ಹೋಪ್ ಉತ್ತಮ ಜತೆಯಾಟ ಹಂಚಿಕೊಂಡರು. ಏಕದಿನ ಸರಣಿ ಹಾಗೂ ಕೊನೆಯ ಮೂರು ಟಿ20ಗಳಲ್ಲಿ ವಿಫಲವಾಗಿದ್ದ ಹೆಟ್ಮೆಯರ್ ಬ್ಯಾಟ್ ಕೊನೆಗೂ ಸದ್ದು ಮಾಡಿತು. ಇವರಿಬ್ಬರು 36 ಎಸೆತಗಳಲ್ಲಿ 49 ರನ್ ಸೇರಿಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಇಲ್ಲಿ ಯುಜ್ವೇಂದ್ರ ಚಹಾಲ್ ಹೋಪ್ ಅವರನ್ನು ಬಲಿಪಶು ಮಾಡಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಹೆಟ್ಮೆಯರ್ ಅತ್ಯುತ್ತಮ ಅರ್ಧಶತಕ ಸಿಡಿಸಿ ಮಿಂಚಿದರು. ಹೆಟ್ಮೆಯರ್ ಅರ್ಧಶತಕದ ಆಧಾರದ ಮೇಲೆ ವಿಂಡೀಸ್ ತಂಡವು 178 ರನ್‌ಗಳ ಟಾರ್ಗೆಟ್ ಸೆಟ್ ಮಾಡಿತು.
ಲಾಡರ್‌ಹಿಲ್‌ನ ಫ್ಲಾಟ್ ಪಿಚ್‌ನಲ್ಲಿ ಈ ಗುರಿ ತುಂಬಾ ದೊಡ್ಡದಾಗಿರಲಿಲ್ಲ. ಆದರೆ ಭಾರತಕ್ಕೆ ಉತ್ತಮ ಆರಂಭದ ಅವಶ್ಯಕತೆ ಇತ್ತು. ಏಕೆಂದರೆ ಕಳೆದ ಮೂರು ಟಿ20 ಪಂದ್ಯಗಳಲ್ಲಿ ಶುಭ್ಮನ್ ಗಿಲ್ ಸತತ ವೈಫಲ್ಯ ಅನುಭವಿಸಿದ್ದರೆ, ಅವರೊಂದಿಗಿದ್ದ ಇಶಾನ್ ಕಿಶನ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಲಯಕ್ಕೆ ಮರಳಿದ ಗಿಲ್ ಮತ್ತು ಜೈಸ್ವಾಲ್ ಇಬ್ಬರೂ ಪವರ್ ಪ್ಲೇನಲ್ಲಿಯೇ 66 ರನ್ ಬಾರಿಸಿದರು. ಈ ಜೊತೆಯಾಟ ತಂಡದ ಗೆಲುವನ್ನು ಬಹುತೇಕ ಖಚಿತಪಡಿಸಿತು. ನಂತರ ಇಬ್ಬರೂ ತಲಾ ಅರ್ಧಶತಕ ಸಿಡಿಸಿ ಮಿಂಚಿದರು.
Chennai ✅
But India are chasing another goal, this one in Florida.
And Gill is in a killer form 🔥#WIvIND #INDvWIAdFreeonFanCode pic.twitter.com/7RTb9cUAMw
— FanCode (@FanCode) August 12, 2023
ಗಿಲ್ ತಮ್ಮ ಅರ್ಧಶತಕವನ್ನು ಕೇವಲ 30 ಎಸೆತಗಳಲ್ಲಿ ಪೂರ್ಣಗೊಳಿಸಿದರೆ, ಸ್ವಲ್ಪ ಸಮಯದ ನಂತರ, ಜೈಸ್ವಾಲ್ ತಮ್ಮ ಎರಡನೇ ಟಿ0 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕವನ್ನು 33 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಇದಾದ ನಂತರ ಎಷ್ಟು ಬೇಗ ಗೆಲುವು ಸಾಧಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿತ್ತು. ಈ ಜೊತೆಯಾಟವು ಶುಭ್ಮನ್ ಗಿಲ್ ಅವರ ವಿಕೆಟ್‌ನೊಂದಿಗೆ ಮುರಿದುಬಿತ್ತು. ಆದರೆ ಆ ಹೊತ್ತಿಗೆ ಇಬ್ಬರೂ 165 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ನಂತರ ಯಶಸ್ವಿ ಹಾಗೂ ತಿಲಕ್ ವರ್ಮಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:26 am, Sun, 13 August 23