IND vs WI: ಹಾರ್ದಿಕ್ ಹಾಕಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ ಪೂರನ್..! ವಿಡಿಯೋ ನೋಡಿ

|

Updated on: Aug 14, 2023 | 6:53 AM

IND vs WI: ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ 6 ವರ್ಷಗಳ ನಂತರ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ವೆಸ್ಟ್ ಇಂಡೀಸ್ ಟೆಸ್ಟ್ ಹಾಗೂ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದ್ದರೆ, ಅದೇ ತಂಡದ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್, ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ನೀಡಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

IND vs WI: ಹಾರ್ದಿಕ್ ಹಾಕಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ ಪೂರನ್..! ವಿಡಿಯೋ ನೋಡಿ
ಹಾರ್ದಿಕ್ ಪಾಂಡ್ಯ, ನಿಕೋಲಸ್ ಪೂರನ್
Follow us on

ವೆಸ್ಟ್ ಇಂಡೀಸ್ ಪ್ರವಾಸವನ್ನು ಕ್ಲೀನ್ ಸ್ವೀಪ್ ಮಾಡುವ ಭಾರತದ (West Indies vs India) ಯೋಜನೆ ಕೈಕೊಟ್ಟಿದೆ. ಈಗಾಗಲೇ ಟೆಸ್ಟ್ ಹಾಗೂ ಏಕದಿನ ಸರಣಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ (Team India) ಟಿ20 ಸರಣಿಯಲ್ಲಿ ಆಘಾತಕಾರಿ ಸೋಲನುಭವಿಸಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಐದು ಪಂದ್ಯಗಳ ಸರಣಿಯನ್ನು 2-3 ಅಂತರದಿಂದ ಕಳೆದುಕೊಂಡಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸುವ ಮೂಲಕ 6 ವರ್ಷಗಳ ನಂತರ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಇದರೊಂದಿಗೆ ವೆಸ್ಟ್ ಇಂಡೀಸ್, ಟೆಸ್ಟ್ ಹಾಗೂ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದ್ದರೆ, ಅದೇ ತಂಡದ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ (Nicholas Pooran), ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ನೀಡಿದ ಸವಾಲಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

ವಾಸ್ತವವಾಗಿ ಮೂರನೇ ಟಿ20 ಪಂದ್ಯವನ್ನು ಗೆದ್ದ ಬಳಿಕ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ, ವಿಂಡೀಸ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ನೇರವಾಗಿ ಟಾರ್ಗೆಟ್ ಮಾಡಿ ಮಾತನಾಡಿದ್ದರು. ಅಲ್ಲದೆ ಪೂರನ್ ಧೈರ್ಯವಿದ್ದರೆ ನನ್ನ ವಿರುದ್ಧ ರನ್ ಗಳಿಸಿ ತೋರಿಸಲಿ ಎಂಬರ್ಥದಲ್ಲಿ ಮಾತನಾಡಿದ್ದರು. ಟೀಂ ಇಂಡಿಯಾ ನಾಯಕ ಹಾರ್ದಿಕ್ ಹೀಗೆ ಹೇಳುತ್ತಿರುವುದನ್ನು ಪೂರನ್ ಅಲ್ಲೆ ನಿಂತು ಕೇಳಿಸಿಕೊಂಡಿದ್ದರು.

ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಹಾರ್ದಿಕ್ ಪಾಂಡ್ಯ ಹಾಕಿದ್ದ ಸವಾಲು ನಾಲ್ಕನೇ ಟಿ20 ಪಂದ್ಯದಲ್ಲಿ ಒಂದು ಹಂತಕ್ಕೆ ಫಲ ಕೂಡ ನೀಡಿತು. ಹಾರ್ದಿಕ್ ಸವಾಲಿನ ನಡುವೆಯೂ ಮೂರನೇ ಟಿ20 ಪಂದ್ಯದಲ್ಲಿ ಪೂರನ್ ಕೇವಲ 1 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದರು. ಹಾಗಾಗಿ ನಾಯಕ ಪಾಂಡ್ಯ ಹೂಡಿದ ತಂತ್ರ ಯಶಕೊಟ್ಟಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಕೊನೆಯ ಟಿ20 ಪಂದ್ಯದಲ್ಲಿ ಪಾಂಡ್ಯ ಹಾಕಿದ ಸವಾಲಿಗೆ ಪೂರನ್ ತಕ್ಕ ಉತ್ತರ ನೀಡಿದರು.

