IND vs WI: ಒಂದೇ ಕೈಯಲ್ಲಿ ಸಿಕ್ಸರ್! ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಪಂತ್​ರನ್ನು ನೆನಪಿಸಿದ ಕಿಶನ್; ವಿಡಿಯೋ ನೋಡಿ

|

Updated on: Jul 24, 2023 | 6:10 AM

Ishan Kishan’s one-handed six: ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ ಕೇವಲ 34 ಎಸೆತಗಳಲ್ಲಿ 52 ರನ್ ಬಾರಿಸಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರೈಸಿದರು.

IND vs WI: ಒಂದೇ ಕೈಯಲ್ಲಿ ಸಿಕ್ಸರ್! ಅರ್ಧಶತಕದ ಇನ್ನಿಂಗ್ಸ್​ನಲ್ಲಿ ಪಂತ್​ರನ್ನು ನೆನಪಿಸಿದ ಕಿಶನ್; ವಿಡಿಯೋ ನೋಡಿ
ಇಶಾನ್ ಕಿಶನ್
Follow us on

ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಭಾರತ (India vs West Indies) ಟೆಸ್ಟ್ ತಂಡದಲ್ಲಿ ಚೊಚ್ಚಲ ಅವಕಾಶ ಗಿಟ್ಟಿಸಿಕೊಂಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್ (Ishan Kishan) ಕೇವಲ 34 ಎಸೆತಗಳಲ್ಲಿ 52 ರನ್ ಬಾರಿಸಿ ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಪೂರೈಸಿದ್ದಾರೆ. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್​ಗೆ ಹಿನ್ನಡೆಯುಂಟಾದಂತಹ ಸಮಯದಲ್ಲಿ ಬ್ಯಾಟಿಂಗ್​ ಆರ್ಡರ್​ನಲ್ಲಿ ಮುಂಬಡ್ತಿ ಪಡೆದ ಕಿಶನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರಿಂದ ಟೀಂ ಇಂಡಿಯಾ (Team India) ಮಳೆ ನಡುವೆಯು 181 ರನ್ ಕಲೆ ಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ಸಾಧ್ಯವಾಯಿತು. ತಮ್ಮ ಇನ್ನಿಂಗ್ಸ್​ನಲ್ಲಿ 4 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಿಡಿಸಿದ ಕಿಶನ್, ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸುವ ಮೂಲಕ, ತಂಡದ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್​ರನ್ನು (Rishabh Pant) ನೆನಪಿಸಿದರು.

ಭೀಕರ ಕಾರು ಅಪಘಾತದಲ್ಲಿ ಇಂಜುರಿಗೊಳಗಾಗಿ ಕಳೆದ 7 ತಿಂಗಳಿನಿಂದ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಹೀಗಾಗಿ ಏಕಾಂಗಿಯಾಗಿ ಪಂದ್ಯದ ದಿಕ್ಕನೇ ಬದಲಿಸುವ ಸಾಮಥ್ಯ್ರವಿರುವ ಪಂತ್ ಅಲಭ್ಯತೆ ಟೀಂ ಇಂಡಿಯಾವನ್ನು ಬಹಳಷ್ಟು ಕಾಡಿದೆ. ಪಂತ್ ಅಲಭ್ಯತೆಯ ನಷ್ಟವನ್ನು ಡಬ್ಲ್ಯುಟಿಸಿ ಫೈನಲ್​ನಲ್ಲೂ ಟೀಂ ಇಂಡಿಯಾ ಅನುಭವಿಸಿತ್ತು. ವಿದೇಶಿ ನೆಲದಲ್ಲಿ ಭಾರತಕ್ಕೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದ ಪಂತ್​ ಸ್ಥಾನಕ್ಕೆ ಬಂದಿದ್ದ ಕೆಎಸ್ ಭರತ್ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಹೀಗಾಗಿ ಭರತ್​ರನ್ನು ತಂಡದಿಂದ ಕೈಬಿಟ್ಟಿರುವ ಆಯ್ಕೆ ಮಂಡಳಿ, ಬ್ಯಾಟಿಂಗ್​ನಲ್ಲಿ ಪಂತ್​ರನ್ನೇ ಹೊಲುವ ಕಿಶನ್​ಗೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ನೀಡಿತ್ತು.

