ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಸಂಜೆ 7:30 ಕ್ಕೆ ಆರಂಭವಾಗಲಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಲ್ಲಿರುವ ಟೀಂ ಇಂಡಿಯಾ (Team India), ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ. ಹೀಗಾಗಿ ಎರಡು ತಂಡಗಳ ಪ್ರದರ್ಶನದ ನಡುವಿನ ವ್ಯತ್ಯಾಸವನ್ನು ವಿವರಿಸಲು ಈ ಉದಾಹರಣೆ ಸಾಕು. ಆದರೆ ತವರಿನಲ್ಲಿ ಕೆರಿಬಿಯನ್ನರನ್ನು ಅಷ್ಟು ಹಗುರವಾಗಿ ಪರಿಗಣಿಸುವಂತಿಲ್ಲ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನೇ ಬದಲಿಸುವ ಶಕ್ತಿಯಿರುವ ವಿಂಡೀಸ್ ದಾಂಡಿಗರನ್ನು ಟೀಂ ಇಂಡಿಯಾ ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ನಾಯಕ ಹಾಗೂ ಆಟಗಾರನಾಗಿ ಸಂಕಷ್ಟದ ಸಮಯವನ್ನು ಎದುರಿಸುತ್ತಿರುವ ರೋಹಿತ್‌ಗೆ ಈ ಸರಣಿ ಮಾಡು ಇಲ್ಲವೆ ಮಡಿ ಸರಣಿಯಾಗಿದೆ. ಏಕೆಂದರೆ ರೋಹಿತ್ ಶರ್ಮಾ (Rohit Sharma) ನಾಯಕನಾಗಿ ಒಂದು ತಿಂಗಳ ಹಿಂದಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ (WTC Final) ಸೋತಿದ್ದಾರೆ. ಅದಕ್ಕೂ ಮುನ್ನ ಅವರ ತಂಡ ಐಪಿಎಲ್‌ನಲ್ಲಿ (IPL 2023) ನಾಕೌಟ್ ಪಂದ್ಯದಲ್ಲಿ ಸೋತು ಬರಿಗೈಯಲ್ಲಿ ಮರಳಿತ್ತು.
ನಾವು ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬಗ್ಗೆ ಮಾತನಾಡುವುದಾದರೆ , ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ, ರೋಹಿತ್ ಶರ್ಮಾ ಅವರ ಬ್ಯಾಟ್ ರನ್ ಕಲೆಹಾಕಲಿಲ್ಲ. ಇದಕ್ಕೂ ಮುನ್ನ ಇಡೀ ಐಪಿಎಲ್‌ನಲ್ಲೂ ಅವರ ಬ್ಯಾಟ್ ಬಹುತೇಕ ಮೌನವಾಗಿತ್ತು. ಹೀಗಾಗಿ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ರೋಹಿತ್ ಆಟ ಕಳೆಗುಂದಿದೆ. ಒಂದು ದೃಷ್ಟಿಕೋನದಿಂದ, ಕೆರಿಬಿಯನ್ ಪ್ರವಾಸವು ಅವರಿಗೆ ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಕಳೆದುಹೋದ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ದೊಡ್ಡ ಅವಕಾಶವಾಗಿದೆ.
Asia Cup 2023: ಏಷ್ಯಾಕಪ್ ಆಡಲು ಪಾಕ್ ನೆಲಕ್ಕೆ ಕಾಲಿಡುತ್ತಾ ಭಾರತ? ಸ್ಪಷ್ಟನೆ ನೀಡಿದ ಐಪಿಎಲ್ ಅಧ್ಯಕ್ಷ
ಸೋಮವಾರ ಭಾರತ ತಂಡದ ನೆಟ್ ಪ್ರಾಕ್ಟೀಸ್ನಿಂದ ಬಂದ ದೊಡ್ಡ ಸುದ್ದಿಯೆಂದರೆ ರೋಹಿತ್ ಶರ್ಮಾ ನೆಟ್ಸ್ ನಲ್ಲಿ ಇರಲಿಲ್ಲ. ಆದರೆ, ಸೋಮವಾರದ ಅಭ್ಯಾಸ ‘ಐಚ್ಛಿಕ’ ಆಗಿದ್ದರಿಂದ ರೋಹಿತ್ ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ. ಐಚ್ಛಿಕ ಅಭ್ಯಾಸದ ನಿಯಮದ ಪ್ರಕಾರ ಯಾವುದೇ ಬ್ಯಾಟ್ಸ್‌ಮನ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವುದು ಅಥವಾ ಬಿಡುವುದು ಆತನ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದ್ದಾಗಿದೆ. ಆದರೆ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರೋಹಿತ್ ಅಭ್ಯಾಸಕ್ಕೆ ಗೈರಾಗುವುದು ತರವಲ್ಲ.
ರೋಹಿತ್‌ಗೆ ಈ ಹಿಂದೆ ವೆಸ್ಟ್ ಇಂಡೀಸ್‌ನಲ್ಲಿ ಆಡಿದ ಅನುಭವವೂ ಇಲ್ಲ. ಹೀಗಾಗಿ ಹೆಚ್ಚು ಅಭ್ಯಾಸ ಮಾಡುವುದು ರೋಹಿತ್‌ಗೆ ಹೆಚ್ಚು ನೆರವಾಗಲಿದೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ, ರೋಹಿತ್ ಶರ್ಮಾ ವೆಸ್ಟ್ ಇಂಡೀಸ್‌ನಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅವರ ಪ್ರದರ್ಶನ ಸಾಧಾರಣವಾಗಿದೆ. 2016ರ ಸರಣಿಯ ಪಂದ್ಯದಲ್ಲಿ ರೋಹಿತ್ ಕೇವಲ 9 ಮತ್ತು 41 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಆದರೆ ಎರಡನೇ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಇನ್ನೂ ಸ್ವಲ್ಪ ಸಮಯ ನೆಟ್ಸ್‌ನಲ್ಲಿ ಕಳೆದಿದ್ದರೆ ಉತ್ತಮವಾಗಿರುತ್ತಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Wed, 12 July 23