IND vs WI: 2016 ರ ಬಳಿಕ ಭಾರತದೆದುರು ಮೊದಲ ಸರಣಿ ಗೆದ್ದ ವೆಸ್ಟ್ ಇಂಡೀಸ್..!

ಟೀಂ ಇಂಡಿಯಾ ನೀಡಿದ 165 ರನ್​ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್​ಗೆ ಉತ್ತಮ ಆರಂಭ ಸಿಗಲಿಲ್ಲ. ಕೈಲ್ ಮೇಯರ್ಸ್ ಮತ್ತೊಮ್ಮೆ ಅರ್ಷದೀಪ್​ಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ 10 ರನ್​ಗಳಿಗೆ ಪೆವಿಲಿಯನ್‌ ಸೇರಿಕೊಂಡರು. ಆದರೆ ಆ ಬಳಿಕ ಬಂದ ಪೂರನ್ ತಮ್ಮ ಎಂದಿನ ಶೈಲಿಯಂತೆ ಬ್ಯಾಟ್ ಬೀಸಿದರು. ಬಂದ ಕೂಡಲೇ ಮೂರು ಸಿಕ್ಸರ್ ಸಿಡಿಸಿದ ಪೂರನ್ ತಂಡದ ಗೆಲುವಿನ ಮುನ್ಸೂಚನೆ ನೀಡಿದರು. ಈ ಮೂರು ಸಿಕ್ಸರ್​ಗಳ ವಿಶೇಷತೆ ಏನೆಂದರೆ, ಈ ಮೂರು ಸಿಕ್ಸರ್​ಗಳಲ್ಲಿ ಎರಡು ಸಿಕ್ಸರ್​ ತನ್ನ ಮುಂದೆ ಸವಾಲು ಹಾಕಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಬಂದವು. ಅದರಲ್ಲೂ ಪೂರನ್ ಬ್ಯಾಕ್ ಟು ಬ್ಯಾಕ್ ಎಸೆತದಲ್ಲಿ ಈ ಎರಡು ಸಿಕ್ಸರ್​ಗಳನ್ನು ಸಿಡಿಸಿದ್ದು ಪಾಂಡ್ಯ ಹಾಕಿದ ಸವಾಲಿಗೆ ನೀಡಿದ ಉತ್ತರ ಎಂಬುದು ಸ್ಪಷ್ಟವಾಗಿತ್ತು.

ಇದೀಗ ಟೀಂ ಇಂಡಿಯಾ ಟಿ20 ಸರಣಿ ಸೋತ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಈ ರೀತಿಯಾಗಿ ನಾಲಿಗೆ ಹರಿಬಿಟ್ಟು ಟ್ರೋಲಿಗರಿಗೆ ತುತ್ತಾಗುತ್ತಿರುವುದು ಇದೇ ಮೊದಲಲ್ಲ. ಈ ಟಿ20 ಸರಣಿ ಆರಂಭಕ್ಕೂ ಮುನ್ನ ಮಾತನಾಡಿದ್ದ ಹಾರ್ದಿಕ್, ನಾವು ಇನ್ನೂ ಎರಡು ತಂಡಗಳನ್ನು ಕಟ್ಟಬಹುದಾಗಿದೆ. ಅಲ್ಲದೆ ಆ ತಂಡಗಳಿಗೆ ವಿಶ್ವದ ಯಾವುದೇ ಟೂರ್ನಿಯನ್ನು ಗೆಲ್ಲುವ ಸಾಮಥ್ಯ್ರವಿದೆ ಎಂದು ಹಾರ್ದಿಕ್ ಹೇಳಿದ್ದರು. ಇದೀಗ ಹಾರ್ದಿಕ್ ಅವರ ಆ ಹೇಳಿಕೆಯು ಸಾಕಷ್ಟು ಟ್ರೋಲ್ ಆಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 am, Mon, 14 August 23