IND vs WI 4th Day: 4ನೇ ದಿನದಾಟ ಅಂತ್ಯ; ಕೊನೆಯ ದಿನ ವಿಂಡೀಸ್ ಗೆಲುವಿಗೆ ಬೇಕು 289 ರನ್

ಡೊಮಿನಿಕಾದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಹೆಚ್ಚಿನ ಬ್ಯಾಟಿಂಗ್ ಅವಕಾಶ ಸಿಗದೇ ಕೇವಲ 1 ರನ್ ಬಾರಿಸಿದ್ದ ಕಿಶನ್​ಗೆ ಎರಡನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚಿನ ಸಮಯ ಸಿಕ್ಕಿತು. ಮೊದಲ ಇನಿಂಗ್ಸ್‌ನಲ್ಲಿ ಅದರ ಲಾಭ ಪಡೆಯಲು ವಿಫಲರಾಗಿದ್ದ ಕಿಶನ್, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ, ಚೊಚ್ಚಲ ಟೆಸ್ಟ್ ಅರ್ಧಶತಕ ಸಿಡಿಸಿದರು.

ಪಂತ್​ರಂತೆ ಒಂದೇ ಕೈಯಲ್ಲಿ ಸಿಕ್ಸರ್

ಪಂದ್ಯದ ನಾಲ್ಕನೇ ದಿನದಂದು, ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ವೇಗವಾಗಿ ರನ್ ಗಳಿಸಲು ಇಶಾನ್ ಕಿಶನ್ ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ನೀಡಿತು. ಎರಡನೇ ಸೆಷನ್‌ನಲ್ಲಿ ಮಳೆಯಿಂದಾಗಿ ಆಟ ಹೆಚ್ಚು ಸಮಯ ನಡೆಯಲ್ಲಿಲ್ಲ. ಆದರೆ ಮೂರನೇ ಸೆಷನ್‌ನಲ್ಲಿ ಆಟ ಆರಂಭವಾದಾಗ ಇಶಾನ್ ರನ್‌ಗಳ ಮಳೆಗರೆದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ಕಿಶನ್, ಎರಡು ಸತತ ಸಿಕ್ಸರ್‌ಗಳೊಂದಿಗೆ ಕೇವಲ 33 ಎಸೆತಗಳಲ್ಲಿ ಟೆಸ್ಟ್ ವೃತ್ತಿಜೀವನದಲ್ಲಿ ಅರ್ಧಶತಕದ ಖಾತೆಯನ್ನು ತೆರೆದರು.

ಇಶಾನ್ ಕಿಶನ್ ಅರ್ಧಶತಕ ಪೂರೈಸಿದ ತಕ್ಷಣ ನಾಯಕ ರೋಹಿತ್ ಶರ್ಮಾ, 181 ರನ್​ಗಳಿಗೆ ಭಾರತ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ ವೆಸ್ಟ್ ಇಂಡೀಸ್ ಗೆಲುವಿಗೆ 365 ರನ್​ಗಳ ಗುರಿ ನೀಡಲಾಗಿದೆ.

ಕಿಶನ್​ ಬ್ಯಾಟ್ ಮೇಲೆ ಪಂತ್ ಹೆಸರು

ಕಿಶನ್​​ರ ಈ ಇನ್ನಿಂಗ್ಸ್‌ನ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಇಶಾನ್ ಬ್ಯಾಟಿಂಗ್ ಮಾಡುತ್ತಿದ್ದ ಬ್ಯಾಟ್ ಮೇಲೆ ಆರ್​ಪಿ 17 ಎಂದು ಬರೆಯಲಾಗಿತ್ತು. ಆರ್​ಪಿ ಎಂದರೆ ರಿಷಭ್ ಪಂತ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಅಲ್ಲದೆ, 17ನೇ ನಂಬರ್​ ಜೆರ್ಸಿಯನ್ನು ತೊಡುವುದು ಸಹ ರಿಷಭ್ ಪಂತ್ ಅವರೆ. ವಾಸ್ತವವಾಗಿ, ಇಶಾನ್ ಪ್ರಸಿದ್ಧ ಎಸ್​​ಜಿ ಬ್ರಾಂಡ್ ಬ್ಯಾಟ್‌ನಲ್ಲಿ ಆಡುತ್ತಾರೆ. ಪಂತ್ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಕಂಪನಿಯು ರಿಷಭ್ ಪಂತ್ ಅವರ ಹೆಸರಿನ ಮೊದಲಕ್ಷರಗಳು (ಆರ್ ಮತ್ತು ಪಿ) ಮತ್ತು ಜರ್ಸಿ ಸಂಖ್ಯೆಯನ್ನು ಕೆಲವು ವಿಶೇಷ ಬ್ಯಾಟ್‌ಗಳ ಮೇಲೆ ಮುದ್ರಿಸಿ ಹೊರತರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:09 am, Mon, 24 July 23