ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ರಾಂತಿಯಿಂದ ಎಚ್ಚೆತ್ತು ಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಗೆ ಟೀಮ್ ಇಂಡಿಯಾವನ್ನು (Team India) ಪ್ರಕಟ ಮಾಡಿದೆ. ಕೆಲವೊಂದು ಅಚ್ಚರಿಯ ಬೆಳವಣಿಗೆಗಳು ಭಾರತ ತಂಡದಲ್ಲಿ ನಡೆದಿದ್ದು, ಟೆಸ್ಟ್ ತಂಡದಿಂದ ಚೇತೇಶ್ವರ್ ಪೂಜಾರ ಅವರನ್ನು ಕೈಬಿಡಲಾಗಿದೆ. ರುತುರಾಜ್ ಗಾಯಕ್ವಾಡ್ ಆಯ್ಕೆ ಆಗಿದ್ದು, ಅಜಿಂಕ್ಯ ರಹಾನೆಗೆ ಉಪ ನಾಯಕನ ಪಟ್ಟ ನೀಡಲಾಗಿದೆ. ಜುಲೈ 12 ರಿಂದ ಡೊಮಿನಿಕಾದ ವಿಂಡ್ಸರ್ ಪಾರ್ಕ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನ ರೋಹಿತ್ (Rohit Sharma) ಪಡೆ ಎರಡು ವಾರ್ಮ್-ಅಪ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.
ಬಿಸಿಸಿಐ ಈ ಹಿಂದೆ ಯಾವುದೇ ಅಭ್ಯಾಸ ಪಂದ್ಯ ಇರುವುದಿಲ್ಲ ಎಂದು ಹೇಳಿತ್ತು. ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಬಳಿಕ ನೇರವಾಗಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದೆ ಎನ್ನಲಾಗಿತ್ತು. ಆದರೆ, ಡಬ್ಲ್ಯೂಟಿಸಿ ಫೈನಲ್ನಲ್ಲಿ ಸೋತ ಬಳಿಕ ಎಚ್ಚೆತ್ತು ಕೊಂಡಿರುವ ಮ್ಯಾನೇಜ್ಮೆಂಟ್ ಕೆರಿಬಿಯನ್ ವಾತಾವರಣಕ್ಕೆ ಹೊಂದಿಕೊಳ್ಳಲು ಎರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ. ಹೀಗಾಗಿ ಜುಲೈ 2 ರಂದು ಟೀಮ್ ಇಂಡಿಯಾದ ಮೊದಲ ಬ್ಯಾಚ್ ವಿಂಡೀಸ್ ನಾಡಿಗೆ ಪ್ರಯಾಣ ಬೆಳೆಸಲಿದೆ.
IND vs WI: ತಂಡದಿಂದಲೇ ಹೊರಬಿದ್ದಿದ್ದ ರಹಾನೆ ಇದೀಗ ಟೀಂ ಇಂಡಿಯಾದ ಉಪನಾಯಕ..!
ಬಾರ್ಬಡೋಸ್‌ನಲ್ಲಿ ನಡೆಯಲಿರುವ ವಾರ್ಮ್-ಅಪ್ ಮ್ಯಾಚ್ ಯಾವ ದಿನಾಂಕದಂದು ನಡೆಯಲಿದೆ ಎಂಬ ಬಗ್ಗೆ ವೇಳಾಪಟ್ಟಿ ಇನ್ನಷ್ಟೆ ಪ್ರಕಟವಾಗಬೇಕಿದೆ. ಸದ್ಯ ಬಿಸಿಸಿಐ ಟೆಸ್ಟ್ ಸರಣಿಗೆ ಪ್ರಕಟಿಸಿರುವ 16 ಸದಸ್ಯರ ಪೈಕಿ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್ ಹೊಸ ಮುಖಗಳಾಗಿದ್ದಾರೆ. ಇವರು ಅಭ್ಯಾಸ ಪಂದ್ಯದಲ್ಲಿ ಆಡಲಿದ್ದು, ಉತ್ತಮ ಪ್ರದರ್ಶನ ತೋರಿದರೆ ಮೊದಲ ಟೆಸ್ಟ್ನ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಜೊತೆಗೆ ಇಶಾನ್ ಕಿಶನ್ಗೂ ಇದೊಂದು ಉತ್ತಮ ವೇದಿಕೆ ಆಗಿದೆ.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.
ಟೆಸ್ಟ್ ಜೊತೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಬಿಸಿಸಿಐ ತಂಡವನ್ನು ಪ್ರಕಟ ಮಾಡಿದೆ. ತಂಡದ ಉಪನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಲಾಗಿದ್ದು, ತಂಡದಲ್ಲಿ ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಹಾಗೂ ಮುಖೇಶ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆಯೇ ವೇಗಿ ಜಯದೇವ್ ಉನದ್ಕಟ್ ಬರೋಬ್ಬರಿ 10 ವರ್ಷಗಳ ನಂತರ ಏಕದಿನ ತಂಡಕ್ಕೆ ಮರಳಿದ್ದಾರೆ. ಟೀಮ್ ಇಂಡಿಯಾ ಮುಂದಿನ ತಿಂಗಳು ಜುಲೈ 27 ರಿಂದ ಆಗಸ್ಟ್ 1 ರವರೆಗೆ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಯದೇವ್ ಉನದ್ಕಟ್,ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