- Kannada News Photo gallery Cricket photos IND vs WI Ajinkya Rahane back as India Test vice captain for West Indies series
IND vs WI: ತಂಡದಿಂದಲೇ ಹೊರಬಿದ್ದಿದ್ದ ರಹಾನೆ ಇದೀಗ ಟೀಂ ಇಂಡಿಯಾದ ಉಪನಾಯಕ..!
Ajinkya Rahane Vice-Captain: ಕೇವಲ 1 ತಂಗಳ ಹಿಂದೆ, ಅಂದರೆ ಐಪಿಎಲ್ಗೂ ಮುನ್ನ ಟೀಂ ಇಂಡಿಯಾದಲ್ಲಿ ಅಜಿಂಕ್ಯ ರಹಾನೆ ಯುಗ ಮುಗಿದೇ ಹೋಯಿತು ಎಂದು ಮಾತನಾಡಿಕೊಳ್ಳುತ್ತಿದ್ದವರು ಇಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
Updated on: Jun 23, 2023 | 5:34 PM

ಕೇವಲ 1 ತಂಗಳ ಹಿಂದೆ, ಅಂದರೆ ಐಪಿಎಲ್ಗೂ ಮುನ್ನ ಟೀಂ ಇಂಡಿಯಾದಲ್ಲಿ ಅಜಿಂಕ್ಯ ರಹಾನೆ ಯುಗ ಮುಗಿದೇ ಹೋಯಿತು ಎಂದು ಮಾತನಾಡಿಕೊಳ್ಳುತ್ತಿದ್ದವರು ಇಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಟೀಂ ಇಂಡಿಯಾ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ರಹಾನೆ ಇದೀಗ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ವಾಸ್ತವವಾಗಿ ಕಳಪೆ ಫಾರ್ಮ್‌ನಿಂದಾಗಿ ರಹಾನೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಂಡಕ್ಕೆ ಮರಳುವ ಮೊದಲು, ರಹಾನೆ 2022 ರಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಟೆಸ್ಟ್ ಆಡಿದ್ದರು. ಇದಾದ ನಂತರ ಶ್ರೀಲಂಕಾ ವಿರುದ್ಧ ತವರಿನಲ್ಲಿ ಆಡಿದ ಸರಣಿಯಲ್ಲಿ ರಹಾನೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

ಆದರೆ ಛಲ ಬಿಡದ ರಹಾನೆ ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆ ಬಳಿಕ ಕೇವಲ ಟೆಸ್ಟ್ ಬ್ಯಾಟ್ಸ್ಮನ್ ಎಂಬ ಹಣೆಪಟ್ಟಿ ಪಡೆದಿದ್ದ ರಹಾನೆ ಐಪಿಎಲ್‌ನಲ್ಲೂ ಅಬ್ಬರಿಸಿದ್ದರು. ಪರಿಣಾಮ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಂಡದಲ್ಲಿ ಸ್ಥಾನ ಪಡೆದರು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಆಡಿದ ರಹಾನೆ 89 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರ ಬ್ಯಾಟ್‌ನಿಂದ 46 ರನ್‌ಗಳು ಹೊರಬಂದವು.

ಈ ಮೂಲಕ ನನ್ನಲ್ಲಿ ಇನ್ನು ಕ್ರಿಕೆಟ್ ಹಸಿವು ಇದೆ ಎಂಬುದನ್ನು ರಹಾನೆ ಸಾಭೀತುಪಡಿಸಿದ್ದರು. ಹೀಗಾಗಿ ರಹಾನೆ ಅವರನ್ನು ವಿಂಡೀಸ್ ಪ್ರವಾಸದಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ರಹಾನೆ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದಾಗ ತಂಡದ ಉಪನಾಯಕರಾಗಿದ್ದರು.

ಅಲ್ಲದೆ ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ 2020-21ರಲ್ಲಿ ಆಸ್ಟ್ರೇಲಿಯಾವನ್ನು ಅವರ ಮಣ್ಣಿನಲ್ಲೇ ಟೆಸ್ಟ್ ಸರಣಿಯಲ್ಲಿ ಸೋಲಿಸಿತು. ಆ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕೊಹ್ಲಿ ಭಾರತಕ್ಕೆ ಮರಳಿದರು. ಹೀಗಾಗಿ ರಹಾನೆಗೆ ತಂಡದ ನಾಯಕತ್ವವಹಿಸಲಾಗಿತ್ತು.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರಹಾನೆ ಟೀಂ ಇಂಡಿಯಾ ನಾಯಕತ್ವದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಕೆಲವು ದಿನಗಳ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರೋಹಿತ್ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆಯಬಹುದು ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಹೀಗಾಗಿ ಒಂದು ವೇಳೆ ರೋಹಿತ್ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದರೆ, ರಹಾನೆ ಮತ್ತೊಮ್ಮೆ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.




